ರಾಮನಗರ: ‘ಬೆಳಗಾವಿ ರಾಜಕೀಯದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡಿದ್ದೇ ಮೈತ್ರಿ ಸರ್ಕಾರದಲ್ಲಿ ಒಡಕು ಉಂಟಾಗಲು ಕಾರಣವಾಯಿತು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಶಿವಕುಮಾರ್ ಅವರಿಗೆ ರಾಜಕೀಯವಾಗಿ ಕೆಲಸ ಮಾಡಲು ಬೆಂಗಳೂರಿನಲ್ಲೇ ಸಾಕಷ್ಟು ಕೆಲಸವಿದೆ. ಈ ಮೈತ್ರಿ ಸರ್ಕಾರ ಸಂಸತ್ ಚುನಾವಣೆ ನಡೆಯುವವರೆಗೂ ಇರುತ್ತದೆ ಎಂದುಕೊಂಡಿದ್ದೆವು. ಆದರೆ, ಈಗ ನೋಡಿದರೆ ಸರ್ಕಾರ ಯಾವಾಗ ಅಸ್ಥಿರಗೊಳ್ಳುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದರು.
‘ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಸಹೋದರರು ಶಿವಕುಮಾರ್ ಅವರಿಗೆ ಆತ್ಮೀಯ ಸ್ನೇಹಿತರು. ಈ ಸಹೋದರರು ಬೆಂಗಳೂರಿಗೆ ಬಂದಾಗ ಇವರ ಮನೆಗೆ ಬಂದು ಹಲವು ಗಂಟೆಗಳ ಕಾಲ ಚರ್ಚೆ ನಡೆಸುತ್ತಿದ್ದರು’ ಎಂದು ತಿಳಿಸಿದರು.
‘ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ರಮೇಶ ಜಾರಕಿಹೊಳಿ ಬೆಳೆಸಿದ ರಾಜಕೀಯ ಕೂಸು. ಜಾರಕಿಹೊಳಿ ಸಹೋದರರು ದಿನದಿಂದ ನೀಡುತ್ತಿರುವ ಹೇಳಿಕೆಗಳು ದ್ವಂದ್ವ ಮೂಡಿಸುತ್ತಿವೆ. ನಾವು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎನ್ನುತ್ತಾರೆ, ಸಮ್ಮಿಶ್ರ ಸರ್ಕಾರ ಪತನವಾದರೆ ನಾವು ಕಾರಣರಲ್ಲ ಎನ್ನುತ್ತಾರೆ’ ಎಂದರು.
‘ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಸಮ್ಮಿಶ್ರ ಸರ್ಕಾರ ಪತನಗೊಳ್ಳಬಹುದು ಎಂಬುದು ಹಲವು ಕಾರ್ಯಕರ್ತರ ಅನಿಸಿಕೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸಿ.ಪಿ. ಯೋಗೇಶ್ವರ್ ಅವರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರೊಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತನ್ನನ್ನು ಸೋಲಿಸಿದವರೆ ಮೇಲೆ ಸೇಡು ತೀರಿಸಿಕೊಳ್ಳುವುದು ಸಹಜ. ಆದ್ದರಿಂದ ಕುಮಾರಸ್ವಾಮಿ, ಶಿವಕುಮಾರ್ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರಬಹುದು’ ಎಂದರು.
‘ನನ್ನ ಮಗ ಎಲ್. ಚಂದ್ರಶೇಖರ್ ಬಿಜೆಪಿ ಸೇರುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸದ್ಯದಲ್ಲೇ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ, ನಾನೇ ಸ್ಪರ್ಧಿಸುತ್ತೇನೆ’ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಕೆ. ಶೇಷಾದ್ರಿ ಮಾತನಾಡಿ, ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ರತ್ನಮ್ಮ ಕಾಂಗ್ರೆಸ್ ಸೇರಿದ್ದಾರೆ. ಹುದ್ದೆಯ ಎರಡನೇ ಅವಧಿಯು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದೆ. ಇದರಂತೆ ಪಿ.ರವಿಕುಮಾರ್ ಅವರಿಗೆ ಮೊದಲ 20 ತಿಂಗಳು, ರತ್ನಮ್ಮ ಅವರಿಗೆ ಉಳಿದ 10 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಎಂದು ಸಚಿವ, ಸಂಸದರ ಬಳಿ ಒಪ್ಪಂದವಾಗಿತ್ತು ಎಂದರು.
‘ರವಿಕುಮಾರ್ ಅವರು ತಮ್ಮ ಅಧಿಕಾರಾವಧಿ ಮುಗಿದರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಿಲ್ಲ. ಇದರಿಂದ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು. ಈಗ ಒಪ್ಪಂದಂತೆ ರತ್ನಮ್ಮ ಅಧ್ಯಕ್ಷೆಯಾಗಿದ್ದಾರೆ’ ಎಂದು ತಿಳಿಸಿದರು.
ಕೊಟ್ಟ ಮಾತನ್ನು ತಪ್ಪುವವರು ಈಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದಾರೆ. ಹಲವು ಪಟ್ಟಭದ್ರ ಹಿತಾಸಕ್ತಿಗಳು ರತ್ನಮ್ಮ ಅವರಿಗೆ ಅಧ್ಯಕ್ಷ ಸ್ಥಾನವನ್ನು ತಪ್ಪಿಸಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಗಂಗಾಧರ್ ಮಾತನಾಡಿ, ‘ಅವಿಶ್ವಾಸ ಗೊತ್ತುವಳಿ ಮಂಡನೆ ಸಂದರ್ಭ ರವಿಕುಮಾರ್ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದರು. ಇದಕ್ಕೆ ಕುರಿತಂತೆ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ರತ್ನಮ್ಮ ಪಾಪಣ್ಣ, ಸದಸ್ಯರಾದ ಎ.ಬಿ. ಚೇತನ್‌ಕುಮಾರ್, ಎಚ್.ಎಸ್. ಲೋಹಿತ್‌ಬಾಬು, ಆರ್. ಮುತ್ತುರಾಜ್, ನಾಗೇಶ್, ಮುಖಂಡರಾದ ಸೈಯ್ಯದ್ ಜಿಯಾವುಲ್ಲಾ, ಸಿ.ಎನ್.ಆರ್. ವೆಂಕಟೇಶ್, ಬಸನಪುರ ಮೂರ್ತಿ, ವಿ.ಎಚ್. ರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.