ADVERTISEMENT

ಮಾಗಡಿ | ಗೋಡೆಯಲ್ಲಿ ಜಿನುಗುವ ನೀರು; ಉದುರುವ ಸಿಮೆಂಟ್ ಚಾವಣಿ

ವರ್ಷಗಳಿಂದ ದುರಸ್ತಿ ಕಾಣದ ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ; ಖಾಸಗಿ ಶಾಲೆಗೆ ಮಕ್ಕಳ ವಲಸೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:56 IST
Last Updated 21 ಜೂನ್ 2024, 5:56 IST
ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹೊರ ನೋಟ
ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹೊರ ನೋಟ   

ಮಾಗಡಿ: ತಾಲ್ಲೂಕಿನ ಮಾಗಡಿ–ಹುಲಿಯೂರು ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶಿಥಿಲಗೊಂಡು, ಶೋಚನೀಯ ಸ್ಥಿತಿ ತಲುಪಿದೆ. ಹಳೆಯದಾದ ಕಟ್ಟಡದಲ್ಲಿ ಮಳೆ ನೀರು ಸೋರಿಕೆಯಾಗಿ, ಚಾವಣಿಯಿಂದ ಸಿಮೆಂಟ್ ಚೂರುಗಳು ಉದುರುತ್ತಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕದಲ್ಲೇ ಶಾಲೆಗೆ ಬಂದು ಹೋಗುವ ಸ್ಥಿತಿ ಇದೆ.

ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಶಾಲೆಯು, ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ವರ್ಷಗಳಿಂದ ದುರಸ್ತಿ ಕಂಡಿಲ್ಲ. ಮಳೆ–ಗಾಳಿಯಿಂದ ಸುರಕ್ಷತೆ ಇಲ್ಲದ ಕಟ್ಟಡದ ಕೆಲ ಭಾಗಗಳು ಈಗಾಗಲೇ ಕುಸಿದಿವೆ. ಶಿಥಿಲಗೊಂಡಿರುವ ಕಟ್ಟಡವು ಈಗಲೋ ಬೀಳುವ ಮಟ್ಟಕ್ಕೆ ತಲುಪಿವೆ.

ಮಳೆ ಬಂದರೆ ಸಂಕಷ್ಟ: ‘ಶಾಲೆಯ ಎರಡು ಕಟ್ಟಡಗಳನ್ನು ಹೊಂದಿದೆ. ಒಂದು ಕಟ್ಟಡವು ಹೆಂಚಿನದ್ದಾಗಿದ್ದಾರೆ, ಮತ್ತೊಂದು ಆರ್‌ಸಿಸಿಯದ್ದು. ಮಳೆ ಬಂದರೆ ಎರಡೂ ಎರಡೂ ಕಟ್ಟಡಗಳ ಚಾವಣಿಯಿಂದ ನೀರು ಸೋರಲಾರಂಭಿಸಿ, ಶಾಲಾ ಕೊಠಡಿಗಳು ಬಚ್ಚಲು ಮನೆಯಾಗುತ್ತವೆ. ಆಗ, ಮಕ್ಕಳು ಮತ್ತು ಕಲಿಕಾ ಸಾಮಗ್ರಿಗಳು ನೆನೆಯದಂತೆ ಸುರಕ್ಷಿತ ಸ್ಥಳದಲ್ಲಿ ಇರಿಸಿಕೊಳ್ಳುವುದೇ ಶಾಲೆಯ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.

ADVERTISEMENT

ಕಟ್ಟಡದ ಚಾವಣಿ ವಿವಿಧ ಭಾಗವು ಅಲ್ಲಲ್ಲಿ ಪಾಚಿಗಟ್ಟಿದೆ. ಜೋರು ಗಾಳಿ ಬೀಸಿದರೆ ಪೇಯಿಂಟ್ ಮತ್ತು ಸಿಮೆಂಟ್ ಪುಡಿ ಮಕ್ಕಳ ತಲೆ ಮೇಲೆಯೇ ಉದುರುತ್ತದೆ. ಚಾವಣಿಗೆ ಹಾಕಿರುವ ಕಬ್ಬಿಣಗಳು ಸಹ ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಕುಸಿದಿರುವ ಚಾವಣಿಯೊಳಗಿಂದ ತುಕ್ಕು ಹಿಡಿದ ಕಬ್ಬಿಣಗಳು ಹೊರಕ್ಕೆ ಇಣುಕಿವೆ.

ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ: ‘ಹಳೆಯದಾದ ಕಟ್ಟಡ ಚಾವಣಿಯು ಉದುರುತ್ತಿದ್ದು, ಶಾಲೆಯನ್ನು ದುರಸ್ತಿ ಮಾಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಿಆರ್‌ಪಿ ಅವರ ಗಮನಕ್ಕೆ ತರಲಾಗಿದೆ. ಇಲಾಖೆಯ ಅನುದಾನ ಬಂ32ದರೆ, ಶಾಲೆಯ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಹ ಭರವಸೆ ನೀಡಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಟ್ಟಡದ ಸ್ಥಿತಿ ಹಾಗೂ ಮೂಲಸೌಕರ್ಯಗಳ ಕೊರತೆ ಗಮನಿಸಿ ಗ್ರಾಮದ ತಂದೆ–ತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ. ಸದ್ಯ 6 ಮಕ್ಕಳಷ್ಟೇ ಇದ್ದಾರೆ. ಇಲಾಖೆಯು ಆದಷ್ಟು ಬೇಗ ಶಾಲೆಯನ್ನು ಅಭಿವೃದ್ದಿಪಡಿಸಿದರೆ ಮಕ್ಕಳು ಬೇರೆ ಕಡೆಗೆ ಹೋಗದೆ ಇಲ್ಲಿಗೇ ಬಂದು ದಾಖಲಾಗುತ್ತಾರೆ. ಶಾಲೆಯೂ ಉಳಿಯುತ್ತದೆ’ ಎಂದರು.

ಕಳ್ಳರು–ಪುಂಡರ ಕಾಟ: ‘ಶಾಲೆಯ ಮುಖ್ಯರಸ್ತೆಯಲ್ಲಿರುವುದರಿಂದ ಕಳ್ಳರ ದೃಷ್ಟಿಯೂ ಶಾಲೆ ಮೇಲೆ ಬಿದ್ದಿದೆ. ಶಾಲೆಗೆ ಹಾಕಿದ್ದ ಗೇಟನ್ನು ಕಳ್ಳರು ಕದ್ದೊಯ್ದಿದ್ದಾರೆ. ಬಾಗಿಲಿಗೆ ಹಾಕಿದ್ದ ಕಬ್ಬಿಣದ ಚಿಲಕವನ್ನು ಮುರಿದಿದ್ದಾರೆ. ಪುಂಡರ ಹಾವಳಿಯೂ ಹೆಚ್ಚಾಗಿದ್ದು, ಶಾಲೆಗೆ ಭದ್ರತೆಯ ಸಮಸ್ಯೆಯು ಇದೆ’ ಎಂದು ಶಿಕ್ಷಕರು ಅಳಲು ತೋಡಿಕೊಂಡರು.

‘ಶಾಲಾ ವಾತಾವರಣ ಉತ್ತಮವಾಗಿದೆ. ಮಕ್ಕಳಿಗೆ ಆಟವಾಡಲು ಉತ್ತಮ ಮೈದಾನ. ಸುತ್ತಲಿನ ಹಸಿರು ಪರಿಸರವು ಮಕ್ಕಳ ಕಲಿಕೆಗೆ ಪೂರಕವಾಗಿದೆ. ಗ್ರಾಮಸ್ಥರು ಸಹ ಶಾಲೆ ರಿಪೇರಿಯಾದರೆ ಅಥವಾ ಹೊಸ ಕಟ್ಟಡ ನಿರ್ಮಾಣವಾದರೆ ತಮ್ಮ ಮಕ್ಕಳನ್ನು ಕಳಿಸಲು ಆಸಕ್ತಿ ತೋರುತ್ತಾರೆ. ಶಾಲೆ ಉಳಿಸಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಇಲಾಖೆಗೆ ವರದಿ: ‘ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸುವ ಪ್ರಯತ್ನ ಕೈಗೂಡಲಿಲ್ಲ. ಹೊಸ ಸರ್ಕಾರ ಬಂದ ಬಳಿಕ, ಮತ್ತೆ ಹೊಸ ಕಟ್ಟಡ ಮಂಜೂರು ಮಾಡಿ ಅಥವಾ ಕಟ್ಟಡ ದುರಸ್ತಿಗೆ ಅನುದಾನ ಕೊಡಿ ಎಂದು ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ಯಾವುದಕ್ಕೆ ಅನುದಾನ ಬಿಡುಗಡೆಯಾಗುತ್ತದೆ ಎಂದು ಕಾದು ನೋಡಬೇಕಿದೆ’ ಎಂದು ಶಿಕ್ಷಣ ಇಲಾಖೆಯ ಸಿಆರ್‌ಪಿ ಶಿವಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಾಲೆಯ ಒಂದು ಕಟ್ಟಡವನ್ನಾದರೂ ಸರಿಯಾದ ಸುಸ್ಥಿತಿಯಲ್ಲಿಟ್ಟು ಮಕ್ಕಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನ ಮಾಡಲಾಗುತ್ತಿದೆ. ಹಿಂದೆ ನಾವು ದುರಸ್ತಿಗೆ ಅನುದಾನ ಬಿಡುಗಡೆ ಮಾಡಿ ಎಂದು ಒತ್ತಡ ಮಾಡಿದ್ದರೆ ಇಷ್ಟೊತ್ತಿಗೆ ದುರಸ್ತಿ ಭಾಗ್ಯವಾದರೂ ಸಿಗುತ್ತಿತ್ತು. ಹೊಸ ಕಟ್ಟಡದ ಅನುದಾನ ಕಾಯುತ್ತಿದ್ದರಿಂದ ಸಮಸ್ಯೆಯಾಗಿದೆ’ ಎಂದರು.

ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಜಮಖಾನದಲ್ಲಿ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ
ಶಾಲಾ ಕೊಠಡಿಯೊಳಗೆ ಅಲ್ಲಲ್ಲಿ ಕಿತ್ತು ಹೋಗಿರುವ ಚಾವಣಿ
ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಛಾವಣಿ ಶಿಥಿಲಗೊಂಡು ಉದುರಿದ್ದು ಕಬ್ಬಿಣಗಳು ಗೋಚರಿಸುತ್ತಿವೆ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಸ್‌ಆರ್‌ ಅನುದಾನದಡಿ ವಡ್ಡರಹಳ್ಳಿ ಶಾಲೆ ಸೇರಿದಂತೆ ತಾಲ್ಲೂಕಿನ 20 ಶಾಲೆಗಳು ಅಭಿವೃದ್ಧಿಗೆ ಆಯ್ಕೆಯಾಗಿದ್ದವು. ನಂತರ ಅನುದಾನ ಏಕಾಏಕಿ ರದ್ದಾಯಿತು. ಈಗ ಹೊಸ ಕಟ್ಟಡ ನಿರ್ಮಾಣ ಅಥವಾ ದುರಸ್ತಿಗೆ ಅನುದಾನ ಕೋರಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ
– ಶಿವಕುಮಾರ್ ಸಿಆರ್‌ಪಿ ಶಿಕ್ಷಣ ಇಲಾಖೆ ಮಾಗಡಿ
ಶಾಲಾ ಕಟ್ಟಡ ಸುಸ್ಥಿತಿಯಲ್ಲಿಲ್ಲ ಎಂಬ ಕಾರಣಕ್ಕೆ ಬಾಡಿಗೆ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲಾಗಿತ್ತು. ಆದರೆ ಅಲ್ಲಿಯೂ ಮೂಲಸೌಕರ್ಯ ಕೊರತೆ ಇದ್ದಿದ್ದರಿಂದ ಮತ್ತೆ ಹಳೆ ಕಟ್ಟಡದಲ್ಲೇ ತರಗತಿ ಶುರುವಾಗಿದ್ದು ಮಕ್ಕಳು ಆತಂಕದಲ್ಲೇ ಪಾಠ ಕೇಳಬೇಕಿದೆ
– ವಿದ್ಯಾರ್ಥಿಗಳ ಪೋಷಕರು ವಡೇರಹಳ್ಳಿ
16ರಿಂದ 6ಕ್ಕೆ ಕುಸಿದ ಮಕ್ಕಳ ಸಂಖ್ಯೆ
ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ ದುರಸ್ತಿ ಕಾಣದ ಶಾಲೆಗೆ ಸ್ಥಳೀಯ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ‘ತಮ್ಮ ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲದ ಶಾಲೆಗೆ ನಾವ್ಯಾಕೆ ಮಕ್ಕಳನ್ನು ಕಳಿಸಬೇಕು’ ಎಂದು ಒಬ್ಬೊಬ್ಬರೇ ಪೋಷಕರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಸೇರಿಸಲಾರಂಭಿಸಿದ್ದಾರೆ. ‘ಒಂದರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ ಕಳೆದ ವರ್ಷ 16 ವಿದ್ಯಾರ್ಥಿಗಳಿದ್ದರು. ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಿಂದಾಗಿ ಕೆಲ ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ತೆಗೆದುಕೊಂಡು ಬೇರೆಡೆಗೆ ಸೇರಿಸಿದ್ದರಿಂದ ಈ ವರ್ಷ ಕೇವಲ 6 ಮಕ್ಕಳಷ್ಟೇ ಶಾಲೆಯಲ್ಲಿ ಉಳಿದಿದ್ದಾರೆ’ ಎಂದು ಶಾಲೆಯ ಶಿಕ್ಷಕರು ಹೇಳಿದರು.
ಕೈ ಚೆಲ್ಲಿದ ಶಾಸಕರು ಅಧಿಕಾರಿಗಳು
ಶಾಲಾ ಕಟ್ಟಡವನ್ನು ದುರಸ್ತಿ ಮಾಡುವ ಅಥವಾ ಹೊಸ ಕಟ್ಟಡ ನಿರ್ಮಿಸುವ ಕುರಿತು ಸ್ಥಳೀಯ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಗಮನಕ್ಕೆ ತರಲಾಗಿತ್ತು. ಆದರೆ ಪಂಚಾಯಿತಿಗೊಂದು ಮಾದರಿ ಶಾಲೆ ಆರಂಭ ಮಾಡಲಾಗುತ್ತಿದೆ. ಹಾಗಾಗಿ ಈ ಶಾಲೆ ಸಹ ಮಾದರಿ ಶಾಲೆ ವ್ಯಾಪ್ತಿಗೆ ಬರುವುದರಿಂದ ಹಳೆಯ ಕಟ್ಟಡವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು. ಕಡೆಗೆ ಗ್ರಾಮ ಪಂಚಾಯಿತಿಯ ಅನುದಾನದಿಂದಾದರೂ ಶಾಲೆ ರಿಪೇರಿಯಾಗಲಿ ಎಂದು ಅನುದಾನಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದೆವು. ಶಾಲೆಗಳಿಗೆ ಅನುದಾನ ಕೊಡಲು ಬರುವುದಿಲ್ಲ ಎಂದು ಅವರೂ ಕೈ ಚೆಲ್ಲಿದರು’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.