ರಾಮದುರ್ಗ: ಕುಟುಂಬದ ನಿರ್ವಹಣೆಗಾಗಿ ಮಹಿಳೆಯರಿಗೆ ಕಾಂಗ್ರೆಸ್‌ಸರ್ಕಾರ ಗಟ್ಟಿ ಯೋಜನೆಗಳನ್ನು ಜಾರಿ ಮಾಡಿದೆ. ಇನ್ನೊಂದು ಸಾರಿ ಅಶೋಕ ಪಟ್ಟಣವ ಅವರನ್ನು ಗೆಲ್ಲಿಸಬೇಕು ಎಂದು ಚಲನಚಿತ್ರ ನಟಿ ಉಮಾಶ್ರೀ ಹೇಳಿದರು.
ಶನಿವಾರ ಸಂಜೆ ತಾಲ್ಲೂಕಿನ ಕಟಕೋಳ, ಹಲಗತ್ತಿ, ರಾಮದುರ್ಗ ಮತ್ತು ಸುರೇಬಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಪರ ಮತಯಾಚನೆ ಮಾಡಿದ ಅವರು, ಬಿಪಿಎಲ್ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ರೂ. 2ಸಾವಿರ, 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಬಡವರ ಅನುಕೂಲಕ್ಕಾಗಿ ಹಲವಾರ ಜನಪರ ಯೋಜನೆಗಳು ಕಾಂಗ್ರೆಸ್ ಪಕ್ಷ ನೀಡುತ್ತಿದೆ. ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ರಾಜ್ಯದ ಜನಸಾಮಾನ್ಯರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದೆ. ಅಧಿಕಾರಕ್ಕೆ ಬಂದ ತಕ್ಷಣ ಅನುಷ್ಠಾನ ಮಾಡಲಾಗುವುದು. ಮತದಾರರು ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಾಸವಿಟ್ಟು ಬೆಂಬಲಿಸುವಂತೆ ಮಾಜಿ ಸಚಿವೆ ಉಮಾಶ್ರೀ ಮನವಿ ಮಾಡಿದರು.
ಬಿಜೆಪಿಯ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ. ಬಡವರು ನೆಮ್ಮದಿಯ ಜೀವನಕ್ಕೆ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಸೇರಿದಂತೆ ಬಡವರ ಸಹಾಯಕ್ಕೆ ಬರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಮಾತನಾಡಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ವೀರಭದ್ರೇಶ್ವರ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಿದ್ದು ರಾಮದುರ್ಗ ನಗರಕ್ಕೆ ಮಲಪ್ರಭಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆಯಂತಹ ಪ್ರಮುಖ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಹೇಳಿದರು.
ರಾಮದುರ್ಗವನ್ನು ಪ್ರವಾಸಿ ಸ್ಥಾನ ಮಾಡಲು ತಾಲ್ಲೂಕಿನ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಾಗಿ ತಮಗೆ ಆಶಿರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಹೂರ ಹಾಜಿ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಶಿವಾನಂದ ಚಿಕ್ಕೋಡಿ, ಮಂಜುಳಾ ದೇವರಡ್ಡಿ, ಗಾಯತ್ರಿ ದೇವಾಂಗಮಠ, ಸೋಮಶೇಖರ ಸಿದ್ಲಿಂಗಪ್ಪನವರ, ಈರಪ್ಪ ಕೊಣ್ಣೂರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.