ರಾಮನಗರ: ಕ್ಷುಲ್ಲಕ ಕಾರಣಕ್ಕಾಗಿ ಬೇರ್ಪಟ್ಟಿದ್ದ ದಂಪತಿ ಮತ್ತೆ ಒಂದಾದ ಘಟನೆಗೆ ರಾಮನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ್ ಅದಾಲತ್ ಸಾಕ್ಷಿಯಾಯಿತು.
ನಗರದ ಭೂಕುಮಾರ್ ಮತ್ತು ಆಶಾರಾಣಿ ಒಂದಾದ ದಂಪತಿ. ಬೇರ್ಪಡುವುದಕ್ಕಾಗಿ ಕೋರ್ಟ್‌ಗೆ ಬರುತ್ತಿದ್ದ ದಂಪತಿ, ಇದೀಗ ಅದೇ ಕೋರ್ಟ್‌ನಲ್ಲಿ ನಡೆದ ಅದಾಲತ್‌ನಲ್ಲಿ ಪರಸ್ಪರ ಹಾರ ಬದಲಿಸಿಕೊಂಡು ಮತ್ತೆ ಕೈ ಹಿಡಿದರು.
ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಇತ್ತೀಚೆಗೆ ದೂರಾಗಿದ್ದ ದಂಪತಿ, ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
‘ಮೂವರು ಮಕ್ಕಳಿರುವ ನೀವು ಬೇರೆಯಾದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಹಾಗಾಗಿ, ಭಿನ್ನಾಭಿಪ್ರಾಯ ಬದಿಗಟ್ಟು ಮತ್ತೆ ಒಂದಾಗಿ ಸುಖವಾಗಿ ಬಾಳಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಟಿ. ಮಹೇಶ್ ಹಾಗೂ ವಕೀಲರು ದಂಪತಿಗೆ ಕಿವಿಮಾತು ಹೇಳಿ ಸಂಧಾನ ಮಾಡಿಸಿದರು. ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ದಂಪತಿ, ವೈಮನಸ್ಸು ಮರೆತು ನ್ಯಾಯಾಧೀಶರು ಮತ್ತು ವಕೀಲರ ಸಮ್ಮುಖದಲ್ಲಿ ಮತ್ತೆ ಒಂದಾದರು.
‘ಆತುರಪಟ್ಟು ಕ್ಷುಲ್ಲಕ ಕಾರಣಗಳಿಗಾಗಿ ವೈವಾಹಿಕ ಜೀವನವನ್ನು ಯಾರೂ ಹಾಳು ಮಾಡಿಕೊಳ್ಳಬಾರದು. ಸಂಸಾರದಲ್ಲೇ ಏನೇ ಬಂದರೂ, ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಅನುಸರಿಸಿಕೊಂಡು ಬದುಕಬೇಕು. ದಂಪತಿ ಜಗಳ ಮಕ್ಕಳ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ವಿ. ರೇಣುಕಾ ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್, ದಂಪತಿಗಳು ಮತ್ತೆ ಒಂದುಗೂಡಲು ಪ್ರೇರೆಪಿಸಿದ ವಕೀಲರಾದ ಎಂ.ಎ. ಮಣಿ, ವರಲಕ್ಷ್ಮಿ, ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ವಕೀಲರಾದ ಎಲ್.ವಿ. ಪೂರ್ಣಿಮಾ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.