ADVERTISEMENT

ರಾಮನಗರ | ದಲಿತ ಯುವಕನ ಕೈ ಕಡಿದವರು DCM ಸಂಬಂಧಿಕರು: ಮಾರಸಂದ್ರ ಮುನಿಯಪ್ಪ ಆರೋಪ

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 23:30 IST
Last Updated 24 ಜುಲೈ 2024, 23:30 IST
ಕನಕಪುರದ ಮಳಗಾಳು ಎನ್‌.ಕೆ. ಕಾಲೊನಿಗೆ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಹಾಗೂ ಪಕ್ಷದ ಪಧಾಧಿಕಾರಿಗಳು ಬುಧವಾರ ಭೇಟಿ ನೀಡಿ, ಹಲ್ಲೆಗೊಳಗಾದ ಸಂತ್ರಸ್ತರ ಕುಟುಂಬದವರಿಗೆ ಸಾಂತ್ವನ ಹೇಳಿದರು
ಕನಕಪುರದ ಮಳಗಾಳು ಎನ್‌.ಕೆ. ಕಾಲೊನಿಗೆ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಹಾಗೂ ಪಕ್ಷದ ಪಧಾಧಿಕಾರಿಗಳು ಬುಧವಾರ ಭೇಟಿ ನೀಡಿ, ಹಲ್ಲೆಗೊಳಗಾದ ಸಂತ್ರಸ್ತರ ಕುಟುಂಬದವರಿಗೆ ಸಾಂತ್ವನ ಹೇಳಿದರು   

ರಾಮನಗರ: ‘ಜಿಲ್ಲೆಯ ಕನಕಪುರದ ಮಳಗಾಳು ಗ್ರಾಮದಲ್ಲಿ ಪರಿಶಿಷ್ಟರ ಎನ್.ಕೆ. ಕಾಲೊನಿಗೆ ನುಗ್ಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈರಮುಡಿ ಅವರ ಪುತ್ರ ಅನೀಶ್ ಕೈ ಕತ್ತರಿಸಿದ ರೌಡಿ ಹರ್ಷ ಅಲಿಯಾಸ್ ಕೈಮ ಮತ್ತು ಸಂಗಡಿಗರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿಕರಾಗಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದ್ದಾರೆ.

‘ಕಾಂಗ್ರೆಸ್ ಮುಖಂಡನ ಪುತ್ರನಿಗೇ ಹೀಗಾದರೆ, ಉಳಿದವರ ಗತಿ ಏನಾಗಬೇಕು? ಡಿ.ಕೆ ಸಹೋದರರ ನಿಯಂತ್ರಣದಲ್ಲಿರುವ ಕನಕಪುರವು ರಾಮನಗರ ಜಿಲ್ಲೆಯ ಬಿಹಾರವಾಗಿದೆ. ಕೊಲೆ ಮತ್ತು ಹಲ್ಲೆ ಪ್ರಕರಣ ಸಾಮಾನ್ಯವಾಗಿದ್ದು, ದಲಿತರು ಮತ್ತು ಹಿಂದುಳಿದವರಿಗೆ ರಕ್ಷಣೆ ಇಲ್ಲವಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಮಳಗಾಳಿನಲ್ಲಿ ಹಿಂದೆಯೂ ಇಬ್ಬರು ದಲಿತರ ಕೊಲೆಯಾಗಿತ್ತು. ಕೆಲವರ ಕೈ, ಕಾಲು ಕೂಡ ಕತ್ತರಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲೂ ಹರ್ಷನ ಪಾತ್ರವಿದೆ. ರಾಜಕೀಯ ಬೆಂಬಲವಿರುವ ಆತ ಎಷ್ಟೇ ಕೃತ್ಯ ಎಸಗಿದರೂ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ರಾಜಕಾರಣಿಗಳ ಕೈ ಗೊಂಬೆಗಳಾಗಿರುವುದೇ ಇದಕ್ಕೆ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಬಡವರು ಪೊಲೀಸ್ ಠಾಣೆಗೆ ಹೋಗಲು ಹೆದರುತ್ತಾರೆ. ಅವರ ಪ್ರಕರಣ ಕೋರ್ಟ್ ಬದಲು ತೋಟದ ಮನೆಗಳಲ್ಲಿ ನಡೆಯುವ ಪಂಚಾಯಿತಿಯಲ್ಲಿ ಇತ್ಯರ್ಥವಾಗುತ್ತಿವೆ. ದೌರ್ಜನ್ಯಕ್ಕೆ ಸಂಬಂಧಿಸಿದ ಎಷ್ಟೋ ಪ್ರಕರಣ ಮುಚ್ಚಿಹಾಕಲಾಗಿದೆ’ ಎಂದರು.

ಪರಿಹಾರಕ್ಕೆ ಆಗ್ರಹ: ‘ಘಟನೆ ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳದ ಡಿಸಿಎಂ, ಆಸ್ಪತ್ರೆಗೆ ಹೋಗಿ ಅನೀಶ್ ಭೇಟಿಯಾಗಿರುವುದರ ಹಿಂದೆ ಮತಬ್ಯಾಂಕ್ ರಾಜಕಾರಣವಿದೆ. ಅನೀಶ್ ಕುಟುಂಬಕ್ಕೆ ಸರ್ಕಾರ 10 ಎಕರೆ ಜಮೀನು, ₹5 ಕೋಟಿ ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ ನೀಡಬೇಕು. ಪ್ರಮುಖ ಆರೋಪಿ ಹರ್ಷನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ಕನಕಪುರದ ಮಳಗಾಳು ಎನ್.ಕೆ. ಕಾಲೊನಿಗೆ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಬುಧವಾರ ಕೈ ಕಳೆದುಕೊಂಡ ಅನೀಶ್ ಮನೆಗೆ  ಭೇಟಿ ನೀಡಿ ಹಲ್ಲೆಗೊಳಗಾದ ಸಂತ್ರಸ್ತರು ಹಾಗೂ ಸ್ಥಳೀಯರೊಂದಿಗೆ ಮಾತನಾಡಿದರು. ಡಿವೈಎಸ್ಪಿ ಕೆ.ಸಿ. ಗಿರಿ ಇದ್ದಾರೆ. ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಸ್ಥಳೀಯ ದಲಿತ ಮುಖಂಡರು ಇದ್ದಾರೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ರಕ್ಷಣೆ ಇಲ್ಲವಾಗಿದೆ. ಇಂತಹವರು ಮುಂದೆ ಮುಖ್ಯಮಂತ್ರಿಯಾದರೆ ರಾಜ್ಯದ ಗತಿ ಏನಾಗಲಿದೆಯೊ?
–ಮಾರಸಂದ್ರ ಮುನಿಯಪ್ಪ ಅಧ್ಯಕ್ಷ ಬಿಎಸ್‌ಪಿ ರಾಜ್ಯ ಘಟಕ

ಕನಕಪುರ ರಿಪಬ್ಲಿಕ್‌

ಕನಕಪುರ: ಜಿಲ್ಲೆಯಿಂದ ಗಡಿಪಾರಾಗಿದ್ದ ವೃತ್ತಿಪರ ರೌಡಿಯೊಬ್ಬ ಗುಂಪು ಕಟ್ಟಿಕೊಂಡು ಬಂದು ದಲಿತ ಯುವಕನ ಕೈ ಕತ್ತರಿಸಿರುವುದು ಕನಕಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲ ಕಚ್ಚಿರುವುದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೊಣೆ ಎಂದು ಮಳಗಾಳು ಕಾಲೊನಿಗೆ ಭೇಟಿ ನೀಡಿದ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಆಗ್ರಹಿಸಿದ್ದಾರೆ.

ಕುಖ್ಯಾತ ರೌಡಿ ಮೇಲೆ ಪೊಲೀಸರು ನಿಗಾ ಇಡದೆ ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ. ಹಿಂದೆಯೂ ದಲಿತರ ಮೇಲೆ ದೌರ್ಜನ್ಯ ಎಸಗಿರುವ ಆತನಿಂದ ತಮಗೆ ಜೀವಭಯವಿದೆ ಎಂದು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಹಾಗಾಗಿ ಆತನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಅವರು ಒತ್ತಾಯಿಸಿದ್ದಾರೆ.

‘ಎನ್‌ಕೌಂಟರ್ ಮಾಡಿ’
‘ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಆರೋಪಿಗಳು ಹಿಂದೆಯೂ ದಲಿತರ ಮೇಲೆ ಇಂತಹ ಕೃತ್ಯ  ಎಸಗಿದ್ದಾರೆ. ಇವರನ್ನು ಎನ್‌ಕೌಂಟರ್ ಮಾಡಿ. ಇಲ್ಲದಿದ್ದರೆ ಮತ್ತೆ ಕೃತ್ಯ ಮರುಕಳಿಸುತ್ತವೆ’ ಎಂದು ಹಲ್ಲೆಗೊಳಗಾದವರ ಕುಟುಂಬದವರು ಹಾಗೂ ಸ್ಥಳೀಯರು ಪೊಲೀಸರಿಗೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.