ರಾಮನಗರ: ಚನ್ನಪಟ್ಟಣ ಹಾಗೂ ರಾಮನಗರ ತಾಲ್ಲೂಕುಗಳ ಗಡಿಭಾಗದಲ್ಲಿ ಕಸ ವಿಲೇವಾರಿ ಘಟಕ ಆರಂಭ ವಿಷಯಕ್ಕೆ ಮತ್ತೆ ಜೀವ ಬಂದಿದ್ದು, ಸ್ಥಳೀಯರಿಂದ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ಸುಭಾಷ್ ಆಡಿ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದು, ಕಣ್ವ ಸುತ್ತಮುತ್ತ ಕಸ ವಿಲೇವಾರಿಯ ಮುನ್ಸೂಚನೆ ನೀಡಿದ್ದಾರೆ. ಈ ಹಿಂದೆ ಕಣ್ವ ಹಾಗೂ ಚಾಮನಹಳ್ಳಿ ಗ್ರಾಮಕ್ಕೆ ಸೇರಿದ ಗೋಮಾಳದಲ್ಲಿ ಕಸ ಸುರಿಯಲಾಗಿತ್ತು. ಇದರ ವಿರುದ್ಧ ಸ್ಥಳೀಯರು ವಿರೋಧ ವ್ಯಕ್ತಪಡಿಸಿ 2015ರಲ್ಲಿ ಹೋರಾಟ ನಡೆಸಿದ ಕಾರಣಕ್ಕೆ ಜಿಲ್ಲಾಡಳಿತವು ಕಸ ವಿಲೇವಾರಿಯನ್ನು ಸ್ಥಗಿತಗೊಳಿಸಿತ್ತು.
ಸ್ಥಳೀಯರ ವಿರೋಧ
ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರದಲ್ಲಿನ ಕಸ ವಿಲೇವಾರಿಗಾಗಿ ಜಿಲ್ಲಾಡಳಿತವು ಕಣ್ವ ಬಳಿ 50 ಎಕರೆ ಗೋಮಾಳ ಭೂಮಿ ಮಂಜೂರು ಮಾಡಿದ್ದು, 2011ರಿಂದ ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಅದರಿಂದ ಸುತ್ತಲಿನ ಪರಿಸರ ಹಾಳಾಗುತ್ತಿದೆ. ಬೀದಿ ನಾಯಿಗಳು, ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿಬಂದವು. ಅಂತರ್ಜಲವೂ ಕಲುಷಿತಗೊಳ್ಳುವ ಭೀತಿ ಎದುರಾಗಿತ್ತು. ಈ ಎಲ್ಲ ಕಾರಣಗಳಿಂದ ಕಸ ವಿಲೇವಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಸಾರ್ವಜನಿಕ ಹೋರಾಟವಾಗಿ ರೂಪುಗೊಂಡಿತು. ಜನರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತವು ಇಲ್ಲಿ ತ್ಯಾಜ್ಯ ವಿಲೇವಾರಿಯನ್ನು ಬಂದ್ ಮಾಡಿತ್ತು.
ಭೇಟಿ ರದ್ದು: ನ್ಯಾಯಮೂರ್ತಿ ಸುಭಾಷ್ ಅಡಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಜೊತೆಗೆ ಕಣ್ವ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮವೂ ಇತ್ತು. ಆದರೆ ಕಡೆಯ ಕ್ಷಣದಲ್ಲಿ ರದ್ದಾಯಿತು. ಕಸ ವಿಲೇವಾರಿ ಘಟಕದ ಪುನರಾರಂಭದ ಸುದ್ದಿ ಕೇಳಿ ಗಾಬರಿಗೊಂಡಿದ್ದ ಸ್ಥಳೀಯರು ಶುಕ್ರವಾರ ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.