ADVERTISEMENT

ಬಿಎಸ್‌ವೈ ಜೈಲು ಸೇರಿಸಿದ ಸೂತ್ರಧಾರ HDK: ಡಿಕೆಶಿ, ಚಲುವರಾಯಸ್ವಾಮಿ ಹೊಸ ಬಾಂಬ್

‘ಜನಾಂದೋಲನ’ ಕಾರ್ಯಕ್ರಮದಲ್ಲಿ ಡಿಕೆಶಿ, ಚಲುವರಾಯಸ್ವಾಮಿ ಹೊಸ ಬಾಂಬ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 22:53 IST
Last Updated 3 ಆಗಸ್ಟ್ 2024, 22:53 IST
ರಾಮನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಜನಾಂದೋಲನ ಕಾರ್ಯಕ್ರಮಕ್ಕೆ ಬೈಕ್ ರ್‍ಯಾಲಿ  ಮೂಲಕ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಕ್ಷದ ಬಾವುಟ ಪ್ರದರ್ಶಿಸಿದರು
ರಾಮನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಜನಾಂದೋಲನ ಕಾರ್ಯಕ್ರಮಕ್ಕೆ ಬೈಕ್ ರ್‍ಯಾಲಿ  ಮೂಲಕ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಕ್ಷದ ಬಾವುಟ ಪ್ರದರ್ಶಿಸಿದರು   

ರಾಮನಗರ: ‘ಮುಖ್ಯಮಂತ್ರಿಯಾಗಿದ್ದ ನಿಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಜೈಲು ಸೇರುವಂತೆ ಮಾಡಿದ ಸೂತ್ರಧಾರ ಇದೇ ಎಚ್.ಡಿ. ಕುಮಾರಸ್ವಾಮಿ ಎಂಬುದು ನಿನಗೆ ಗೊತ್ತಿಲ್ಲವೇ ವಿಜಯೇಂದ್ರ?’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ನ ಎರಡನೇ ದಿನದ ‘ಜನಾಂದೋಲನ’ ಕಾರ್ಯಕ್ರಮದಲ್ಲಿ ಈ ಇಬ್ಬರೂ ಕಾಂಗ್ರೆಸ್ ನಾಯಕರು, ವಿಜಯೇಂದ್ರ ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಪ್ರಶ್ನೆಗಳ ಸುರಿಮಳೆಗರೆದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಣ್ಣೀರು ಹಾಕುತ್ತಾ ವಿಧಾನಸೌಧದಿಂದ ಹೊರ ನಡೆದ ಸನ್ನಿವೇಶವನ್ನು ಅವರ ಪುತ್ರನಾದ ನೀವು ನೆನಪಿಸಿಕೊಳ್ಳಬೇಕು. ಇದೆಲ್ಲದರ ಹಿಂದಿರುವ ಏಕೈಕ ಸೂತ್ರದಾರ ಈ ಕುಮಾರಸ್ವಾಮಿ. ಅಂತಹ ವ್ಯಕ್ತಿಯನ್ನು ಜೊತೆಗಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದೀಯಲ್ಲ’ ಎಂದು ಡಿಕೆಶಿ ವ್ಯಂಗ್ಯವಾಡಿದರು.

ADVERTISEMENT

‘ಕೇಂದ್ರ ಸಚಿವ ಕುಮಾರಸ್ವಾಮಿ ದೆಹಲಿವರೆಗೆ ಪಾದಯಾತ್ರೆ ಮಾಡಿದರೂ ನಮ್ಮ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ’ ಎಂದು ಚಲುವರಾಯಸ್ವಾಮಿ ಸವಾಲು ಹಾಕಿದರು. 

ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಿತು. ಆದರೆ, ಅವರು ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಕುಳಿತು ಶೋಕಿ ಮಾಡಿದರು ಎಂದರು.

‘ಬಿಜೆಪಿಯೊಂದಿಗೆ 20 ತಿಂಗಳು ಸರ್ಕಾರ ಮಾಡಿ ಮಾತು ತಪ್ಪಿದ ಕುಮಾರಸ್ವಾಮಿ ಅವರ ಅಕ್ರಮ ಆಸ್ತಿ ಕುರಿತು ಬಿಜೆಪಿಯವರು ಈ ಹಿಂದೆ ಪತ್ರಿಕೆಗಳಿಗೆ ನೀಡಿದ ಜಾಹೀರಾತು ಕುರಿತು ಕುಮಾರಸ್ವಾಮಿ ಈಗ ಏನು ಹೇಳುತ್ತಾರೆ? ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊಡಿಯನ್ನು ನೋಡಿ ಸಹಿಸಲು ಸಾಧ್ಯವಾಗದ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿ ದ್ವೇಷ ಕಾರುತ್ತಿದ್ದಾರೆ’ ಎಂದರು.

‘ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ನಾನೇ ಎಂದು ಕುಮಾರಸ್ವಾಮಿ ಈ ಹಿಂದೆ ನನ್ನ ಬಳಿ ಹೇಳಿಕೊಂಡಿದ್ದರು. ನಿಮ್ಮಪ್ಪನನ್ನು ಜೈಲಿಗೆ ಕಳಿಸಲು ಅವರು ಏನೆಲ್ಲಾ ಕುತಂತ್ರ ಮಾಡಿದರು ಎಂಬುದು ನನಗೆ ಗೊತ್ತಿದೆ. ದಿನಕ್ಕೊಂದು ಹೇಳಿಕೆ ನೀಡುತ್ತಾ, ಗಂಟೆಗೊಂದು ಬಣ್ಣ ಬದಲಾಯಿಸುವ ಕುಮಾರಸ್ವಾಮಿ ನಡವಳಿಕೆ ಸರಿ ಇಲ್ಲವೆಂದು ನಾನು, ಬಾಲಕೃಷ್ಣ ಸೇರಿದಂತೆ ಹಲವರು ಪಕ್ಷ ತೊರೆದೆವು’ ಎಂದು ಚಲುವರಾಯಸ್ವಾಮಿ ಹೇಳಿದರು.

‘ಭ್ರಷ್ಟಾಚಾರವೇ ಬಿಜೆಪಿಯ ತಂದೆ–ತಾಯಿ’

‘ಭ್ರಷ್ಟಾಚಾರವೇ ಬಿಜೆಪಿಯ ತಾಯಿ–ತಂದೆ ಮತ್ತು ಬಂಧು–ಬಳಗ. ಭ್ರಷ್ಟಾಚಾರ ಮಾಡಿದ ಬಿಜೆಪಿಯನ್ನು ಆ ಭಗವಂತ ಮೆಚ್ಚುವುದಿಲ್ಲ. ನನ್ನನ್ನು ಮಿಲಿಟರಿಯವರು ಬಂದು ಕರೆದುಕೊಂಡು ಹೋಗುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಂದರೆ ಮತ್ತೊಮ್ಮೆ ನನ್ನನ್ನು ಜೈಲಿಗೆ ಹಾಕಿಸಲು ಸಂಚು ರೂಪಿಸಿದ್ದಾರೆ. ಈಗಾಗಲೇ ನಾನು ತಿಹಾರ್ ಜೈಲು ನೋಡಿದ್ದೇನೆ. ಎಲ್ಲಾ ತನಿಖೆಗಳನ್ನೂ ಎದುರಿಸಿದ್ದೇನೆ. ಯಾವುದಕ್ಕೂ ಭಯಪಡುವ ಮಗ ನಾನಲ್ಲ. ಆದರೆ ನೀವು ಅಕ್ರಮವಾಗಿ ಪಡೆದಿರುವ ನಿವೇಶನಗಳ ಕುರಿತು ಬಿಜೆಪಿಯವರು ನೀಡಿದ್ದ ಪತ್ರಿಕಾ ಜಾಹೀರಾತು ಕುರಿತು ನೀವು ಉತ್ತರಿಸಬೇಕು’ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

‘ಎಚ್‌ಡಿಕೆ ತಿಪ್ಪರಲಾಗ ಹಾಕಿದರೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ’ 

‘ನವೆಂಬರ್ ಅಥವಾ ಡಿಸೆಂಬರ್ ಹೊತ್ತಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂಬುವುದು ತಿರುಕನ ಕನಸಿದ್ದಂತೆ. ಬಿದ್ದ ತಕ್ಷಣ ಒಡೆಯಲು ನಮ್ಮದೇನು ಮಡಿಕೆಯೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದರು. ‘ನಮ್ಮ ಒಬ್ಬ ಶಾಸಕನ ಕೂದಲು ಸಹ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿಯ ಕೇಂದ್ರ ನಾಯಕರ ಜೊತೆ ಸೇರಿಕೊಂಡು ಎಚ್‌.ಡಿ. ಕುಮಾರಸ್ವಾಮಿ ಏನೇ ತಿಪ್ಪರಲಾಗ ಹಾಕಿದರೂ ನಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಮುಂದೆಯೂ ನಮ್ಮ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಮಾಡಿರುವ ಪಾಪಗಳನ್ನು ತೊಳೆದುಕೊಳ್ಳಲು ಪಾಪದ ಪಾದಯಾತ್ರೆ ಮಾಡುತ್ತಿದ್ದಾರೆ. ಮಾರ್ಗಮಧ್ಯೆ ಸಿಗುವ ಕಾವೇರಿಯಲ್ಲಿ ಸ್ನಾನ ಮಾಡಿದರೆ ಒಂದಿಷ್ಟು ಪಾಪವಾದರೂ ಹೋಗಬಹುದು.
ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ
ಮುಡಾ ಹಗರಣದ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್‌ನವರು ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ.
ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
ಎಲ್ಲರನ್ನು ಸಮಾನವಾಗಿ ಕಾಣುವ ದೇಶದ ಸಂವಿಧಾನದಲ್ಲಿ ಬಿಜೆಪಿಯವರಿಗೆ ನಂಬಿಕೆಯೇ ಇಲ್ಲ. ಅವರು ನಂಬುವುದು ಮನುವಾದವನ್ನು. ಅದಕ್ಕೆ ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಕುತಂತ್ರ ಮಾಡುತ್ತಿದ್ದಾರೆ.
ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ರಾಮನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಅವಧಿಯ ಪಿಎಸ್‌ಐ ನೇಮಕಾತಿ ಹಗರಣದ ಪೋಸ್ಟರ್ ಪ್ರದರ್ಶಿಸಿದರು
ರಾಮನಗರದಲ್ಲಿ ಶನಿವಾರ ನಡೆದ ಜನಾಂದೋಲನ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಉದ್ಘಾಟಿಸಿದರು. ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಮುಖಂಡರು ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.