ರಾಮನಗರ: ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತಂದು ದಶಕಗಳೇ ಕಳೆದಿವೆ. ಆದರೆ ಸರ್ಕಾರಿ ವೆಬ್ ತಾಣಗಳು ಮಾತ್ರ ಇನ್ನೂ ಕನ್ನಡತನವನ್ನು ಮೈಗೂಡಿಸಿಕೊಂಡಿಲ್ಲ. ರಾಮನಗರದ ಜಿಲ್ಲಾಡಳಿತದ ವೆಬ್‌ಸೈಟ್ ಅದಕ್ಕೊಂದು ಸ್ಪಷ್ಟ ಉದಾಹರಣೆ.
ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್ಐಸಿ) ನಿರ್ವಹಿಸುತ್ತಿರುವ https://ramanagara.nic.in/ ವಿಳಾಸದ ಈ ವೆಬ್ ತಾಣದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆ ಬಳಕೆಯಾಗಿಲ್ಲ. ಸಾಕಷ್ಟು ಕಡೆಗಳಲ್ಲಿ ಕನ್ನಡದ ವಾಕ್ಯಗಳು ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವಂತೆ ಇವೆ. ಓದಿದಷ್ಟೂ ತಪ್ಪು ಅರ್ಥವನ್ನೇ ಕೊಡುತ್ತವೆ. ಇಲ್ಲಿ ಕನ್ನಡ ಭಾಷೆಯ ಬಳಕೆ ಅಧೋಗತಿಗೆ ಇಳಿದಿದ್ದು, ಓದುಗರು ಕಣ್ಣು–ಬಾಯಿ ಬಿಡುವಂತಾಗಿದೆ.
‘ರಾಮನಗರ ಜಿಲ್ಲೆಯನ್ನು ಹಿಂದಿನ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಿಂದ 23 ಆಗಸ್ಟ್, 2007 ರಂದು ಕೆತ್ತಲಾಗಿದೆ’ –ಜಿಲ್ಲೆಯ ಬಗ್ಗೆ ಮಾಹಿತಿ ಹುಡುಕುವವರಿಗೆ ಹೀಗೆ ಈ ವೆಬ್ ತಾಣವು ಮಾಹಿತಿ ನೀಡುತ್ತದೆ! ಇಂಗ್ಲಿಷಿನ ವಾಕ್ಯಗಳನ್ನು ಅಸಂಬದ್ಧವಾಗಿ ಅನುವಾದಿಸಿ, ಕನಿಷ್ಠ ಅದನ್ನು ಭಾಷೆ ಬಲ್ಲವರಿಂದ ಓದಿಸದೇ ಹಾಗೆಯೇ ಹಾಕಲಾಗಿದೆ.
ರಾಜ್ಯದ ಆಡಳಿತ ಭಾಷೆ ಕನ್ನಡವಾದರೂ ನಮ್ಮ ರಾಮನಗರದ ವೆಬ್ ತಾಣ ಮೊದಲು ತೆರೆದುಕೊಳ್ಳುವುದು ಇಂಗ್ಲೀಷಿನಲ್ಲಿ. ಪುಟದ ಬಲಭಾಗದ ತುದಿಯ ಒಂದು ಮೂಲೆಯಲ್ಲಿ ಕನ್ನಡ ಎಂದು ಸಣ್ಣದಾಗಿ ಬರೆಯಲಾಗಿದೆ. ಅದನ್ನು ಕ್ಲಿಕ್ಕಿಸಿದರಷ್ಟೇ ಕನ್ನಡದ ಪುಟಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಹೆಸರುಗಳೂ ತಪ್ಪು: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ‘ವಾಸ್ತುಶಿಲ್ಪಿ, ಬಿಲ್ಡರ್ ಮತ್ತು ಮಾರ್ಗದರ್ಶಿ’ ಹೀಗೆಂದು ವೆಬ್‌ಸೈಟ್ ಹೇಳುತ್ತದೆ. ‘ಬಿಳಿ ಬೆಂಬಲಿತ ರಣಹದ್ದು’ ‘ಮಹಿಳೆಯರಿಗೆ ಮತ್ತು ಸಂತೃಪ್ತಿಗಾಗಿ ಶೌಚಾಲಯಗಳು’, ‘ಡೀಸೆಲ್ ಜನರೇಟರ್ಗಳ ಮೂಲಕ ಅಡ್ಡಿಪಡಿಸಿದ ವಿದ್ಯುತ್ ಸರಬರಾಜು’ ಮೊದಲಾದ ವಿಶೇಷಣಾ ವಾಕ್ಯಗಳನ್ನೂ ಇಲ್ಲಿ ಬಳಸಲಾಗಿದೆ.
ಕನಿಷ್ಠ ಹೆಸರುಗಳನ್ನದರೂ ಸರಿಯಾಗಿ ಬಳಕೆ ಮಾಡುವ ಪ್ರಯತ್ನ ನಡೆದಿಲ್ಲ. ವಿಧಾನಸೌಧ ನಿರ್ಮಾತೃ ಹೆಸರನ್ನು ‘ಕಂಗಲ್ ಹನುಮಾಂತಯ್ಯ’ ಎಂದು ತಪ್ಪುತಪ್ಪಾಗಿ ಬರೆಯಲಾಗಿದೆ.
ಹೊದ್ದು ಮಲಗಿದೆ ಕಸಾಪ!
ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕನ್ನಡದ ಕಗ್ಗೊಲೆ ಆಗಿದ್ದರೂ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಂಘ–ಸಂಸ್ಥೆಗಳು ಅದನ್ನು ಪ್ರಶ್ನಿಸುವ, ಅಧಿಕಾರಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡಿಲ್ಲ. ಸಾಹಿತ್ಯ ಪರಿಷತ್ ಅಂತೂ ಕೇವಲ ದತ್ತಿ ಉಪನ್ಯಾಸ ಕಾರ್ಯಕ್ರಮಗಳಿಗೆ ಸೀಮಿತವಾಗಿ ಹೋಗಿದೆ. ಕನ್ನಡವನ್ನು ಕಾಯುವ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಾರೆ.
ವೆಬ್‌ಸೈಟ್‌ನ ಮುಖಪುಟದಲ್ಲಿ ಕಂಡ ಕನ್ನಡದ ವಾಕ್ಯಗಳು
* ಒಂದು ದಿನಕ್ಕೆ 50 ಟನ್ಗಳಷ್ಟು ಕೊಕ್ಕನ್ ಪಟ್ಟಣಕ್ಕೆ ಆಗಮಿಸುತ್ತದೆ
* ಜಿಲ್ಲೆಯು ಪ್ರತಿ 1000 ಪುರುಷರಿಗೆ 976 ಹೆಣ್ಣು ಮಹಿಳೆಯರ ಅನುಪಾತ ಹೊಂದಿದೆ.
* ರಾಮನಗರ ಜಿಲ್ಲೆಯನ್ನು ಬೆಂಗಳೂರಿನಿಂದ ಕರ್ನಾಟಕ ರಾಜ್ಯ ರಾಜಧಾನಿ ರಸ್ತೆ ಮತ್ತು ರೈಲು ಮಾರ್ಗವನ್ನು ಒಂದು ಗಂಟೆಗಳೊಳಗೆ ತಲುಪಬಹುದು
* ರಾಮನಗರ ಎಂಬುದು ಭಾರತದ ರಾಜ್ಯ ಕರ್ನಾಟಕದ ಪಟ್ಟಣ ಮತ್ತು ನಗರ ಪುರಸಭೆ
ಅಪ್‌ಡೇಟ್ ಆಗದ ಮಾಹಿತಿ
ಜಿಲ್ಲಾ ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆಯಾಗಿ ತಿಂಗಳೇ ಕಳೆದಿದ್ದರೂ ಈ ವೆಬ್ ತಾಣದಲ್ಲಿ ಮಾತ್ರ ಇನ್ನೂ ಎಂ.ಎನ್. ನಾಗರಾಜು ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಸ್ಥಾಯಿಸಮಿತಿ ಅಧ್ಯಕ್ಷರ ಹೆಸರುಗಳೂ ಬದಲಾಗಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅನೂಪ್ ಶೆಟ್ಟಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆದಿದ್ದರೂ ಇನ್ನೂ ಬಿ. ರಮೇಶ್ ಹೆಸರೇ ಇದೆ.
ಕನ್ನಡದ ವಿಷಯದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಸರಿಯಲ್ಲ. ಇಂಗ್ಲಿಷಿನಿಂದ ಅನುವಾದ ಮಾಡುವ ಬದಲು ಜನರಿಗೆ ಅರ್ಥವಾಗುವ ಭಾಷೆ ಬಳಕೆ ಮಾಡಬೇಕು
– ಜಿ.ಟಿ. ಕೃಷ್ಣ, ಕಾರ್ಯದರ್ಶಿ, ಕಸಾಪ ರಾಮನಗರ ತಾಲ್ಲೂಕು ಘಟಕ
***
ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ ಕ್ಷೀಣಿಸುತ್ತಿದೆ. ಅದಕ್ಕೆ ಕಾರಣರಾದವರ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು
-ಎಚ್.ಪಿ. ನಂಜೇಗೌಡ, ಕೋಶಾಧ್ಯಕ್ಷ, ಕಸಾಪ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.