ADVERTISEMENT

ಪ್ರಾಚೀನ ಜಾನಪದ ವಸ್ತುಗಳ ಸಂಗ್ರಹ, ಕೊಡುಗೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 14:13 IST
Last Updated 11 ಅಕ್ಟೋಬರ್ 2018, 14:13 IST
ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದಲ್ಲಿ ಸಂಗ್ರಹಿಸಿರುವ ಪ್ರಾಚೀನ ಜಾನಪದ ವಸ್ತುಗಳು
ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದಲ್ಲಿ ಸಂಗ್ರಹಿಸಿರುವ ಪ್ರಾಚೀನ ಜಾನಪದ ವಸ್ತುಗಳು   

ಚನ್ನಪಟ್ಟಣ: ತಾಲ್ಲೂಕಿನ ಅಬ್ಬೂರು ಗ್ರಾಮದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್‌ ಪದಾಧಿಕಾರಿಗಳು ಯುವ ಕವಿ ಎಂ.ಶ್ರೀನಿವಾಸು ಅವರ ಮನೆಯಲ್ಲಿದ್ದ ಪ್ರಾಚೀನ ಜಾನಪದ ವಸ್ತುಗಳನ್ನು ಸಂಗ್ರಹ ಮಾಡಿ ರಾಮನಗರ ಬಳಿಯ ಜಾನಪದ ಲೋಕಕ್ಕೆ ಕೊಡುಗೆಯಾಗಿ ನೀಡಿದರು.

ವಿಶೇಷ ಕೆತ್ತನೆಯುಳ್ಳ ದೀಪದ ಕಂಬ, ಹಿಟ್ಟಿನ ಮುದ್ದೆ ಕಟ್ಟುವ ಮರಗೆ, ಬೈರಿಗೆ, ಕುಂಬಾರರ ಕುಲಾಲ ಚಕ್ರದ ಮಣೆ, ತೌಟಿಕೆ ಮಣೆ, ಮೇಳಿ, ತೊಣಪೆ, ಸೊಲಗೆ, ಅರೆಪಾವು, ಪಾವು, ಚಟಾಕು, ಸಿವುಡು (ತೆಕ್ಕೆ), ಕೊಳಗ, ಬಳಪದ ಕಲ್ಲಿನ ರಕ್ಷೆಮಣೆ, ಹಸಿ ಮಡಕೆ ತಟ್ಟುವ ಕೈಪಿಡಿ ಹಾಗೂ ಹಿಡಿಕಲ್ಲು, ಬಿದಿರಿನ ಮಡಕೆ ಒತ್ತುಮಣೆ, ಗುಡಾಣಗಳು, ಅರವಿ, ರಾಗಿಕಲ್ಲು, ಮರದ ತಕ್ಕಡಿ ಕಡ್ಡಿ, ಎಣ್ಣೆ ಸೌಟುಗಳು ಇತ್ಯಾದಿಗಳನ್ನು ಸಂಗ್ರಹಿಸಿ ಜಾನಪದ ಲೋಕಕ್ಕೆ ಹಸ್ತಾಂತರ ಮಾಡಿದರು.

ಟ್ರಸ್ಟ್ ಕಾರ್ಯದರ್ಶಿ ವಿಜಯ್ ರಾಂಪುರ ಮಾತನಾಡಿ, ಇಂದಿನ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಡಿಪಾಯವೆನಿಸಿದ್ದ ಜಾನಪದ ವಸ್ತು, ವೈವಿಧ್ಯ ನೇಪಥ್ಯಕ್ಕೆ ಸರಿಯುತ್ತಿವೆ. ಇಂತಹ ಅಪೂರ್ವವಾದ ವಸ್ತುಗಳನ್ನು ಸಂಗ್ರಹಿಸಿ ಜಾನಪದ ಲೋಕಕ್ಕೆ ನೀಡುವ ಕೆಲಸವನ್ನು ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಗ್ರಾಮೀಣ ಪ್ರದೇಶದ ಜನರು ತಮ್ಮ ಬಳಿ ಇರುವ ಬಳಕೆಯಲ್ಲಿ ಇಲ್ಲದ ಅಪರೂಪದ ಜಾನಪದ ವಸ್ತುಗಳನ್ನು ನೀಡುವ ಮೂಲಕ ಮುಂದಿನ ಪೀಳಿಗೆ ಅವುಗಳನ್ನು ನೋಡುವ ಅವಕಾಶ ಕಲ್ಪಿಸಿಕೊಡಬೇಕು. ಅಳಿದುಳಿದ ಅಮೂಲ್ಯ ವಸ್ತುಗಳು ಕಸದ ತಿಪ್ಪೆಗೆ ಸೇರುವ ಬದಲು ಜಾನಪದ ಲೋಕದ ವಸ್ತು ಸಂಗ್ರಹಾಲಯಕ್ಕೆ ಸೇರಲಿ. ಈ ಮೂಲಕ ಯುವ ಜನಾಂಗ ಜನಪದರ ಬದುಕಿನ ಬಗೆಗೆ ಗೌರವ ಭಾವನೆ ಬೆಳೆಸಿಕೊಳ್ಳುವಂತಾಗಲಿ ಎಂದರು.

ಗ್ರಾಮದ ಮಂಚಶೆಟ್ಟಿ, ಗಾಯಕ ಚೌ.ಪು.ಸ್ವಾಮಿ, ಶಶಿಧರ್ ರಾಂಪುರ, ಯುವಕವಿ ಶ್ರೀನಿವಾಸ್, ರೇಖಾ ಶ್ರೀನಿವಾಸ್, ಚಂದ್ರಶೇಖರ್, ಎ.ಪಿ.ಶಿವರಾಜಯ್ಯ, ಪಲ್ಲವಿ, ಪ್ರತೀಕ್ಷ, ಲಕ್ಷ್ಮಮ್ಮ, ರಚನಾ, ಚಂದನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.