ಮಾಗಡಿ: ಹಲವು ವರ್ಷಗಳಿಂದ ಮಾಗಡಿ ತಾಲ್ಲೂಕಿನಲ್ಲಿ ರೈತರಿಗಾಗಿ ಸ್ವಂತ–ಸುಸಜ್ಜಿತ ಭವನದ ಬೇಡಿಕೆ ಇತ್ತು. ಅದರಂತೆ ₹ 6 ಕೋಟಿ ವೆಚ್ಚದಲ್ಲಿ ಕ್ಷೀರ ಭವನ ನಿರ್ಮಾಣ ಮಾಡಲಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಪಿ. ರಾಜಕುಮಾರ್ ಹೇಳಿದರು.
ಪಟ್ಟಣದ ಹೊಸಪೇಟೆಯಲ್ಲಿ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ನೂತನ ಶಿಬಿರ ಕಚೇರಿ, ಕ್ಷೀರ ಭವನ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಇಷ್ಟು ದಿನ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿತ್ತು. ಶಾಸಕ ಬಾಲಕೃಷ್ಣ ಅವರ ಸಹಕಾರ ಹಾಗೂ ಆಡಳಿತ ಮಂಡಳಿಯ ಬೆಂಬಲದೊಂದಿಗೆ ₹ 6 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಲಾಗಿದೆ. ಇಂದು (ಸೆ.13, ಶುಕ್ರವಾರ) ಭವನ ಲೋಕಾರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಪ್ರಕಾರ, ರೈತರಿಗೆ ಪ್ರೋತ್ಸಾಹ ಧನ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ನೂತನ ಕ್ಷೀರ ಭವನ ಪರಿಶೀಲನೆ ವೇಳೆ ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಎಂ. ಮಂಜುನಾಥ್, ನಿರ್ದೇಶಕರಾದ ಕೆ.ಎಂ.ಕೃಷ್ಣಯ್ಯ, ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ಸಿ.ವಿ.ರಾಜಣ್ಣ, ಉಪ ವ್ಯವಸ್ಥಾಪಕರಾದ ಡಾ. ಅಜಯ್, ವಿಸ್ತೀರ್ಣಾಧಿಕಾರಿ ಪ್ರಮೋದ್, ಮಂಜುಳಾ, ತಾವರೆಕೆರೆ ಡಿ.ಎಂ. ರಂಗಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.