ADVERTISEMENT

ಅಡುಗೆ ಸಹಾಯಕನಿಗೆ ಜಾತಿ ನಿಂದನೆ: ವಾರ್ಡನ್ ವಿರುದ್ಧ ಎಫ್‌ಐಆರ್

ಸಹಾಯಕ ಸೇರಿ ನಾಲ್ವರ ವಿರುದ್ಧ ಕೊಲೆ ಯತ್ನ ದೂರು ಕೊಟ್ಟಿದ್ದ ವಾರ್ಡನ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 4:41 IST
Last Updated 11 ಜೂನ್ 2024, 4:41 IST

ರಾಮನಗರ: ನಗರದ ಹೊರವಲಯದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ನ ಅಡುಗೆ ಸಹಾಯಕಿ ವಿಜಯಾ ಎಂಬುವರಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ, ವಾರ್ಡನ್ ಯೋಗೇಶ್ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.

ವಿಜಯಾ ಅವರು ಜೂನ್ 7ರಂದು ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಯೋಗೇಶ್, ‘ವಾಟರ್ ಫಿಲ್ಟರ್ ಸರಿಸಿ ಶುಚಿಗೊಳಿಸುವಂತೆ ಸೂಚಿಸಿದರು. ಅದು ಭಾರವಾಗಿರುವುದರಿಂದ ನನ್ನಿಂದಾಗದು. ಬೇರೆಯವರಿಂದ ಪಕ್ಕಕ್ಕೆ ಸರಿಸಿ ಕೊಟ್ಟರೆ, ಶುಚಿಗೊಳಿಸುವೆ ಎಂದೆ. ಆಗ ಅವರು, ಜಾತಿ ಹೆಸರಿನಲ್ಲಿ ನಿಂದಿಸಿದರು. ಹೇಳಿದ ಕೆಲಸ ಮಾಡದಿದ್ದರೆ ಕತ್ತು ಹಿಡಿದು ಆಚೆ ತಳ್ಳುವೆ ಎಂದರು. ನನ್ನನ್ನು ಯಾಕೆ ನಿಂದಿಸುತ್ತೀರಿ? ಈ ಕುರಿತು ಅಧಿಕಾರಿಗಳಿಗೆ ದೂರು ಕೊಡುವೆ ಎಂದಿದ್ದಕ್ಕೆ, ಏನು ಕಿತ್ತುಕೊಳ್ಳುತ್ತೀಯಾ ಕಿತ್ತುಕೊ ಎಂದು ಬೆದರಿಕೆ ಹಾಕಿದರು’ ಎಂದು ಆರೋಪಿಸಿ ದೂರು ಕೊಟ್ಟಿದ್ದಾರೆ. ದೂರಿನ ಮೇರೆಗೆ, ಯೋಗೇಶ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯ ವಿರುದ್ಧವೂ ಪ್ರಕರಣ: ಸದ್ಯ ದೂರು ಕೊಟ್ಟಿರುವ ಅಡುಗೆ ಸಹಾಯಕ ವಿಜಯಾ ಸೇರಿದಂತೆ ನಾಲ್ವರ ವಿರುದ್ಧ ವಾರ್ಡನ್ ಯೋಗೇಶ್ ಅವರ ಕೊಲೆ ಯತ್ನ ಆರೋಪದಡಿ, ಇದೇ ಗ್ರಾಮಾಂತರ ಠಾಣೆಯಲ್ಲಿ ಮೇ 29ರಂದು ಪ್ರಕರಣ ದಾಖಲಾಗಿದೆ.

ADVERTISEMENT

‘ಬೈಕ್‌ನಲ್ಲಿ ಹೋಗುತ್ತಿದ್ದ ನನಗೆ ಹಿಂದಿನಿಂದ ಕಾರಿನಲ್ಲಿ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಲಾಗಿತ್ತು. ಕೆಳಕ್ಕೆ ಬಿದ್ದಿದ್ದ ನಾನು ಹೆಲ್ಮೆಟ್ ಧರಿಸಿದ್ದರಿಂದ ಬದುಕುಳಿದಿದ್ದೆ. ಘಟನೆ ಬಳಿಕ, ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದ. ಇಲಾಖೆಯಲ್ಲಿದ್ದ ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಮಧುಮಾಲಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್ ಹಾಗೂ ಹಾಸ್ಟೆಲ್ ಅಡುಗೆ ಸಹಾಯಕ ವಿಜಯಾ ಕಾರಿನಿಂದಿ ಡಿಕ್ಕಿ ಹೊಡೆಸಿ ನನ್ನ ಕೊಲೆಗೆ ಯತ್ನಿಸಿದ್ದಾರೆ. ನನಗೆ ಪ್ರಾಣಾಪಾಯವಿದೆ’ ಎಂದು ಆರೋಪಿಸಿ ಯೋಗೇಶ್ ದೂರು ಕೊಟ್ಟಿದ್ದರು. ಆ ಮೇರೆಗೆ ಪೊಲೀಸರು ಕಾರು ಚಾಲಕ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಸದ್ಯ ಎರಡೂ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.