ADVERTISEMENT

ಶೋಷಿತರ ರಾಜಕಾರಣ ಸಹಿಸದ ದೇವೇಗೌಡ

ಅಹಿಂದ ಅಭ್ಯರ್ಥಿಗೆ ಮನ್ನಣೆ ನೀಡಲು ಮತದಾರರಿಗೆ ಮಲ್ಲಿಕಾರ್ಜುನ್ ಮನವಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 5:10 IST
Last Updated 19 ಮಾರ್ಚ್ 2024, 5:10 IST
ಮಲ್ಲಿಕಾರ್ಜುನ್, ಅಧ್ಯಕ್ಷ, ಧಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್
ಮಲ್ಲಿಕಾರ್ಜುನ್, ಅಧ್ಯಕ್ಷ, ಧಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್   

ರಾಮನಗರ: ‘ಅಹಿಂದ ವರ್ಗಗಳ ರಾಜಕಾರಣ ಸಹಿಸದ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು, ತಮ್ಮ ರಾಜಕೀಯ ಹಾಗೂ ಕುಟುಂಬದ ಹಿತಾಸಕ್ತಿಗಾಗಿ ದಲಿತರು, ಹಿಂದುಳಿದ ವರ್ಗ ಹಾಗೂ ಇತರ ಶೋಷಿತ ಸಮುದಾಯಗಳ ರಾಜಕಾರಣವನ್ನು ಹೊಸಕಿ ಹಾಕುತ್ತಾ ಬಂದಿದ್ದಾರೆ’ ಎಂದು ಕನಕಪುರದ ದಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದರು.

‘ರಾಜಕೀಯ ಲಾಭಕ್ಕಾಗಿ ಪ್ರತಿ ಚುನಾವಣೆಯಲ್ಲಿ ಒಂದೊಂದು ಪಕ್ಷದ ಜೊತೆ ಕೈ ಜೋಡಿಸುವ ಜೆಡಿಎಸ್ ಹೆಸರಿಗಷ್ಟೇ ಜಾತ್ಯತೀತ. ದೇವೇಗೌಡರು ಹೇಳುವ ತತ್ವಕ್ಕೂ, ಅವರ ನಡವಳಿಕೆಗೂ ಅಜಗಜಾಂತರ ವ್ಯತ್ಯಾಸವಿದೆ. 2018ರಲ್ಲಿ ಬಿಎಸ್‌ಪಿ ಹೊಂದಾಣಿಕೆ ಮಾಡಿಕೊಂಡು ವಿಧಾನಸಭಾ ಚುನಾವಣೆ ಎದುರಿಸಿದ ಅವರು ಬಿಎಸ್‌ಪಿಗೆ ದ್ರೋಹ ಬಗೆದರು’ ಎಂದು ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಪುತ್ರ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದ ಅವರು, ಬಿಎಸ್‌ಪಿಯಿಂದ ಗೆದ್ದಿದ್ದ ಏಕೈಕ ಶಾಸಕ ಎನ್. ಮಹೇಶ್ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರು. ಕಡೆಗೆ ಆ ಪಕ್ಷದ ಹೈಕಮಾಂಡ್‌ಗೆ ಸುಳ್ಳು ಮಾಹಿತಿ ನೀಡಿ ಮಹೇಶ್ ಅವರನ್ನು ಉಚ್ಛಾಟಿಸುವಂತೆ ಮಾಡಿದರು. ಇದರೊಂದಿಗೆ ರಾಜ್ಯದಲ್ಲಿ ದಲಿತ ರಾಜಕಾರಣದ ಪ್ರಭಾವಿ ಶಕ್ತಿಯಾಗಿದ್ದ ಮಹೇಶ್ ನಾಯಕತ್ವವನ್ನು ನಾಶ ಮಾಡಿದರು. ಅಹಿಂದ ನಾಯಕತ್ವ ಸಹಿಸದ ಅವರು, ತಮ್ಮ ರಾಜಕೀಯದುದ್ದಕ್ಕೂ ಹೀಗೆ ಮಾಡಿಕೊಂಡು ಬಂದಿದ್ದಾರೆ’ ಎಂದು ದೂರಿದರು.

ADVERTISEMENT

‘ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಾಂಗ್ರೆಸ್‌ನ ಪ್ರಬಲ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ನಿಜಕ್ಕೂ ಡಿ.ಕೆ. ಸಹೋದರರನ್ನು ಎದುರಿಸಬೇಕಿದ್ದರೆ ಸ್ವತಃ ದೇವೇಗೌಡ ಅಥವಾ ಕುಮಾರಸ್ವಾಮಿ ಸ್ಪರ್ಧಿಸಬೇಕಿತ್ತು’ ಎಂದು ಹೇಳಿದರು.

‘ದೇವೇಗೌಡರು ಮತ್ತು ಡಿ.ಕೆ. ಸಹೋದರರಿಬ್ಬರಿಗೂ ಕುಟುಂಬ ರಾಜಕಾರಣವೇ ಮುಖ್ಯ. ಇವರ‍್ಯಾರೂ ಶೋಷಿತ ಸಮುದಾಯಗಳನ್ನು ಬೆಳೆಸುವ ಮತ್ತು ಅವರಿಗೆ ಅವಕಾಶ ಕೊಡುವವರಲ್ಲ. ಹಾಗಾಗಿ, ಮತದಾರರು ಈ ಚುನಾವಣೆಯಲ್ಲಿ ಅಹಿಂದ ಸಮುದಾಯದವರಿಗೆ ದನಿಯಾಗುವವರನ್ನು ಬೆಂಬಲಿಸಬೇಕು. ಈ ಚುನಾವಣೆಯಲ್ಲಿ ನಾನು ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ. ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಸಾತನೂರು ಶಿವಮಾದು, ಬಸವರಾಜು, ಮುನಿರಾಜು, ಸಿದ್ದರಾಜು, ಕಾಶಿನಾಥ್, ಮುನಿಮಲ್ಲಣ್ಣ ಹಾಗೂ ನಿಂಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.