ರಾಮನಗರ: ಪರಿಶಿಷ್ಟ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ನಟ ಉಪೇಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು, ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಎಸ್.ಸಿ ಮತ್ತು ಎಸ್.ಟಿ ಕುಂದುಕೊರತೆ ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.
ಸಭೆಯಲ್ಲಿ ಉಪೇಂದ್ರ ಹೇಳಿಕೆಯನ್ನು ಪ್ರಸ್ತಾಪಿಸಿದ ಸಮತಾ ಸೈನಿಕ ದಳ ಹಾಗೂ ದಲಿತ ಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಉಪೇಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ಹೇಳಿಕೆ ದಲಿತ ಸಮುದಾಯವನ್ನು ಅಪಮಾನಿಸುವಂತಿದೆ. ಹಾಗಾಗಿ, ಅವರ ವಿರುದ್ಧ ಕೂಡಲೇ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಸಭೆ ಮುಗಿದ ಬಳಿಕ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ ಅವರಿಗೆ ದೂರು ಕೊಟ್ಟರು. ‘ಹೇಳಿಕೆ ಕುರಿತು ಬೇರೆ ಕಡೆಯೂ ಪ್ರಕರಣ ದಾಖಲಾತ್ತಿದ್ದು, ನಿಮ್ಮ ದೂರು ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಠಾಣಾಧಿಕಾರಿ ಭರವಸೆ ನೀಡಿದರು.
ಗೋದಾಮು ಸ್ಥಳಾಂತರಕ್ಕೆ ಆಗ್ರಹ
ನಗರದ ಒಂದನೇ ವಾರ್ಡ್‌ನ ಸಿದ್ದಾರ್ಥ ಬಡಾವಣೆಯಲ್ಲಿರುವ ಎಚ್.ಪಿ ಗ್ಯಾಸ್ ಗೋದಾಮು ಸ್ಥಳಾಂತರಿಸಬೇಕು. ಸುತ್ತಮುತ್ತಲೂ ಮನೆಗಳು ಇರುವುದರಿಂದ, ಅಪಾಯಕಾರಿ ಅನಿಲ ಸಿಲಿಂಡರ್‌ಗಳನ್ನು ಗೋದಾಮಿನಲ್ಲಿ ಸಂಗ್ರಹಿಸುವುದು ಅಪಾಯಕಾರಿ. ಈ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ಐಜೂರು ಠಾಣೆಯ ಸಬ್ ಇನ್‌ಸ್ಪೆಕ್ಟರ್ ತನ್ವೀರ್ ಹುಸೇನ್ ಹಾಗೂ ಪುರ ಠಾಣೆಯ ಪ್ರೊಬೇಷನರಿ ಡಿವೈಸ್ಪಿ ಶಿವಕುಮಾರ್ ಕಟಕಬಾವಿ ಸಭೆಯಲ್ಲಿ ಮುಖಂಡರ ಅಹವಾಲು ಆಲಿಸಿದರು. ಮುಖಂಡರಾದ ಶಿವಶಂಕರ್, ಶಿವಪ್ರಕಾಶ್, ಹರೀಶ್, ಕೊತ್ತಿಪುರ ಗೋವಿಂದರಾಜು, ಹರೀಶ್ ಬಾಲು, ಸುರೇಶ್, ಚೆಲುವರಾಜು, ಮುರುಗೇಶ್ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.