ADVERTISEMENT

ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಪಾಲ್ಗೊಳ್ಳುವುದಿಲ್ಲ

ಮುಂದೂಡಿಕೆಯಲ್ಲಿ ಶಾಸಕರ ಪಾತ್ರವಿಲ್ಲ: ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:03 IST
Last Updated 11 ಜುಲೈ 2024, 6:03 IST
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು ದಾಖಲೆ ಪ್ರದರ್ಶಿಸಿದರು. ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ರಮೇಶ್, ಪಕ್ಷದ ಮುಖಂಡರು ಇದ್ದಾರೆ
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು ದಾಖಲೆ ಪ್ರದರ್ಶಿಸಿದರು. ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ರಮೇಶ್, ಪಕ್ಷದ ಮುಖಂಡರು ಇದ್ದಾರೆ   

ರಾಮನಗರ: ‘ತಾಲ್ಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರ ಪಾತ್ರವಿಲ್ಲ. ಜುಲೈ 22ರಂದು ಮತ್ತೆ ನಿಗದಿಯಾಗಿರುವ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಪಾಲ್ಗೊಳ್ಳುವುದಿಲ್ಲ’ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು ಹೇಳಿದರು.

‘ಜೂನ್ 29ಕ್ಕೆ ನಿಗದಿಯಾಗಿದ್ದ ಚುನಾವಣೆಗೂ ಮುಂಚೆ ನಡೆದಿದ್ದ ಶಾಂತಿಸಭೆ ವಿಫಲವಾಗಿದ್ದರಿಂದ, ಜುಲೈ 8ಕ್ಕೆ ಮುಂದೂಡಲಾಗಿತ್ತು. ಆಗಲೂ ಶಾಂತಿಸಭೆ ಫಲ ಕೊಡದಿದ್ದರಿಂದ, ಜಿಲ್ಲಾಧಿಕಾರಿ ಸೂಚನೆಯೊಂದಿಗೆ ಸಹಕಾರ ಸಂಘಗಳ ಇಲಾಖೆ ಅಧಿಕಾರಿಗಳು ಮತ್ತೆ ಮುಂದೂಡಿದರು’ ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಘಕ್ಕೆ 2022ರಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಬೆಂಬಲಿತ 7 ಮತ್ತು ಜೆಡಿಎಸ್ ಬೆಂಬಲಿತ 5 ನಿರ್ದೇಶಕರು ಆಯ್ಕೆಯಾಗಿದ್ದರು. ಆಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಅನಸೂಯಮ್ಮ ಸ್ಪರ್ಧಿಸಿದ್ದರು. ಅವರನ್ನು ತಡೆಯುವುದಕ್ಕಾಗಿ ಜೆಡಿಎಸ್ ಬೆಂಬಲಿತ ಕೃಷ್ಣೇಗೌಡ ಮತ್ತು ಸುರೇಶ್ ಅವರು ಚುನಾವಣಾಧಿಕಾರಿ ಉಮೇಶ್ ಕೆ.ಟಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮತಪತ್ರ ಹರಿದು ಹಾಕಿದ್ದರು’ ಎಂದರು.

ADVERTISEMENT

‘ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಂತರ ನಡೆದ ಚುನಾವಣೆಯಲ್ಲಿ ಸುರೇಶ್ ಅವರೇ 26 ತಿಂಗಳು ಅಧ್ಯಕ್ಷರಾಗಿ ಆಡಳಿತ ನಡೆಸಿ, ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಸದ್ಯ ಅವರ ವಿರುದ್ಧದ ಪ್ರಕರಣವು ಕೋರ್ಟ್‌ನಲ್ಲಿದೆ. ಪ್ರಕರಣ ಇತ್ಯರ್ಥವಾದ ಬಳಿಕ ಚುನಾವಣೆ ನಡೆಸಬೇಕೆಂಬುದು ನಮ್ಮ ಒತ್ತಾಯವಾಗಿದ್ದು, ಕಾನೂನು ಹೋರಾಟ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

‘ಕ್ರಿಮಿನಲ್ ಅಪರಾಧಕ್ಕಾಗಿ ಅವರಿಬ್ಬರು ನಿರ್ದೇಶಕ ಸ್ಥಾನದಿಂದ ವಜಾವಾಗುವ ಸಾಧ್ಯತೆ ಇದೆ. ವಾಮಮಾರ್ಗದಲ್ಲಿ ಸಂಘದ ಮೇಲೆ ನಾವು ಹಿಡಿತ ಸಾಧಿಸದೆ, ಕಾನೂನು ಹೋರಾಟದಲ್ಲಿ ನಂಬಿಕೆ ಇಟ್ಟಿದ್ದೇವೆ. ಸದ್ಯ ಸಂಘದಲ್ಲಿ ಕಾಂಗ್ರೆಸ್‌ ಬೆಂಬಲಿತ ಐವರಿದ್ದು, ಮುಂಬರುವ ಚುನಾವಣೆಯಿಂದ ದೂರ ಉಳಿಯಲಿದ್ದಾರೆ’ ಎಂದು ತಿಳಿಸಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಮುಖಂಡರಾದ ರಮೇಶ್‌, ರಾಜಶೇಖರ್, ರವಿ, ಮಂಚೇಗೌಡ, ಪ್ರಾಣೇಶ್, ಪಾರ್ಥ ಹಾಗೂ ಇತರರು ಇದ್ದರು.

Quote - ಪ್ರತಿಭಟನೆ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದವರ ಪರ ನಿಂತು ಗೂಂಡಾವರ್ತನೆ ತೋರಿರುವ ಪುತ್ರ ನಿಖಿಲ್ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಬುದ್ಧಿ ಹೇಳಲಿ – ಕೆ. ರಾಜು ಅಧ್ಯಕ್ಷ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

ನಿಖಿಲ್ ಗೂಂಡಾ ವರ್ತನೆ ಬಿಡಲಿ: ಲಿಂಗಪ್ಪ

‘ಸಂಘದ ವಿಷಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೂಂಡಾವರ್ತನೆ ತೋರಿದ್ದಾರೆ. ಅವಾಚ್ಯ ಶಬ್ದ ಬಳಸಿ ತಮ್ಮ ಹಾಸನದ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ. ಕಚೇರಿ ಗಾಜು ಒಡೆಯುವಂತಹ ದಬ್ಬಾಳಿಕೆ ಜಿಲ್ಲೆಯಲ್ಲಿ ಎಂದೂ ನಡೆದಿರಲಿಲ್ಲ. ಈ ದಬ್ಬಾಳಿಕೆ ಮತ್ತು ದೌರ್ಜನ್ಯ ಬಿಡಬೇಕು. ಇಲ್ಲದಿದ್ದರೆ ಅದಕ್ಕೆ ನಾವೂ ನೀಡುವ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅವರ ತಾತ ಎಚ್‌.ಡಿ. ದೇವೇಗೌಡ ತಂದೆ ಎಚ್‌.ಡಿ. ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಅವರ ದಬ್ಬಾಳಿಕೆ ಅವರ ವಿರುದ್ಧ ಹೋರಾಡಿರುವ ನಮಗೆ ಇದ್ಯಾವುದೂ ಹೊಸದಲ್ಲ. ನಿಖಿಲ್ ಗೂಂಡಾವರ್ತನೆ ಬಿಡಬೇಕು’ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಎಚ್ಚರಿಕೆ ನೀಡಿದರು. ‘ಅವಿನಾಶ್ ಪ್ರಾಮಾಣಿಕರೇ ಹೊರತು ದಕ್ಷರಲ್ಲ’ ‘ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತೀರಾ ಪ್ರಾಮಾಣಿಕ. ಆದರೆ ದಕ್ಷ ಅಧಿಕಾರಿಯಲ್ಲ. ಕಡತಕ್ಕೆ ಅವರಿಂದ ಸಹಿ ಬಿದ್ದರೂ ಮುಂದಕ್ಕೆ ಹೋಗುತ್ತಿರಲಿಲ್ಲ. ಹಣ ಕೊಡದ ಹೊರತು ನನ್ನ ಕೆಲಸದ ಕಡತವೂ ಮುಂದಕ್ಕೆ ಹೋಗುತ್ತಿರಲಿಲ್ಲ. ಇನ್ನು ಸಾಮಾನ್ಯರ ಕತೆ ಏನಿರಬೇಕೆಂದು ನೀವೇ ಊಹಿಸಿ’ ಎಂದು ಪ್ರಶ್ನೆಯೊಂದಕ್ಕೆ ಲಿಂಗಪ್ಪ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.