ADVERTISEMENT

ಗಣಿ ಇಲಾಖೆ ಕಚೇರಿ ಬಳಿ ಲಾರಿ ಮಾಲೀಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:42 IST
Last Updated 28 ಅಕ್ಟೋಬರ್ 2024, 18:42 IST
ನಾಗೇಶ್
ನಾಗೇಶ್   

ರಾಮನಗರ: ನಗರದ ಹೊರವಲಯದ ವಡೇರಹಳ್ಳಿಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಬಳಿ ಸೋಮವಾರ ಲಾರಿ ಮಾಲೀಕ ನಾಗೇಶ್ ಸಿ. (45) ಎಂಬುವರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಾರಿ ಜಪ್ತಿ ಮಾಡಿದ್ದ ಅಧಿಕಾರಿಗಳು ದಂಡದ ಹೆಸರಿನಲ್ಲಿ ₹8 ಲಕ್ಷ ನೀಡುವಂತೆ ಕಿರುಕುಳ ನೀಡಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಸಾಲ ಮಾಡಿ ಲಾರಿ ಖರೀದಿಸಿದ್ದ ನಾಗೇಶ್ ಜಲ್ಲಿ ಸಾಗಿಸುತ್ತಿದ್ದರು. ಲಾರಿ ತಡೆದಿದ್ದ ಅಧಿಕಾರಿಗಳು ಖನಿಜ ಸಾಕಾಣಿಕೆ ಪರವಾನಗಿ ಇಲ್ಲದೆ ಜಲ್ಲಿ ಸಾಗಿಸುತ್ತಿರುವ ಕುರಿತು ಅ. 9ರಂದು ನಾಗೇಶ್ ಅವರಿಗೆ ನೋಟಿಸ್ ಕಳಿಸಿ, 15 ದಿನದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದರು. ನಾಗೇಶ್ ಕಚೇರಿಗೆ ಹೋದಾಗ ದಂಡದ ಹೆಸರಿನಲ್ಲಿ ₹8 ಲಕ್ಷ ನೀಡುವಂತೆ ಕಿರುಕುಳ ಕೊಟ್ಟಿದ್ದರು’ ಎಂದು ಅವರ ಕುಟುಂಬದವರು ದೂರಿದರು.

ADVERTISEMENT

‘ಇತ್ತ ಲಾರಿ ಕಾರ್ಯಾಚರಣೆ ಸ್ಥಗಿತೊಂಡಿದ್ದರಿಂದ ನಷ್ಟ ಅನುಭವಿಸಿದ್ದ ನಾಗೇಶ್, ನಿಗದಿತ ದಂಡದ ಮೊತ್ತವನ್ನಷ್ಟೇ ಕೊಡುವೆ, ಲಾರಿ ಕಾರ್ಯಾಚರಣೆಗೆ ಅನುಮತಿ ಕೊಡಿ ಎಂದು ಕೋರಿದ್ದರು. ಅಧಿಕಾರಿಗಳು ಸ್ಪಂದಿಸದಿದ್ದಾಗ ಬೇಸತ್ತು ಕಚೇರಿ ಬಳಿಯ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಅವರ ಸಾವಿಗೆ ಅಧಿಕಾರಿಗಳ ಕಿರುಕುಳವೇ ಕಾರಣ’ ಎಂದು ಆರೋಪಿಸಿದರು.

ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಲಿಂಗರಾಜು ಸಂಪರ್ಕಕ್ಕೆ ಸಿಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.