ಕನಕಪುರ: ಓವರ್ ಟೇಕ್ ಮಾಡುವ ವಿಚಾರಕ್ಕೆ ಅಶ್ವಮೇಧ ಸಾರಿಗೆ ಚಾಲಕ ಮತ್ತು ಕಾರು ಚಾಲಕನ ನಡುವೆ ಗಲಾಟೆ ನಡೆದು ಶುಕ್ರವಾರ ನಗರ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್, ಮುಂದೆ ಹೋಗಲು ಅವಕಾಶ ಕೊಡದಿದ್ದಕ್ಕೆ ಸಾರಿಗೆ ಬಸ್ ಚಾಲಕ ರೈಸ್ ಮಿಲ್ ಬಳಿ ಕಾರು ಚಾಲಕನನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ.
ಈ ವೇಳೆ ಕಾರು ಚಾಲಕನ ಮೇಲೆ, ಸಾರಿಗೆ ಬಸ್ ಚಾಲಕ ಹಾಗೂ ಪ್ರಯಾಣಿಕರು ಹಲ್ಲೇ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾರು ಚಾಲಕ ಮತ್ತು ಸಾರಿಗೆ ಬಸ್ ಚಾಲಕನ ನಡುವೆ ದಯಾನಂದ ಸಾಗರ್ ಆಸ್ಪತ್ರೆ ಬಳಿಯಿಂದ ಓವರ್ ಟೆಕ್ ಮಾಡುವ ವಿಚಾರಕ್ಕೆ ಜಟಾಪಟಿ ಆರಂಭವಾಗಿದೆ. ಬೆಂಗಳೂರು ಕಡೆಯಿಂದ ಕನಕಪುರದ ಕಡೆಗೆ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಬರುತ್ತಿದ್ದ ಅಶ್ವಮೇಧ ಎಸ್ಕ್‌ಪ್ರೆಸ್‌ಗೆ ದಯಾನಂದ ಸಾಗರ ಆಸ್ಪತ್ರೆ ಬಳಿ, ಹಿಂಬದಿಯಲ್ಲಿ ಬರುತ್ತಿದ್ದ ಕಾರು ಚಾಲಕ ಸಾರಿಗೆ ಬಸ್ ಹಿಂದಿಕ್ಕಿ ಮುಂದೆ ಹೋಗಲು ಪದೇಪದೇ ಹಾರ್ನ್ ಮಾಡಿದ್ದಾನೆ.
ತಕ್ಷಣಕ್ಕೆ ಸಾರಿಗೆ ಬಸ್ ಚಾಲಕ ಕಾರು ಚಾಲಕನಿಗೆ ಮುಂದೆ ಹೋಗಲು ಅವಕಾಶ ಕೊಟ್ಟಿರಲಿಲ್ಲ. ಆನಂತರ ಸಾರಿಗೆ ಬಸ್ ಹಿಂದಿಕ್ಕಿ ಬಸ್ ಮುಂದೆ ಬಂದ ಕಾರು ಚಾಲಕ ಜಕ್ಕಸಂದ್ರ ಗ್ರಾಮದಿಂದಲೂ ನಿಧಾನವಾಗಿ ಕಾರು ಚಲಾಯಿಸಿಕೊಂಡು ಸಾರಿಗೆ ಬಸ್ ಮುಂದೆ ಹೋಗಲು ಬಿಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.
ಎಕ್ಕ್ಸ್‌ಪ್ರೆಸ್ ಅಶ್ವಮೇಧ ಮುಂದೆ ಹೋಗಲು ಬಿಡದಿದ್ದಕ್ಕೆ ಬಸ್ ಚಾಲಕ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ತಾಳ್ಮೆ ಕಳೆದುಕೊಂಡು ನಗರದ ರೈಸ್ ಮಿಲ್ ಬಳಿ ಕಾರನ್ನು ಹಿಂದಕ್ಕಿ ಕಾರನ್ನು ಅಡ್ಡಗಟ್ಟಿದ್ದಾರೆ.
ಈ ವೇಳೆ ಬಸ್ ಚಾಲಕ ಮತ್ತು ಕಾರು ಚಾಲಕನ ನಡುವೆ ಮಾತಿನ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ ಮೂರ್ನಾಲ್ಕು ಪ್ರಯಾಣಿಕರು ಮತ್ತು ಬಸ್ ಚಾಲಕ ಸೇರಿ, ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಶ್ವಮೇಧ ಬಸ್ ಮತ್ತು ಕಾರನ್ನು ಪೊಲೀಸ್ ಠಾಣೆಗೆ ತಂದಿದ್ದು, ಇಬ್ಬರು ಕಡೆಯಿಂದಲೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.