ADVERTISEMENT

ರಾಮನಗರ | ಮರಳಿ ಮನೆಗೆ ಬಂದಿದ್ದೇನೆ: ಯೋಗೇಶ್ವರ್

ಇಂದು ಕಾಂಗ್ರೆಸ್‌ನಿಂದ ‘ಸೈನಿಕ’ ನಾಮಪತ್ರ ಸಲ್ಲಿಕೆ; ಬೆಂಬಲಿಗರಲ್ಲಿ ಗರಿಗೆದರಿದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:36 IST
Last Updated 24 ಅಕ್ಟೋಬರ್ 2024, 6:36 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ಚನ್ನಪಟ್ಟಣ (ರಾಮನಗರ): ‘ನನ್ನ ರಾಜಕಾರಣ ಜೀವನ ಶುರುವಾಗಿದ್ದು ಯುವ ಕಾಂಗ್ರೆಸ್‌ನಿಂದ. ನಂತರ ಸಣ್ಣಪುಟ್ಟ ರಾಜಕೀಯ ವ್ಯತ್ಯಾಸದಿಂದಾಗಿ ಪಕ್ಷವನ್ನು ಬಿಟ್ಟಿದ್ದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಮರಳಿ ನನ್ನ ಮನೆಗೆ ಬಂದಿದ್ದೇನೆ’ ಎಂದು ಉಪ ಚುನಾವಣೆಯ ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಬುಧವಾರ ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಪಟ್ಟಣದಲ್ಲಿರುವ ತಾಲ್ಲೂಕು ಕಾಂಗ್ರೆಸ್ ಕಚೇರಿಗೆ ಸಂಜೆ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರೊಂದಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಗುರುವಾರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ. ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿರುವುದರಿಂದ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ಯೋಗೇಶ್ವರ್ ನಮ್ಮ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ. ರಾಜ್ಯ ಹಾಗೂ ದೇಶದ ಗಮನ ಸೆಳೆಯುವ ಕ್ಷೇತ್ರವಾಗಿರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತ. ಸಿಪಿವೈ ಹಾಗೂ ನಾವೆಲ್ಲರೂ ಅಣ್ಣ–ತಮ್ಮಂದಿರಂತೆ ಇದ್ದೇವೆ. ನಾಮಪತ್ರ ಸಲ್ಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ಯಶಸ್ವಿಗೊಳಿಸಬೇಕು’ ಎಂದರು.

ಬಿಜೆಪಿ ಬ್ಯಾನರ್ ತೆರವು: ಯೋಗೇಶ್ವರ್ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರುವುದು ಖಚಿತವಾಗುತ್ತಿದ್ದಂತೆ, ಇತ್ತ ಬಿಜೆಪಿ ತಾಲ್ಲೂಕು ಕಚೇರಿಯಂತಿದ್ದ ಪಟ್ಟಣದ ಕುವೆಂಪು ನಗರದಲ್ಲಿರುವ ಅವರ ಮನೆಯಲ್ಲಿ ಬಿಜೆಪಿ ಬ್ಯಾನರ್, ಬಂಟಿಂಗ್ಸ್, ಬಾವುಟಗಳನ್ನು ಬೆಂಬಲಿಗರು ತೆರವುಗೊಳಿಸಿದರು. ಮನೆಯ ಹೊರಗಡೆ, ತಳಮಹಡಿಯಲ್ಲಿದ್ದ ಕಚೇರಿಯೊಳಗೆ ಅಂಟಿಸಿದ್ದ ಬಿಜೆಪಿಯ ಪೋಸ್ಟರ್ ಸೇರಿದಂತೆ ಎಲ್ಲವನ್ನು ಕಿತ್ತು ಸ್ವಚ್ಛಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.