ADVERTISEMENT

ಕಾಂಗ್ರೆಸ್ ದಲಿತ ವಿರೋಧಿ ಪಕ್ಷ: ಛಲವಾದಿ ನಾರಾಯಣಸ್ವಾಮಿ ಟೀಕಾ ಪ್ರಹಾರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:46 IST
Last Updated 6 ನವೆಂಬರ್ 2024, 5:46 IST
ಚನ್ನಪಟ್ಟಣದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಚನ್ನಪಟ್ಟಣದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಚನ್ನಪಟ್ಟಣ: ‘ದೇಶದಲ್ಲಿ ದಲಿತ ವಿರೋಧಿ ಪಕ್ಷವಿದ್ದರೆ ಆದು ಕಾಂಗ್ರೆಸ್ ಪಕ್ಷ. ತಾಲ್ಲೂಕಿನ ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು. ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾನಸಿಕ ಹಿಂಸೆ ನೀಡಿ, ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಅವರು ಕಾಂಗ್ರೆಸ್ ಅನ್ನು ನಂಬಬೇಡಿ ಎಂದು ಕರೆ ನೀಡಿದ್ದರು’ ಎಂದರು.

‘ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ನೀಡುವ ಪಕ್ಷವಿದ್ದರೆ ಅದು ಎನ್.ಡಿ.ಎ. ಪಕ್ಷ. ಬುಡಕಟ್ಟು ಸಮುದಾಯದ ಹೆಣ್ಣು ಮಗಳನ್ನು ರಾಷ್ಟ್ರಪತಿ ಮಾಡಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ನಂತರ ಕೇವಲ ಮತಬ್ಯಾಂಕ್ ಮಾಡಿಕೊಂಡು ದಲಿತ ಸಮುದಾಯವನ್ನು ವಂಚಿಸುತ್ತಾ ಬಂದಿರುವ ಕಾಂಗ್ರೆಸ್ ಅನ್ನು ದಲಿತ ಸಮುದಾಯ ತಿರಸ್ಕರಿಸಬೇಕು’ ಎಂದರು.

ADVERTISEMENT

‘ರಾಜ್ಯದಲ್ಲಿ ದಲಿತ ಸಮುದಾಯದ ಏಳಿಗೆಗಾಗಿ ಬಳಸಬೇಕಾಗಿದ್ದ ಹಣವನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತ ಸಮುದಾಯಕ್ಕೆ ವಂಚನೆ ಮಾಡಿದೆ. ದಲಿತರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಇದನ್ನು ದಲಿತ ಸಮುದಾಯ ಮರೆಯಬಾರದು. ದಲಿರ ಏಳಿಗೆ ಮಾಡುತ್ತೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುವ ಕಾಂಗ್ರೆಸ್ ಅನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ‘ಕೇಂದ್ರದಲ್ಲಿ ನಮ್ಮ ಪಕ್ಷ ಎನ್‌ಡಿಎ ಪಕ್ಷವನ್ನು ಬೆಂಬಲಿಸಿದೆ. ಹಾಗಾಗಿ ನಾವು ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೇವೆ. ಮನೆಮನೆಗೆ ತೆರಳಿ ನಿಖಿಲ್ ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ’ ಎಂದರು.

ಮಳವಳ್ಳಿ ಮಾಜಿ ಶಾಸಕ ಅನ್ನದಾನಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ಪಕ್ಷದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.