ರಾಮನಗರ: ನಾಡ ಪ್ರಸಿದ್ಧವಾದ ಚನ್ನಪಟ್ಟಣದ ಗೊಂಬೆಗಳು ಇದೀಗ ಹಾಡಿಗಳ ಮಕ್ಕಳ ಆಟಿಕೆಗಳಾಗಲು ಸಿದ್ಧವಾಗಿವೆ. ಇಂತಹದ್ದೊಂದು ಸತ್ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಕೈ ಜೋಡಿಸಿದ್ದಾರೆ.
ಚನ್ನಪಟ್ಟಣದ ಬೊಂಬೆಗಳನ್ನು ಹಾಡಿಗಳಲ್ಲಿರುವ ಶಿಶುವಿಹಾರಗಳ ಮಕ್ಕಳ ಕಲಿಕೆಗೆ ಪೂರಕವಾಗಿ ಬಳಕೆ ಮಾಡುವ ಸಲುವಾಗಿ ಸಚಿವರು ಗೊಂಬೆಗಳ ಖರೀದಿಗೆ ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹಾಡಿಗಳ ಶಿಶುವಿಹಾರಗಳಿಗೆ ಈ ಗೊಂಬೆಗಳು ತಲುಪಲಿವೆ. ಚಾಮರಾಜನಗರವು ಗಡಿ ಜಿಲ್ಲೆ ಹಾಗೂ ಅಲ್ಲಿನ ಹೆಚ್ಚಿನ ಪ್ರದೇಶವು ಹಿಂದುಳಿದಿರುವ ಕಾರಣಕ್ಕೆ ಆ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರ ಹಿಂದೆ ಇದೆ.
ಚನ್ನಪಟ್ಟಣ ಗೊಂಬೆಗಳು ಕೇವಲ ಆಟಿಕೆಗಳು ಮಾತ್ರವಲ್ಲ. ಮಕ್ಕಳಲ್ಲಿನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಅನುಕೂಲವಾಗಲಿದೆ. ಆಟಿಕೆಗಳಲ್ಲಿಯೇ ವರ್ಣಮಾಲೆ, ಸಂಖ್ಯೆಗಳು ಹೀಗೆ ವಿವಿಧ ಕಲಿಕೆಗೆ ಪೂರಕವಾದ ಮಾಹಿತಿ ಇರಲಿದೆ. ಈ ಹಿನ್ನೆಲೆಯಲ್ಲಿ ತೀರ ಹಿಂದುಳಿದ ಹಾಡಿಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಚಾಮರಾಜನಗರದ ಜಿಲ್ಲೆಯ ಅಧಿಕಾರಿಗಳಿಗೆ ಡಿಸಿಎಂ ಈಗಾಗಲೇ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ರಾಜ್ಯದ ವಿವಿಧ ಪ್ರದೇಶಗಳಿಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ.
ಸ್ವಂತ ಖರ್ಚು:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ವೋಕಲ್ ಫಾರ್ ಲೋಕಲ್’ ಎನ್ನುವ ಯೋಜನೆಗೆ ಬೆಂಬಲ ವ್ಯಕ್ತಪಡಿಸುವುದು ಹಾಗೂ ಸ್ಥಳೀಯ ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಅಶ್ವತ್ಥನಾರಾಯಣ ತಮ್ಮ ಸ್ವಂತ ಖರ್ಚಿನಲ್ಲಿ ಹಾಡಿಗಳ ಮಕ್ಕಳಿಗೆ ಬೊಂಬೆಗಳನ್ನು ನೀಡಲು ಮುಂದಾಗಿದ್ದಾರೆ.
ಚನ್ನಪಟ್ಟಣ ಗೊಂಬೆ ವಿಶೇಷ
ಚನ್ನಪಟ್ಟಣ ಗೊಂಬೆ ದರ ಹೆಚ್ಚಾದರೂ ಇದು ಸಂಪೂರ್ಣ ಪರಿಸರ ಮತ್ತು ಮಕ್ಕಳ ಆರೋಗ್ಯ ಸ್ನೇಹಿ ಆಟಿಕೆ ಆಗಿದೆ. ಬೊಂಬೆ ತಯಾರಿಕೆಗೆ ಬಳಸುವ ಅರಗು ಬಣ್ಣ ಸಾಯಯವದ್ದಾಗಿದೆ. ಮಕ್ಕಳು ಒಂದು ವೇಳೆ ಬೊಂಬೆಗಳನ್ನು ಬಾಯಿಗೆ ಹಾಕಿಕೊಂಡರೂ ತೊಂದರೆ ಆಗದು. ಆಟಿಕೆಗಳ ಮರವೂ ಮೃದುವಾಗಿದ್ದು ಮುರಿದರೂ ಹೆಚ್ಚಿನ ಹಾನಿ ತರದು.
***
ಪ್ರಧಾನಿಯವರ ‘ವೋಕಲ್ ಫಾರ್ ಲೋಕಲ್’ ಬೆಂಬಲಿಸಿ ಚನ್ನಪಟ್ಟಣದ ಗೊಂಬೆಗಳನ್ನು ಹಾಡಿಗಳ ಶಿಶುವಿಹಾರಗಳಿಗೆ ನೀಡಲು ನಿರ್ಧರಿಸಿದ್ದೇನೆ. ಇದರಿಂದ ಇಲ್ಲಿನ ಕರಕುಶಲ ಕರ್ಮಿಗಳಿಗೂ ಅನುಕೂಲ ಆಗಲಿದೆ.
- ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ, ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.