ADVERTISEMENT

ಚನ್ನ‍ಪಟ್ಟಣಕ್ಕೆ ಎಚ್‌ಡಿಕೆ ಕೊಡುಗೆ ಏನು: ಡಿ.ಕೆ. ಸುರೇಶ್‌ ಪ್ರಶ್ನೆ

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಡಿ.ಕೆ. ಸುರೇಶ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:10 IST
Last Updated 26 ಅಕ್ಟೋಬರ್ 2024, 15:10 IST
ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಮಾಗಡಿ ಶಾಸಕ ಬಾಲಕೃಷ್ಣ, ಇತರರು ಭಾಗವಹಿಸಿದ್ದರು
ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಮಾಗಡಿ ಶಾಸಕ ಬಾಲಕೃಷ್ಣ, ಇತರರು ಭಾಗವಹಿಸಿದ್ದರು   

ಚನ್ನಪಟ್ಟಣ: ‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಕ್ಷೇತ್ರ ಅಭಿವೃದ್ಧಿಗೆ ಈಗಾಗಲೇ ₹500 ಕೋಟಿ ಅನುದಾನ ನೀಡಿದೆ. ಆದರೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಚನ್ನಪಟ್ಟಣಕ್ಕೆ ಏನು ಕೊಡುಗೆ ನೀಡಿದ್ದಾರೆ. ಎಷ್ಟು ಎಷ್ಟು ಕೋಟಿ ಅನುದಾನ ನೀಡಿದ್ದಾರೆ ಎಂದು ಲೆಕ್ಕ ಕೊಡಲಿ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಸವಾಲು ಹಾಕಿದರು.

ತಾಲ್ಲೂಕಿನ ತಿಟ್ಟಮಾರನಹಳ್ಳಿ, ಮಳೂರು, ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸಿ ಮಾತನಾಡಿದರು.

‘ಸತ್ತೇಗಾಲ ಯೋಜನೆ ಬಗ್ಗೆ ಮಾತನಾಡುವ ಅವರಿಗೆ ಸತ್ತೇಗಾಲ ಎಲ್ಲಿದೆ ಎಂದೇ ಗೊತ್ತಿಲ್ಲ. ನಿಮ್ಮ ಎಲ್ಲಾ ಕಷ್ಟ-ಸುಖಕ್ಕೆ ಯೋಗೇಶ್ವರ್ ಬಂದಿದ್ದಾರೆ. ಕುಮಾರಸ್ವಾಮಿ ಬಂದಿದ್ದಾರಾ’  ಎಂದು ಪ್ರಶ್ನಿಸಿದರು.

ADVERTISEMENT

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧೆ ಮಾಡಿದ್ದಾರೆ. ಅನಿರೀಕ್ಷಿತ ಬೆಳವಣಿಗೆ ಮಧ್ಯೆ ಯೋಗೇಶ್ವರ್ ಮಾತೃ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಿತ್ತು. ಆದರೆ ಸಮಯ ಅವಕಾಶ ಕೊರತೆಯಿಂದ ಅಭಿಪ್ರಾಯ ಸಂಗ್ರಹಿಸಲು ಆಗಲಿಲ್ಲ. ಪಕ್ಷದ ಕಾರ್ಯಕರ್ತರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಜನಪರ ಆಡಳಿತ ನೀಡುತ್ತಿದ್ದು, ಯಾವುದೇ ಬೇಧಭಾವವಿಲ್ಲದೆ ಎಲ್ಲಾ ವರ್ಷದ ಜನರಿಗೂ ಐದು ಗ್ಯಾರಂಟಿ ನೀಡಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ವಿಷಯವನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಪಕ್ಷದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕರೆ ನೀಡಿದರು.

‘ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕತೆ ಬದಲಾಗಿದೆ. ರಾಜ್ಯ ಪ್ರಗತಿ ಸಾಧಿಸುತ್ತಿದೆ. ಇದನ್ನು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಮಾಗಡಿ ಶಾಸಕ ಬಾಲಕೃಷ್ಣ, ಮದ್ದೂರು ಶಾಸಕ ಕದಲೂರು ಉದಯ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕರಾದ ಎಂ.ಸಿ. ಅಶ್ವಥ್, ರಾಜು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್, ಇತರರು ಹಾಜರಿದ್ದರು.

ಯೋಗೇಶ್‌ ಮತ್ತೆ ಮನೆ ಬಂದಿದ್ದಾರೆ...

ಬದಲಾದ ಪರಿಸ್ಥಿತಿಯಲ್ಲಿ ಯೋಗೇಶ್ವರ್ ಬೇರೆ ಪಕ್ಷಕ್ಕೆ ಹೋಗಿದ್ದರು. ಈಗ ಮತ್ತೆ ಯೋಗೇಶ್ವರ್ ಅವರ ಮನೆಗೆ ಬಂದಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಮಾಜಿ ಸಂಸದ ಡಿ.ಕೆ. ಸುರೇಶ್ ಸವಾಲು ಹೇಳಿದರು. ‘ಯೋಗೇಶ್ವರ್ ಅವರು ಸಾಕಷ್ಟು ಮಂದಿಯನ್ನು ಮುಖ್ಯಮಂತ್ರಿ ಮಾಡುವಲ್ಲಿ ಪಾತ್ರ ವಹಿಸಿದ್ದಾರೆ. ಆದರೆ ಅವರ ರಾಜಕೀಯ ಅಂತತ್ರ ಸ್ಥಿತಿ ಬಗ್ಗೆ ಮುಖ್ಯಮಂತ್ರಿಗೆ ತಿಳಿಸಿ ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಹಾಗಾಗಿ ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬೇಡಿ. ಎಲ್ಲರೂ ಒಗ್ಗಟ್ಟಿನಿಂದ ದುಡಿಯಿರಿ’  ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.