ADVERTISEMENT

ಹಳಬರು–ಹೊಸಬರು ಎಂಬುದಿಲ್ಲ, ಎಲ್ಲರೂ ಒಂದೇ: ಡಿ.ಕೆ. ಸುರೇಶ್

ಬಿಜೆಪಿ ಸದಸ್ಯರು, ಪದಾಧಿಕಾರಿಗಳ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 7:24 IST
Last Updated 30 ಅಕ್ಟೋಬರ್ 2024, 7:24 IST
ಚನ್ನಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಬಿಜೆಪಿಯ ನಗರಸಭೆ ಸದಸ್ಯರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಕಾಂಗ್ರೆಸ್ ಸೇರಿದರು. ಪಕ್ಷದ ಜಿಲ್ಲಾಧ್ಯಕ್ಷ ಗಂಗಾಧರ್, ಮಾಜಿ ಸಂಸದ ಡಿ.ಕೆ. ಸುರೆಶ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹಾಗೂ ಇತರರು ಇದ್ದಾರೆ
ಚನ್ನಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಬಿಜೆಪಿಯ ನಗರಸಭೆ ಸದಸ್ಯರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಕಾಂಗ್ರೆಸ್ ಸೇರಿದರು. ಪಕ್ಷದ ಜಿಲ್ಲಾಧ್ಯಕ್ಷ ಗಂಗಾಧರ್, ಮಾಜಿ ಸಂಸದ ಡಿ.ಕೆ. ಸುರೆಶ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹಾಗೂ ಇತರರು ಇದ್ದಾರೆ   

ಚನ್ನಪಟ್ಟಣ (ರಾಮನಗರ): ‘ಕಾಂಗ್ರೆಸ್‌ನಲ್ಲಿ ಹಳಬರು ಮತ್ತು ಹೊಸಬರು ಎಂಬುದಿಲ್ಲ. ಇಲ್ಲಿ ಎಲ್ಲರೂ ಒಂದೇ. ನಮ್ಮ ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿ ಅನಿರೀಕ್ಷಿತವಾಗಿ ಕಾಂಗ್ರೆಸ್‌ಗೆ ಬಂದಿರುವ ಯೋಗೇಶ್ವರ್ ಅವರನ್ನು ನಾವು ಗೆಲ್ಲಿಸಬೇಕು. ಆ ಮೂಲಕ, ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು’ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಪಟ್ಟಣದ ಮಂಗಳವಾರಪೇಟೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ಬಿಜೆಪಿಯ 6 ನಗರಸಭೆ ಸದಸ್ಯರು ಹಾಗೂ ಇತರ ಪದಾಧಿಕಾರಿಗಳನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ‘ಕಳೆದ ಮೂರು ತಿಂಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಪ್ರಬಲವಾಗಿದ್ದು, ಬಿಜೆಪಿ–ಜೆಡಿಎಸ್‌ನ ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಮತ್ತಷ್ಟು ಮಂದಿ ಬರಲಿದ್ದಾರೆ’ ಎಂದರು.

‘ಕ್ಷೇತ್ರದ ಸಮಸ್ಯೆಗಳು ಪರಿಹಾರವಾಗುವ ಕಾಲ ಬಂದಿದೆ. ಇಲ್ಲಿನ ಸಮಸ್ಯೆಗಳನ್ನು ನಾನು, ಯೋಗೇಶ್ವರ್, ಗಂಗಾಧರ್ ಹಾಗೂ ರಘುನಂದನ್ ರಾಮಣ್ಣ ಅವರು ಶಿವಕುಮಾರ್ ನೇತೃತ್ವದಲ್ಲಿ ಪರಿಹರಿಸುವ ಕೆಲಸ ಮಾಡುತ್ತೇವೆ. ಯಾವ ಆರೋಪಗಳಿಗೂ ದೂರು ಕೊಡದೆ ಎಲ್ಲರೂ ಯೋಗೇಶ್ವರ್ ಗೆಲುವಿಗೆ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಬಿಜೆಪಿಯ ನಗರಸಭಾ ಸದಸ್ಯರಾದ ಕೋಟೆ ಚಂದ್ರಶೇಖರ್, ಕಮಲಾರಾಮು, ಜಯಮಾಲಾ, ಲಕ್ಷ್ಮಮ್ಮ, ಮನೋಹರ್, ಕಸ್ತೂರಿ ಮಂಜುನಾಥ್ ಸೇರಿದಂತೆ ಜಿಲ್ಲಾ ಖಜಾಂಚಿ ಗರಕಹಳ್ಳಿ ಶಿವಕುಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಮತ್ತಿಕೆರೆ ಚನ್ನೇಗೌಡ, ರೈತಮೋರ್ಚಾ ಅಧ್ಯಕ್ಷ ಭೂಹಳ್ಳಿ ಚಂದ್ರು, ಯುವ ಮೋರ್ಚಾ ಅಧ್ಯಕ್ಷ ರಂಜನ್, ಒಬಿಸಿ ಮೋರ್ಚಾ ಅಧ್ಯಕ್ಷ ವರದರಾಜೇ ಅರಸ್, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಸತೀಶ್ ಸೇರಿದಂತೆ ಹಲವರು ಪಕ್ಷ ಸೇರಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ಸಂಪತ್‌ ರಾಜ್, ಕಾಂಗ್ರೆಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಕರಿಯಪ್ಪ, ಸುನೀಲ್, ರೇಣುಕಮ್ಮ, ಗಾಣಕಲ್ ನಟರಾಜ್, ಮಲವೇಗೌಡ, ನರಸಿಂಹ ಮುಂತಾದವರು ಇದ್ದರು.

‘4 ದಿನ ವಿರಾಮ ತೆಗೆದುಕೊಂಡಿದ್ದೆ’

ಯೋಗೇಶ್ವರ್ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾದಾಗಿನಿಂದ ಮುನಿಸಿಕೊಂಡಿದ್ದ ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಪಕ್ಷದ ಕಚೇರಿಯಲ್ಲಿ ಸುರೇಶ್ ಅವರೊಂದಿಗೆ ಕಾಣಿಸಿಕೊಂಡು ಪಕ್ಷಕ್ಕೆ ಬಂದವರನ್ನು ಸ್ವಾಗತಿಸಿದರು. ಬಳಿಕ ಮಾತನಾಡಿ ‘ನಾಲ್ಕು ದಿನ ವಿರಾಮ ತೆಗೆದುಕೊಂಡಿದ್ದೆ ಅಷ್ಟೇ. ಇನ್ಮುಂದೆ ಎಲ್ಲರಿಗೂ ಸಿಗುವೆ. ಇತಿಹಾಸದಲ್ಲಿ ಇಷ್ಟು ಮಂದಿ ಕಾಂಗ್ರೆಸ್‌ಗೆ ಸೇರಿರಲಿಲ್ಲ. ನಗರಸಭೆಯ ಒಟ್ಟು 27 ಸದಸ್ಯರು ಬಂದಿದ್ದಾರೆ. ಉಳಿದವರನ್ನು ಸಹ ಮುಂದಿನ ದಿನಗಳಲ್ಲಿ ಕರೆತರಲು ಪ್ರಯತ್ನಿಸೋಣ. ಯೋಗೇಶ್ವರ್ ಹಿರಿಯ ನಾಯಕ. ಐದು ಸಲ ಗೆದ್ದು ಶಾಸಕ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರೊಂದಿಗೆ ಚನ್ನಪಟ್ಟಣ ಅಭಿವೃದ್ಧಿ ಕುರಿತು ಡಿ.ಕೆ ಸಹೋದರರ ಜತೆ ಮಾತಾನಾಡಿದ್ದೇನೆ. ಮೂಲ ಕಾಂಗ್ರೆಸ್‌ನವರು ಅಸಮಾಧಾನ ಬಿಟ್ಟು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಯೋಗೇಶ್ವರ್ ಗೆಲುವಿಗೆ ಶ್ರಮಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.