ಚನ್ನಪಟ್ಟಣ (ರಾಮನಗರ): ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ನನ್ನ ಈ ಮಾತು ಭವಿಷ್ಯವಲ್ಲ ವಾಸ್ತವ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
‘ಹಾಸನ ಪ್ರಕರಣ ಬಳಸಿಕೊಂಡು ನಮ್ಮ ಕುಟುಂಬವನ್ನು ಮುಗಿಸುವ ಹುನ್ನಾರ ನಡೆದಿತ್ತು. ಉಪ ಚುನಾವಣೆ ಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೊಕ್ಕು ಮುರಿಯಬೇಕು’ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಉಪ ಚುನಾವಣೆ ಅಭ್ಯರ್ಥಿಯಾಗಿರುವ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ಡಿ.ಕೆ ಸಹೋದರರ ವಿರುದ್ಧ ಗುಡುಗಿದರು.
‘ಜನವರಿಯೊಳಗೆ ರಾಜ್ಯ ಸರ್ಕಾರ ಬೀಳಲಿದೆ’ ಎಂಬ ಕೇಂದ್ರ ಸಚಿವ ವಿ.ಸೋಮಣ್ಣ ಮಾತಿಗೆ ದನಿಗೂಡಿಸಿದ ಗೌಡರು, ‘ನನ್ನಂತೆಯೇ ಸೋಮಣ್ಣ ಅವರಿಗೂ ಜ್ಯೋತಿಷ್ಯ ಕೇಳುವ ಅಭ್ಯಾಸ ಇರುವುದೇ ಸೋಜಿಗ. ಆದರೆ ಅವರು ಸತ್ಯ ಹೇಳಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.
‘ಒಂದು ಕಾಲದಲ್ಲಿ ನಾನು ಮತ್ತು ಯಡಿಯೂರಪ್ಪ ಕಿತ್ತಾಡಿಕೊಂಡಿದ್ದೆವು. ನಾವಿಬ್ಬರು ಈಗ ಒಂದಾಗಿರುವುದೇ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು’ ಎಂದು ಪಕ್ಕದಲ್ಲಿ ಕುಳಿತದ್ದ ಯಡಿಯೂರಪ್ಪ ಅವರ ಕೈ ಹಿಡಿದುಕೊಂಡು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅವರ ಮಾತುಗಳೇ ಮುಳುವಾಗಲಿವೆ’ ಎಂದರು.
‘ಕಾಂಗ್ರೆಸ್‌ನವರು ಎಂದಿಗೂ ನಂಬಿಕೆಗೆ ಅರ್ಹರಲ್ಲ. ಅವರ ಸಹವಾಸವೇ ಬೇಡ ಎಂದು ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದೆ. ಆದರೆ, ಕಾಂಗ್ರೆಸ್‌ನವರು ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿ ಸಮ್ಮಿಶ್ರ ಸರ್ಕಾರ ರಚನೆಯಾಗುವಂತೆ ಮಾಡಿದ್ದರು. ನನ್ನ ಮಗ ಮುಖ್ಯಮಂತ್ರಿಯಾಗಿ ದ್ದರೂ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲಿಲ್ಲ’ ಎಂದು ಆರೋಪಿಸಿದರು.
ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರು ಭಾಷಣ ಆರಂಭಿಸುವ ಮುಂಚೆ ತಾತ ದೇವೇಗೌಡರು, ತಂದೆ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದರು. ನಿಖಿಲ್ ಪರ ಪತ್ನಿ ರೇವತಿ ಸಹ ಭಾಷಣ ಮಾಡಿ ಮತ ಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.