ADVERTISEMENT

ನೀರಾವರಿ, ಅಭಿವೃದ್ಧಿಗಾಗಿ ಪಕ್ಷ ಬಿಟ್ಟಿದ್ದೆ: ಯೋಗೇಶ್ವರ್

ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆ: ಡಿ.ಕೆ. ಸುರೇಶ್ ಸೇರಿ ನಾಯಕರ ಸಾಥ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:18 IST
Last Updated 28 ಅಕ್ಟೋಬರ್ 2024, 4:18 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು</p></div>

ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು

   

ಚನ್ನಪಟ್ಟಣ: ‘ನೀರಾವರಿ ಯೋಜನೆ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿದ್ದೆ. ಅದರ ಫಲವಾಗಿ ತಾಲ್ಲೂಕಿನ ಕೆರೆಗಳು ತುಂಬಿದ್ದು, ರೈತರಿಗೆ ಶಾಶ್ವತ ನೀರಾವರಿ ಭಾಗ್ಯ ಸಿಕ್ಕದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಹೇಳಿದರು.

ತಾಲ್ಲೂಕಿನ ಕೆಂಗಲ್, ಕೋಡಂಬಳ್ಳಿ, ಸೋಗಾಲ ಸೇರಿದಂತೆ ವಿವಿಧೆಡೆ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಈ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ, ನೀರಾವರಿ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಸೇರಿ ತಾಲ್ಲೂಕಿನಲ್ಲಿ ಮತ್ತಷ್ಟು ನೀರಾವರಿ ಯೋಜನೆಗಳನ್ನು ರೂಪಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕುಮಾರಸ್ವಾಮಿ ಅವರ ರಾಜಕೀಯ ಮಹತ್ವಕಾಂಕ್ಷೆಯೇ ಚುನಾವಣೆಗೆ ಕಾರಣ. ಎರಡು ಸಲ ಶಾಸಕರಾಗಿದ್ದ ಅವರು ಕ್ಷೇತ್ರದ ಕೆರೆಗಳನ್ನು ತುಂಬಿಸಲಿಲ್ಲ. ಎಷ್ಟು ಕೆರೆಗಳಿವೆ ಎಂಬುದೂ ಗೊತ್ತಿಲ್ಲ. ಇಲ್ಲಿಂದ ಗೆದ್ದು ಮುಖ್ಯಮಂತ್ರಿಯಾದರೂ ತಾಲ್ಲೂಕಿಗೆ ಅವರ ಕೊಡುಗೆ ಶೂನ್ಯ’ ಎಂದು ಟೀಕಿಸಿದರು.

‘ದೇವೇಗೌಡರ ಕುಟುಂಬದವರು ನನ್ನ ಮೇಲೆ ಯಾಕೆ ಮುಗಿಬೀಳುತ್ತಿದ್ದಾರೊ ಗೊತ್ತಿಲ್ಲ. ನಾನೇನು ತಪ್ಪು ಮಾಡಿದ್ದೇನೆ? ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ, ಯಥೇಚ್ಛವಾಗಿ ಹಣ ಸುರಿದು ಚುನಾವಣೆ ಮಾಡುತ್ತಾರೆ. ನನ್ನ ಬಳಿ ಅವರಷ್ಟು ಹಣವಿಲ್ಲ. ನೀವೇ ನನ್ನ ಪರವಾಗಿ ಚುನಾವಣೆ ಮಾಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಭಾಷಣದ ಮಧ್ಯೆ ಯೋಗೇಶ್ವರ್, ‘ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ’ ಎಂದರು. ಆಗ ಕಾರ್ಯಕರ್ತರು ‘ಕಾಂಗ್ರೆಸ್‌ ಸರ್ಕಾರ’ ಎಂದು ಕೂಗಿದಾಗ ಸರಿಪಡಿಸಿಕೊಂಡರು.

ಶಾಸಕರಾದ ಶ್ರೀನಿವಾಸ್, ಆನೇಕಲ್ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಎಸ್‌. ರವಿ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸೌಮ್ಯಾ ರೆಡ್ಡಿ,  ಮಾಜಿ ಶಾಸಕರಾದ ಎಂ.ಸಿ. ಅಶ್ವಥ್, ಕೆ. ರಾಜು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್‌ಕುಮಾರ್, ಮುಖಂಡರಾದ, ಹನುಮಂತರಾಯಪ್ಪ, ಸಿಂಗರಾಜಪುರ ರಾಜಣ್ಣ, ಶಿವಮಾದು, ಚೇತನ್, ಎಸ್. ಲಿಂಗೇಶ್‌ಕುಮಾರ್, ಪವಿತ್ರಾ ರೆಡ್ಡಿ ಹಾಗೂ ಇತರರು ಇದ್ದರು.

ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮನ್ವಯ ಸಭೆಗೆ ಬಂದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕಾರ್ಯಕರ್ತರಿಗೆ ನಮಸ್ಕರಿಸಿದರು
ನಾನು ಎರಡು ಬಾರಿ ಸೋತು ಸುಣ್ಣವಾಗಿದ್ದೇನೆ. ನನಗೆ ಕಣ್ಣೀರು ಹಾಕಿ ನಾಟಕವಾಡಲು ಬರುವುದಿಲ್ಲ. ಬೆಂಬಲಿಗರು ಹಾಗೂ ಕಾರ್ಯಕರ್ತರು ಒಟ್ಟಾಗಿ ನನಗೆ ಆಶೀರ್ವಾದ ಮಾಡಬೇಕು
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಯಾರನ್ನೂ ಬೆಳೆಸದ ಕುಮಾರಸ್ವಾಮಿ ಎಲ್ಲಾ ಕಡೆ ತಮ್ಮ ಕುಟುಂಬದವರನ್ನೇ ಪ್ರತಿಷ್ಠಾಪಿಸುತ್ತಾರೆ. ನಾವು ಈ ಜಿಲ್ಲೆಯ ಮಕ್ಕಳು. ಚುನಾವಣೆಯಲ್ಲಿ ಜಿಲ್ಲೆಯ ಸ್ವಾಭಿಮಾನವಾದ ಯೋಗೇಶ್ವರ್ ಗೆಲ್ಲಿಸಬೇಕು
ಎಚ್‌.ಸಿ. ಬಾಲಕೃಷ್ಣ ಶಾಸಕ
ತಮ್ಮ ಗೆಲುವಿಗೆ ಹೆಗಲು ಕೊಟ್ಟವರನ್ನು ತುಳಿಯುವುದೇ ದೇವೇಗೌಡರ ಕುಟುಂಬದವರರ ಮಂತ್ರವಾಗಿದೆ. ಯೋಗೇಶ್ವರ್ ಗೆಲ್ಲಿಸುವ ಮೂಲಕ ಅದಕ್ಕೆ ಉತ್ತರ ನೀಡಬೇಕು
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ 

‘ಕುಮಾರಣ್ಣನ ನೋಟು ಯೋಗೇಶಣ್ಣಗೆ ಓಟು ಎನ್ನಿ’

‘ಎಷ್ಟಾದರೂ ಖರ್ಚು ಮಾಡಿ ತಮ್ಮ ಗಮನನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಅದಕ್ಕೆ ನೀವು ಕುಮಾರಣ್ಣನ ನೋಟು ಯೋಗೇಶ್ವರ್‌ಗೆ ಓಟು ಎಂದು ನಿಮ್ಮೂರ ಮಗನನ್ನು ಗೆಲ್ಲಿಸಿ. ಕೆರೆ ತುಂಬಿಸಿದ ಯೋಗೇಶ್ವರ್‌ಗೆ ಕಿರೀಟ ಹಾಕಿ ಬೆಳ್ಳಿ ಗದೆ ಕೊಟ್ಟು ಮೆರವಣಿಗೆ ಮಾಡಿದ್ರಿ. ಚುನಾವಣೆಯಲ್ಲಿ ಎಲ್ಲಾ ಮರೆತು ಕೈ ಕೊಟ್ರಿ. ಯೋಗೇಶ್ವರ್ ಏನು ತಪ್ಪು ಮಾಡಿದ್ರು? ಯಾವಾಗಲೂ ನಿಮ್ಮನ್ನೇ ನಂಬಿಕೊಂಡು ನಿಮ್ಮ ಒಳಿತಿಗಾಗಿಯೇ ರಾಜಕಾರಣ ಮಾಡಿಕೊಂಡು ಬಂದ ತಾಲ್ಲೂಕಿನ ಮಗನನ್ನು ಈ ಸಲ ಕೈ ಬಿಡಬೇಡಿ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು. ‘ಟೂರಿಂಗ್‌ ಟಾಕೀಸ್ ಕುಮಾರಸ್ವಾಮಿ’ ‘ಯೋಗೇಶ್ವರ್ ಅವರನ್ನು ಪಕ್ಷಾಂತರಿ ಎನ್ನುವ ಜೆಡಿಎಸ್‌ನವರಿಗೆ ಅವರ ಪಕ್ಷದ ಕುಮಾರಸ್ವಾಮಿ ಟೂರಿಂಗ್ ಟಾಕೀಸ್ ಎಂಬುದು ನೆನಪಿರಲಿ. ಅವರು ಎಲ್ಲೂ ನಿಲ್ಲುವುದಿಲ್ಲ. ಆದರೆ ಯೋಗೇಶ್ವರ್ ಕ್ಷೇತ್ರ ಬಿಟ್ಟು ಎಲ್ಲೂ ಹೋದವರಲ್ಲ. ಕ್ಷೇತ್ರ ನೀರು ಕೊಟ್ಟರು. ಡಿ.ಕೆ ಸಹೋದರರು ರೈತರಿಗೆ ಟ್ರಾನ್ಸ್‌ಫಾರ್ಮರ್ ಕೊಟ್ಟರು. ಕುಮಾರಸ್ವಾಮಿ ಏನು ಕೊಟ್ಟರು? ಇನ್ನೂ ಮೂರು ವರ್ಷ ನಮ್ಮದೇ ಸರ್ಕಾರವಿರಲಿದೆ. ಯೋಗೇಶ್ವರ್ ಗೆದ್ದರೆ ಹೆಚ್ಚು ಅನುದಾನ ತಂದು ಕೆಲಸ ಮಾಡುತ್ತಾರೆ. ಸ್ಥಳೀಯ ಸ್ವಾಭಿಮಾನ ಉಳಿಯಬೇಕಾದರೆ ಅವರು ಗೆಲ್ಲಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು. ‘ಸ್ಥಳೀಯರು ಬೇಕೊ ಹೊರಗಿನವರು ಬೇಕೊ’ ‘ಕ್ಷೇತ್ರಕ್ಕೆ ನೀರು ಕೊಟ್ಟ ಸ್ಥಳೀಯ ಸ್ವಾಭಿಮಾನಿ ಯೋಗೇಶ್ವರ್ ಅವರನ್ನು ಕ್ಷೇತ್ರದ ಜನರು ಉಳಿಸಿಕೊಳ್ಳುವ ಮೂಲಕ ಹೊರಗಿನಿಂದ ಬಂದು ಠಿಕಾಣಿ ಹೂಡಿ ಕಣ್ಣೀರು ಹಾಕುತ್ತಾ ರಾಜಕಾರಣ ಮಾಡುವವರನ್ನು ಜಿಲ್ಲೆಯಿಂದ ಕಳಿಸಬೇಕು. ರಾಜ್ಯದಲ್ಲಿ ಮೂರು ಕಡೆ ಚುನಾವಣೆ ನಡೆಯುತ್ತಿದ್ದರೂ ಚನ್ನಪಟ್ಟಣದ ಚುನಾವಣೆಯು ರಾಜ್ಯ ರಾಜಕಾರಣದ ಮುಂದಿನ ದಿಕ್ಕು ಬದಲಿಸಲಿದೆ. ಮುಂದೆ ನಿಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಅರಸಿಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.