ADVERTISEMENT

ಬಿಜೆಪಿ ಅವಧಿಯಲ್ಲೇ ಸಿ.ಎಂ ಪತ್ನಿಗೆ ನಿವೇಶನ: ಡಿಸಿಎಂ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 5:00 IST
Last Updated 3 ಜುಲೈ 2024, 5:00 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಚನ್ನಪಟ್ಟಣ (ರಾಮನಗರ): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಯಾಕೆ ಅಕ್ರಮ ಮಾಡ್ತಾರೆ? ಅವರ ಆಸ್ತಿಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಭೂ ಸ್ವಾಧೀನವಾಗಿದೆ. ಅದಕ್ಕೆ ಪರ್ಯಾಯ ಜಾಗ ಕೊಡಬೇಕು. ಹಾಗಾಗಿ, ನಿವೇಶನ ಕೊಟ್ಟಿರುತ್ತಾರೆ. ಇದು ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

‘ಇಷ್ಟಕ್ಕೂ ಅವರು ಡಿನೊಟಿಫಿಕೇಷನ್ ಮಾಡಿಕೊಂಡಿಲ್ಲ. ಹಾಗಾಗಿ, ಪರಿಹಾರ ರೂಪದಲ್ಲಿ ನಿವೇಶನ ಕೊಟ್ಟಿದ್ದಾರೆ. ಅರ್ಹರಿರುವುದಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಡಿನೋಟಿಫಿಕೇಷನ್ ಮಾಡದೆ ನಿವೇಶನ ಪಡೆದಿರುವುದಕ್ಕೆ ಖುಷಿಪಡಬೇಕು’ ಎಂದು ತಾಲ್ಲೂಕಿನ ಬೈರಾಪಟ್ಟಣದಲ್ಲಿ ನಡೆದ ಜನಸ್ಪಂದನ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಮುಡಾದಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ನಮ್ಮ ಮುಖ್ಯಮಂತ್ರಿ ಭ್ರಷ್ಟಾಚಾರ ಸಹಿಸುವುದಿಲ್ಲ. ಅಕ್ರಮದ ಕುರಿತು ತನಿಖೆ ಮಾಡಿಸಿ, ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

ADVERTISEMENT

ನಾಗೇಂದ್ರ ಪಾತ್ರವಿಲ್ಲ: ‘ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮ ಯಾವ ಸಚಿವರೂ ಭಾಗಿಯಾಗಿಲ್ಲ. ಮಾಜಿ ಸಚಿವ ನಾಗೇಂದ್ರ ಅವರ ಪ್ರಕರಣದಲ್ಲಿ ಖುದ್ದಾಗಿ ನಾನೇ ಪರಿಶೀಲನೆ ಮಾಡಿದ್ದೇನೆ. ಹೈದರಾಬಾದ್‌ನಿಂದಲೂ ಮಾಹಿತಿ ತೆಗೆದುಕೊಂಡಿದ್ದೇನೆ. ಹಗರಣದಲ್ಲಿ ರಾಜಕಾರಣಿಗಳು ಭಾಗಿಯಾಗಿಲ್ಲ ಅನ್ನೋದು ಸಮಾಧಾನ ತಂದಿದೆ. ಯಾರೋ ಮಾಡಿದ್ದಾರೆ ಅಷ್ಟೆ. ಆ ಬಗ್ಗೆ ತನಿಖೆಯಾಗಲಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.