ADVERTISEMENT

ಬದಲಾಯಿಸಲು ಸಂವಿಧಾನವೇನು ಪಠ್ಯ ಪುಸ್ತಕವೇ?: ಎನ್. ಮಹೇಶ್ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 5:25 IST
Last Updated 20 ಏಪ್ರಿಲ್ 2024, 5:25 IST
ರಾಮನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿದರು. ಜೆಡಿಎಸ್ ವಕ್ತಾರ ನರಸಿಂಹಮೂರ್ತಿ, ಬಿಜೆಪಿ ಉಸ್ತುವಾರಿ ವಿಜಯಕುಮಾರ್, ಗಿರಿಗೌಡ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆನಂದ ಸ್ವಾಮಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಚಂದ್ರು ಹಾಗೂ ಇತರರು ಇದ್ದಾರೆ
ರಾಮನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿದರು. ಜೆಡಿಎಸ್ ವಕ್ತಾರ ನರಸಿಂಹಮೂರ್ತಿ, ಬಿಜೆಪಿ ಉಸ್ತುವಾರಿ ವಿಜಯಕುಮಾರ್, ಗಿರಿಗೌಡ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆನಂದ ಸ್ವಾಮಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಚಂದ್ರು ಹಾಗೂ ಇತರರು ಇದ್ದಾರೆ   

ರಾಮನಗರ: ‘ಸಂವಿಧಾನ ಅಪಾಯದಲ್ಲಿದೆ. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಅರಚಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಬದಲಾವಣೆ ಮಾಡಲು ಸಂವಿಧಾನವೇನು ಪಠ್ಯಪುಸ್ತಕವೇ?’ ಎಂದು ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

‘ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಪಿತೂರಿ ನಡೆಸಿರುವ ಕಾಂಗ್ರೆಸ್‌ನವರು, ಈ ಕುರಿತು ವ್ಯಾಪಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಾಕ್ಷಾತ್ ಡಾ. ಬಿ.ಆರ್. ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪರಿಶಿಷ್ಟರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಅನಿಸಿಕೆ ಸಾಮಾನ್ಯವಾಗಿದೆ. ಆದರೆ, ಅದು ಸುಳ್ಳು. ಈ ಸಮುದಾಯ ಕಾಂಗ್ರೆಸ್‌ ಸ್ವತ್ತಲ್ಲ. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ನವರು ಮಾಡಿರುವ ಅನ್ಯಾಯದ ಕುರಿತು ಸಮುದಾಯ ಎಚ್ಚೆತ್ತುಕೊಂಡಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಪರಿಶಿಷ್ಟರು ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬೋಗಸ್ ಗ್ಯಾರಂಟಿ: ‘ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರಿಗೆ ಬೋಗಸ್ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಗೆದ್ದಿರುವ ರಾಹುಲ್ ಗಾಂಧಿ ಅವರು, ಲೋಕಸಭಾ ಚುನಾವಣೆಯಲ್ಲೂ ಇಂತಹದ್ದೇ ಗ್ಯಾರಂಟಿಗಳನ್ನು ಕೊಟ್ಟು ದೇಶದಾದ್ಯಂತ 270 ಸೀಟುಗಳನ್ನು ಪಡೆಯುವ ಉತ್ಸಾಹದಲ್ಲಿದ್ದಾರೆ. ಆದರೆ, ಉತ್ತರ ಭಾರತದ ಎಲ್ಲಾ ಕ್ಷೇತ್ರಗಳಲ್ಲೂ ಈ ಸಲವೂ ಬಿಜೆಪಿ ಜಯಭೇರಿ ಬಾರಿಸಲಿದೆ. ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ’ ಎಂದರು.

‘ಕಾಂಗ್ರೆಸ್‌ನವರ ನರೇಗಾ ಕೂಲಿ ₹400ಕ್ಕೆ ಹೆಚ್ಚಳ, ಆರೋಗ್ಯ ವಿಮೆ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಎಲ್ಲವೂ ಬೋಗಸ್‌ ಗ್ಯಾರಂಟಿಗಳಾಗಿವೆ. 21 ಕೋಟಿ ಬಿಪಿಎಲ್ ಕುಟುಂಬಗಳಲ್ಲಿರುವ ಮಹಿಳೆಯರಿಗೆ ₹1 ಲಕ್ಷ ಕೊಟ್ಟರೆ, ಆ ಮೊತ್ತ ದೇಶದ ಬಜೆಟ್‌ ಅನ್ನು ಮೀರಲಿದೆ. ಇದು ನಿಜಕ್ಕೂ ಸಾಧ್ಯವೆ? ಮತಕ್ಕಾಗಿ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಲ್ಲವೇ? ಕಾಂಗ್ರೆಸ್‌ನವರಂತೆ ಸುಳ್ಳು ಗ್ಯಾರಂಟಿ ನೀಡದ ಮೋದಿ ಅವರು, ಜನರಿಗೆ ನಾನೇ ಗ್ಯಾರಂಟಿ ಎಂದು ಅಭಿವೃದ್ಧಿಯ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಜೆಡಿಎಸ್ ವಕ್ತಾರ ನರಸಿಂಹಮೂರ್ತಿ, ಬಿಜೆಪಿ ಉಸ್ತುವಾರಿ ವಿಜಯಕುಮಾರ್, ಜಿಲ್ಲಾ ಅಧ್ಯಕ್ಷ ಆನಂದ ಸ್ವಾಮಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಚಂದ್ರು,  ಮುಖಂಡ ಗಿರಿಗೌಡ, ಶಿವಾನಂದ, ಜಯಕುಮಾರ್, ದರ್ಶನ್ ರೆಡ್ಡಿ ಹಾಗೂ ಇತರರು ಇದ್ದರು.

‘ದಿಕ್ಕು ತಪ್ಪಿಸುತ್ತಿರುವ ಸಾಹಿತಿಗಳು’

‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿರುವ ಸಾಹಿತಿಗಳು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಾ ಕಾಂಗ್ರೆಸ್‌ಗೆ ಮತ ಹಾಕಿ ಎನ್ನುತ್ತಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಜಾರಿ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ. ಒಂದು ವೇಳೆ ಮಾಡದಿದ್ದರೆ ಅವರ ಕೊರಳಪಟ್ಟಿ ಹಿಡಿದು ಕೇಳಬಹುದು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೇ ಜಾರಿಗೆ ತರುವುದು’ ಎಂದು ಎನ್. ಮಹೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.