ADVERTISEMENT

ಒಕ್ಕಲಿಗ ನಾಯಕರನ್ನು ಮುಗಿಸಿದ ಗೌಡರು: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 0:14 IST
Last Updated 12 ನವೆಂಬರ್ 2024, 0:14 IST
   

ಚನ್ನಪಟ್ಟಣ (ರಾಮನಗರ): ‘ದ್ವೇಷದ ರಾಜಕಾರಣದಲ್ಲಿ ಎಚ್‌.ಡಿ. ದೇವೇಗೌಡರು ನಂಬರ್ ಒನ್. ತಮ್ಮ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತಾರೆಂದು ತಮ್ಮದೇ ಒಕ್ಕಲಿಗ ಸಮುದಾಯ ಬುದ್ಧಿವಂತ ಮತ್ತು ರಾಜಕೀಯ ಪ್ರಜ್ಞೆ ಇರುವ ಒಬ್ಬನೇ ಒಬ್ಬ ನಾಯಕನನ್ನು ಅವರು ಬೆಳೆಸಲಿಲ್ಲ. ನಮ್ಮ ಸರ್ಕಾರ ಕಿತ್ತೊಗೆಯುವೆ ಎನ್ನುವ ಅವರು ಇಂದಿಗೂ ತಮ್ಮ ಪಾಳೇಗಾರಿಕೆ ಪ್ರವೃತ್ತಿ ಬಿಟ್ಟಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಉಪ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಸೋಮ ವಾರ ಪಟ್ಟಣದ ಹೊರವಲಯದ ದೊಡ್ಡಮಳೂರನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇವೇಗೌಡರ ಮನೆ ಮಗನಂತಿದ್ದ ಬಿ.ಎಲ್. ಶಂಕರ್ ಸೇರಿದಂತೆ ವೈ.ಕೆ. ರಾಮಯ್ಯ, ನಾಗೇಗೌಡ, ಬಿ.ಎನ್‌. ಬಚ್ಚೇಗೌಡ, ವರದೇಗೌಡ, ಭೈರೇಗೌಡ ಸೇರಿದಂತೆ ಹಲವು ಒಕ್ಕಲಿಗ ನಾಯಕ ರನ್ನು ವ್ಯವಸ್ಥಿತವಾಗಿ ಮುಗಿಸಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ನೋಡಿಕೊಂಡರು. ಇದನ್ನು ಮನಗಂಡ ಚಲುವರಾಯ ಸ್ವಾಮಿ, ಬಾಲಕೃಷ್ಣ, ಪುಟ್ಟಣ್ಣ ಕಾಂಗ್ರೆಸ್ ಸೇರಿ ಬಚಾವಾದರು’ ಎಂದರು.

ADVERTISEMENT

‘ನಾನು ಮತ್ತು ಜಾಲಪ್ಪ ಇಲ್ಲದೇ ಹೋಗಿದ್ದರೆ 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ತಮ್ಮ ಸರ್ಕಾರ ಬೀಳಿಸಿದ ದೇವೇಗೌಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಎಸ್.ಆರ್. ಬೊಮ್ಮಾಯಿ ಸಿದ್ದರಿರಲಿಲ್ಲ. ಆಗ ನಾವು ದೇವೇಗೌಡರ ಪರ ನಿಂತು ಬೊಮ್ಮಾಯಿ ಅವರನ್ನು ಒಪ್ಪಿಸಿದೆವು. ಇಲ್ಲದಿದ್ದರೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುತ್ತಿದ್ದರು. ದೇವೇಗೌಡರು ಸುಳ್ಳು ಹೇಳಿದ ಮಾತ್ರಕ್ಕೆ ಚರಿತ್ರೆ ಬದಲಾಗುವುದಿಲ್ಲ’ ಎಂದು ಹೇಳಿದರು.

‘ಹಿಂದುಳಿದ ವರ್ಗಕ್ಕೆ ಸೇರಿದ ನಾನು ಪೂರ್ಣ ಬಹುಮತದೊಂದಿಗೆ ಎರಡನೇ ಸಲ ಮುಖ್ಯಮಂತ್ರಿಯಾಗಿರುವುದಕ್ಕೆ ದೇವೇಗೌಡರಿಗೆ ಹೊಟ್ಟೆಯುರಿ.‌ ಅವರು ಮತ್ತು ಪುತ್ರ ಕುಮಾರಸ್ವಾಮಿಗೆ ಒಮ್ಮೆಯೂ ಪೂರ್ಣಾವಧಿಯ ಅಧಿಕಾರ ಸಿಗಲ್ಲವೆಂದು ಕೊರಗು. ಸಿದ್ದರಾಮಯ್ಯನ ಸೊಕ್ಕು ಮುರಿಯಬೇಕು ಹಾಗೂ ಸರ್ಕಾರ ತೆಗೆಯಬೇಕು ಎಂದು ದ್ವೇಷ ಕಾರುತ್ತಿದ್ದಾರೆ. ಅವರ ಹೊಟ್ಟೆಯುರಿ ಅವರನ್ನೇ ಸುಡುತ್ತದೆಯೇ ಹೊರತು ನನ್ನನ್ನಲ್ಲ’ ಎಂದರು.

‘ಪುತ್ರ ಮತ್ತು ಮೊಮ್ಮಗನ ಮೇಲಿನ ವ್ಯಾಮೋಹಕ್ಕಾಗಿ ದೇವೇಗೌಡರು ಚನ್ನ ಪಟ್ಟಣದಲ್ಲಿ ಆರು ದಿನದಿಂದ ಪ್ರಚಾರ ನಡೆ ಸುತ್ತಿದ್ದಾರೆ. ಇದೇ ಯೋಗೇಶ್ವರ್ ಏನಾ ದರೂ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿದ್ದರೆ ದೇವೇಗೌಡರು ಬರುತ್ತಿದ್ರಾ? ತಮಗಾಗುತ್ತಿರುವ ಅನ್ಯಾಯ ಮನ ಗಂಡೇ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ. ಅಭಿವೃದ್ಧಿಗೆ ಬದ್ಧವಾಗಿರುವ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಹರಕೆ ಕುರಿ ಮಾಡಲು ಮುಂದಾಗಿದ್ರು: ಸಿಪಿವೈ

‘ಟಿಕೆಟ್ ವಿಷಯದಲ್ಲಿ ನನ್ನನ್ನು ಅತಂತ್ರ ಮಾಡಿ ರಾಜಕೀಯವಾಗಿ ಮುಗಿಸಲು ಕುಮಾರಸ್ವಾಮಿ ಕುತಂತ್ರ ಮಾಡಿದ್ದರು. ನನ್ನನ್ನು ಹರಕೆ ಕುರಿ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ನನ್ನ ಮೂಲ ಪಕ್ಷ ಕಾಂಗ್ರೆಸ್‌ಗೆ ಬಂದೆ. ಸಂಕಷ್ಟದ ಕಾಲದಲ್ಲಿ ಕೈ ಹಿಡಿದಿರುವ ಪಕ್ಷದ ಋಣವನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಸಿ.ಪಿ. ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. 

‘ಕ್ಷೇತ್ರದಲ್ಲಿ ನಾನು ಮಾಡಿದ ನೀರಾವರಿಯ ಕ್ರೆಡಿಟ್ ಪಡೆಯಲು ದೇವೇಗೌಡರ ಕುಟುಂಬ ಮುಂದಾಗಿದೆ. ಮತಕ್ಕಾಗಿ ಅವರಂತೆ ನಾನು ಅಳುವ ಅಗತ್ಯವಿಲ್ಲ. ನನ್ನ ಜನ ಅದಕ್ಕೆ ಅವಕಾಶ ಕೊಡುವುದಿಲ್ಲ.‌ ಕಣ್ಣೀರು‌ ಯಾರಿಗೆ ಬೇಕಾದರೂ ಬರುತ್ತದೆ. ಆದರೆ, ದುಡಿದವರಿಗೆ ಮಾತ್ರ ಬೆವರು ಬರುತ್ತದೆ. ನಾನು ಕ್ಷೇತ್ರದ ನೀರಾವರಿಗೆ ಬೆವರು ಹರಿಸಿದ್ದೇನೆ. ಹಾಗಾಗಿ, ಜನ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.