ADVERTISEMENT

ನನ್ನ ಹೋರಾಟ ಅಭಿವೃದ್ಧಿಗೆ, ಅವರದ್ದು ಮೊಮ್ಮಗನ ಪಟ್ಟಾಭಿಷೇಕಕ್ಕೆ: CP ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 16:33 IST
Last Updated 9 ನವೆಂಬರ್ 2024, 16:33 IST
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿಯಲ್ಲಿ  ಕಾಂಗ್ರೆಸ್‌ ಪಕ್ಷದಿಂದ ಶನಿವಾರ ನಡೆದ ತಿಗಳ ಸಮುದಾಯದ ಸಮಾವೇಶದಲ್ಲಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಮಾಜಿ ಸಂಸದ ಡಿ.ಕೆ. ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಸಮುದಾಯದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿಯಲ್ಲಿ  ಕಾಂಗ್ರೆಸ್‌ ಪಕ್ಷದಿಂದ ಶನಿವಾರ ನಡೆದ ತಿಗಳ ಸಮುದಾಯದ ಸಮಾವೇಶದಲ್ಲಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಮಾಜಿ ಸಂಸದ ಡಿ.ಕೆ. ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಸಮುದಾಯದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು   

ಚನ್ನಪಟ್ಟಣ (ರಾಮನಗರ): ‘ನೀರಾವರಿ ಸೇರಿದಂತೆ ತಾಲ್ಲೂಕಿನನ ಸಮಗ್ರ ಅಭಿವೃದ್ಧಿಗಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ಆದರೆ, ಜೆಡಿಎಸ್‌ ನಾಯಕರು ತಮ್ಮ ಕುಟುಂಬದ ಕುಡಿಯು ಪಟ್ಟಾಭಿಷೇಕ್ಕಕ್ಕಾಗಿ ಹೋರಾಡುದ್ದಾರೆ. ನಮ್ಮಿಬ್ಬರಲ್ಲಿ ಯಾರು ಹಿತವರು ಎಂದು ನೀವೇ ಯೋಚಿಸಿ ಮತ ಹಾಕಿ’ ಎಂದು ಮನವಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ತಿಗಳ ಸಮುದಾಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ಇಲ್ಲಿನ ಬಿಸಲಿಮ್ಮ ನಮ್ಮ ಮನೆದೇವರು. ರಾಜಕೀಯ ಪ್ರಾರಂಭದ ದಿನಗಳಿಂದಲೂ ಈ ಸಮುದಾಯ ನನ್ನ ಕೈ ಹಿಡಿದಿದೆ. ಈ ಬಾರಿಯು ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಆ ಪಕ್ಷದ ಅಭ್ಯರ್ಥಿಯಾಗಿರುವ ನನ್ನ ಗೆಲುವು ಅನಿವಾರ್ಯವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿರುವ ಸರ್ಕಾರ, ತಾಲ್ಲೂಕಿನ ಅಭಿವೃದ್ಧಿಗೆ ಈಗಾಗಲೇ ₹500 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

ADVERTISEMENT

‘2018ರಿಂದ 2024ರವರೆಗೆ ಕ್ಷೇತ್ರದ ಶಾಸಕರಾಗಿದ್ದ ಕುಮಾರಸ್ವಾಮಿ, ಮುಖ್ಯಮಂತ್ರಿ ಹುದ್ದೆಯನ್ನೂ ಅಲಂಕರಿಸಿದ್ದರು. ಆದರೂ, ಕ್ಷೇತ್ರ ಯಾಕೆ ಅಭಿವೃದ್ಧಿಯಾಗಿಲ್ಲ ಎಂದು ಮತದಾರರು ಕೇಳಬೇಕಿದೆ. ಚುನಾವಣೆ ಬಂದಾಗ ಮಾತ್ರ ನಿಮ್ಮೂರಿಗೆ ಬರುವ ಇವರನ್ನು ನಂಬಬೇಡಿ. ಸದಾ ನಿಮ್ಮ ಜೊತೆ ಇರುವ ನನಗೆ ಈ ಬಾರಿ ಅವಕಾಶ ಮಾಡಿಕೊಡಿ’ ಎಂದು ಬೇಡಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ‘ಅಧಿಕಾರಕ್ಕಾಗಿ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋದ ಕುಮಾರಸ್ವಾಮಿ ಅವರು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬಂದಿದ್ದಾರೆ? ನಿಖಿಲ್ ಎರಡು ಬಾರಿ ಸೋತಿದ್ದಾರೆ ಎಂದು ಮತ ಕೇಳುತ್ತಾರಾ ಅಥವಾ ನಾನೇನು ಕೆಲಸ ಮಾಡಿಲ್ಲ ಎಂದು ಹೇಳುತ್ತಾರಾ? ಹೊರಗಿನವರನ್ನು ಬಿಟ್ಟು, ತಾಲ್ಲೂಕಿನ ಕೆರೆ–ಕಟ್ಟೆಗಳನ್ನು ತುಂಬಿಸಿದ ಯೋಗೇಶ್ವರ್‌ ಅವರಿಗೆ ಜನ ಮತ ಕೊಡಬೇಕು’ ಎಂದರು.

ಶಾಸಕರಾದ ಶರತ್ ಬಚ್ಚೇಗೌಡ, ನಂಜೇಗೌಡ, ಪಿ.ಎಂ. ನರೇಂದ್ರ ಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮುಖಂಡರಾದ ಕೆ.ಎನ್. ರಮೇಶ್, ಪದ್ಮಾವತಿ ಗಂಗಾಧರ್, ಪಕ್ಷದ ಜಿಲ್ಲಾಧ್ಯಕ್ಷ ಗಂಗಾಧರ್, ಮದನ್ ಪಟೇಲ್ ಹಾಗೂ ಸ್ಥಳೀಯ ಮುಖಂಡರು ಇದ್ದರು.

‘ಆಕಾಶದಲ್ಲಿರುವ ಎಚ್‌ಡಿಕೆ ಕೈಗೆ ಸಿಗಲ್ಲ’

‘ದೇವೇಗೌಡರೇ ಹೇಳಿರುವಂತೆ ಕುಮಾರಸ್ವಾಮಿ ಅವರು ಆಕಾಶದಲ್ಲಿದ್ದು ಜನರ ಕೈಗೆ ಸಿಗುವುದಿಲ್ಲ. ಭೂಮಿ ಮೇಲಿರುವ ಡಿ.ಕೆ. ಶಿವಕುಮಾರ್ ಜನರ ಸಮಸ್ಯೆಗಳನ್ನು ಕೇಳುತ್ತಾರೆ. ದೇವೇಗೌಡರಿಗೆ ಅವರದ್ದೇ ಪಕ್ಷದ ಸರ್ಕಾರ ರೂಪುಗೊಂಡರೂ ಅವರಿಗೆ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ. ಎಷ್ಟು ದಿನ ಇರಲಿದೆಯೋ ಎಂದು ಅನುಮಾನ ಹೊಂದಿದ್ದರು. ಜೆಡಿಎಸ್ ಯಾರೊಂದಿಗಿದ್ದರೂ ಅಧಿಕಾರದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ಕೆಲಸಗಳನ್ನು ಸಹ ಮಾಡುವುದಿಲ್ಲ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಟಾಂಗ್ ನೀಡಿದರು.

ತಾಲ್ಲೂಕಿನ ಬಳ್ಳಾಪಟ್ಟಣದಲ್ಲಿ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನ ಗೆಲ್ಲುವವರೆಗೂ ಮಲಗಲ್ಲ ಎಂದಿದ್ದ ದೇವೇಗೌಡರು ಈಗ ಮೊಮ್ಮಗನನ್ನು ಗೆಲ್ಲಿಸುವವರೆಗೂ ಮಲಗಲ್ಲ ಅಂತಿದ್ದಾರೆ. ಇದೆಲ್ಲಾ ಜನರನ್ನು ದಾರಿ ತಪ್ಪಿಸಲು ಅವರು ಮಾಡುವ ರಾಜಕೀಯ ಭಾಷಣವಷ್ಟೇ’ ಎಂದರು.

‘ಕುಮಾರಸ್ವಾಮಿ ರಾಮನಗರ ಚನ್ನಪಟ್ಟಣದಲ್ಲಿ ಗೆದ್ದು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಜನರ ಕೈಗೆ ಸಿಕ್ಕಿಲ್ಲ. ವಿಧಾನಸಭೆಯಲ್ಲಿ ಅವರಾಡಿರುವ ಮಾತುಗಳೇ ಅದನ್ನು ಬಿಂಬಿಸುತ್ತದೆ. ಅಂತಹ ಮಾತು ರಾಜಕಾರಣಿಗಳಿಗೆ ಅವಮಾರ್ಯಾದೆ’ ಎಂದು ಟೀಕಿಸಿದ ಅವರು ‘ಜೆಡಿಎಸ್‌ನವರು ಚುನಾವಣೆಯ ಕೊನೆಯಲ್ಲಿ ಬರುತ್ತಾರೆ. ಇಲ್ಲಿ ಹಣ ಆಮಿಷ ಹಾಗೂ ಅವರ ಕಣ್ಣೀರು ಕೆಲಸ ಮಾಡಲ್ಲ. ಜನ ಕೆಲಸಗಳನ್ನು ಮಾತ್ರ ನೋಡಿ ಯೋಗೇಶ್ವರ್ ಗೆಲ್ಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆ ಸಮುದಾಯದ ಪ್ರತಿಷ್ಠೆ: ಜಮೀರ್

‘ಉಪ ಚುನಾವಣೆಯ ನಮ್ಮ ಸಮುದಾಯಕ್ಕೆ ಪ್ರತಿಷ್ಠೆಯಾಗಿದೆ. ಮತಗಳು ಯಾವುದೇ ಕಾರಣಕ್ಕು ಚದುರಬಾರದು. ಜೊತೆಗೆ ಮತದಾನ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಇಡೀ ಸಮುದಾಯ ಕಾಂಗ್ರೆಸ್ ಪರ ನಿಂತು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಬಲ ತುಂಬಬೇಕು. ಕ್ಷೇತ್ರದ ನೀರಾವರಿ ದೊಡ್ಡ ಕೊಡುಗೆ ನೀಡಿ ರೈತರ ಆಶಾಕಿರಣವಾಗಿರುವ ಯೋಗೇಶ್ವರ್ ಅವರನ್ನು ಗೆಲ್ಲಿಸಬೇಕು’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಮನವಿ ಮಾಡಿದರು.

ಪಟ್ಟಣದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿದ ಅವರು ಚುನಾವಣಾ ಕಾರ್ಯತಂತ್ರದ ಕುರಿತು ಸಮಾಲೋಚನೆ ನಡೆಸಿದರು. ‘ಜೈ ಭೀಮ್’ ಘೋಷಣೆಯೊಂದಿಗೆ ಉರ್ದುವಿನಲ್ಲಿ ಭಾಷಣ ಮಾಡಿದರು.

‘ಚುನಾವಣೆ ಸಂದರ್ಭದಲ್ಲಿ ಕ್ಷೇತ್ರಕ್ಕೆ ಹೋಗಬೇಕು ಎಂಬ ಕುಮಾರಸ್ವಾಮಿ ಅವರ ಆಡಿಯೊವನ್ನು ಮೈಕ್‌ನಲ್ಲಿ ಕೇಳಿಸಿದ ಅವರು ‘ಇಂತಹವರಿಗೆ ಮತ ಕೊಡಬೇಡಿ. ನಮ್ಮ ಸಮುದಾಯದವರು ಒನ್‌ ಸೈಡ್ ಮತ ಹಾಕಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಬೇಕು’ ಎಂದು ಕರೆ ನೀಡಿದರು.

ಪೌರಾಡಳಿತ ಸಚಿವ ಸಚಿವ ರಹೀಮ್ ಖಾನ್ ಮಾಜಿ ಸಂಸದ ಡಿ.ಕೆ. ಸುರೇಶ್ ಶಾಸಕ ಇಕ್ಬಾಲ್ ಹುಸೇನ್ ಕೆಎಂಡಿಸಿ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್ ಅವರೊಂದಿಗೆ ಬಿಸ್ಮಿಲ್ಲಾ ನಗರ ಬಡಾ ಮಖಾನ್ ಯಾರಬ್ ನಗರದಲ್ಲಿ ರೋಡ್ ಷೋ ನಡೆಸಿ ಪ್ರಚಾರ ನಡೆಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಗುಜರಿ ಅಫ್ರೋಜ್ ಕಾಂಗ್ರೆಸ್ ಸೇರಿದರು.

ಈ ಉಪ ಚುನಾವಣೆ ನನ್ನ ರಾಜಕೀಯ ಜೀವನದ ಪ್ರಮುಖ ಘಟ್ಟ. ರಾಜಕೀಯ ದೈತ್ಯರು ಎರಡು ಬಾರಿ ನನ್ನ ಮೇಲೆ ಮುಗಿಬಿದ್ದು ಸೋಲಿಸಿ ಮೂರನೇ ಬಾರಿಗೆ ತಮ್ಮ ವಂಶದ ಕುಡಿಯನ್ನು ನಿಲ್ಲಿಸಿದ್ದಾರೆ.
ಸಿ.ಪಿ. ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ
ತಾಲ್ಲೂಕಿನ ನೀರಾವರಿ ಕೊಡುಗೆ ನೀಡಿರುವ ಯೋಗೇಶ್ವರ್ ಸರ್ವಜನಾಂಗದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸೌದದಲ್ಲಿ ಇದ್ದಾಗ ಮಾತ್ರ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಸಾಧ್ಯ.
ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ
ದೇವೇಗೌಡರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುತ್ತೇನೆಂದು ಶಪಥ ಮಾಡಿದ್ದಾರೆ. ಅದು ಅವರ ಹಣೆಯಲ್ಲಿಯೂ ಬರೆದಿಲ್ಲ. ಈ ದೇಶ ಉಳಿಸಲು ರಾಹುಲ್ ಗಾಂಧಿ ಕೈ ಬಲಪಡಿಸಬೇಕು. ಹಾಗಾಗಿ ಇಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು.
ಡಿ.ಕೆ. ಸುರೇಶ್, ಮಾಜಿ ಸಂಸದ
ಚನ್ನಪಟ್ಟಣದ ಯಾರಬ್‌ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ  ಶನಿವಾರ ರಾತ್ರಿ ಪ್ರಚಾರ ನಡೆಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಭಾಷಣದ ಮಧ್ಯೆ ಕುಮಾರಸ್ವಾಮಿ ಅವರ ಆಡಿಯೊ ಕೇಳಿಸಿದರು. ಪೌರಾಡಳಿತ ಸಚಿವ ರಹೀಂ ಖಾನ್ ಮಾಜಿ ಸಂಸದ ಡಿ.ಕೆ. ಸುರೇಶ್ ಯುವ ಕಾಂಗ್ರೆಸ್‌ನ ಮೊಹಮ್ಮದ್ ನಲಪಾಡ್ ಹಾಗೂ ಇತರರು ಇದ್ದಾರೆ
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿಯಲ್ಲಿ  ಕಾಂಗ್ರೆಸ್‌ ಪಕ್ಷದಿಂದ ಶನಿವಾರ ನಡೆದ ತಿಗಳ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.