ADVERTISEMENT

ರಾಮನಗರ: ಸುಧಾರಣೆ ಹೊಸ್ತಿಲಲ್ಲಿ ಜಿಲ್ಲಾ ಆಸ್ಪತ್ರೆ, ಅಭಿವೃದ್ಧಿಯತ್ತ ದಾಪುಗಾಲು

ಹದಗೆಟ್ಟಿದ್ದ ಆಸ್ಪತ್ರೆಗೆ ಈಗ ಹೊಸ ರೂಪ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 14:44 IST
Last Updated 9 ಸೆಪ್ಟೆಂಬರ್ 2018, 14:44 IST
ರಾಮನಗರ ಜಿಲ್ಲಾ ಆಸ್ಪತ್ರೆ
ರಾಮನಗರ ಜಿಲ್ಲಾ ಆಸ್ಪತ್ರೆ   

ರಾಮನಗರ : ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ, ಸೇವೆ ಮತ್ತು ಸೌಲಭ್ಯ ಕಂಡು ಬರುತ್ತಿದ್ದು ಸುಧಾರಣೆಯ ಹೊಸ ನಿರೀಕ್ಷೆ ಮೂಡಿಸಿದೆ. ‘ಸರ್ಕಾರಿ ಆಸ್ಪತ್ರೆ’ ಎಂದು ಮೂಗು ಮುರಿಯುವವರೂ ಇತ್ತ ಚಿತ್ತ ಹರಿಸುತ್ತಿದ್ದಾರೆ.

ಶೇ 45ರಷ್ಟು ಸಿಬ್ಬಂದಿ ಕೊರತೆ ನಡುವೆಯೂ ಮರಣ ಪ್ರಮಾಣ (ಹೆರಿಗೆ ಸಂದರ್ಭ ತಾಯಿ, ಮಗು) ಇಳಿಮುಖಗೊಳ್ಳುತ್ತಿದೆ. ಸ್ವಚ್ಛತೆ, ಸೇವೆ ಹಾಗೂ ಸೌಲಭ್ಯ ಸುಧಾರಣೆ ಬಗ್ಗೆ ರೋಗಿಗಳೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

100 ಹಾಸಿಗೆಗಳ ಆಸ್ಪತ್ರೆಗೆ ಪ್ರತಿನಿತ್ಯ 500ಕ್ಕೂ ಹೆಚ್ಚು ಹೊರರೋಗಿ ಹಾಗೂ 200 ಒಳರೋಗಿಗಳು ಬರುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಗುಟ್ಕಾ, ಬೀಡಾ, ಪಾನ್ ತಿಂದು ಉಗುಳಿದ ಕಲೆಗಳು, ಹದಗೆಟ್ಟ ವಾರ್ಡ್‌ಗಳು, ಹೊಲಸಿನಿಂದ ಕೂಡಿದ್ದ ಶೌಚಾಲಯ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ಪರಿಣಾಮ ಇಲ್ಲಿನ ವಾತಾವರಣ ಕೆಟ್ಟು ಹೋಗಿತ್ತು. ಅಲ್ಲಲ್ಲಿ ಕಸ ಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ‘ಸರ್ಕಾರಿ ಆಸ್ಪತ್ರೆ’ಯು ದೇವರಿಗೆ ಪ್ರೀತಿ ಎನ್ನುವಂತಾಗಿತ್ತು.

ADVERTISEMENT

ಬದಲಾವಣೆ ತಂದ ರೌಂಡ್ಸ್: ಇಲ್ಲಿನ ಜಿಲ್ಲಾ ಶಸ್ತ್ರಚಿಕಿತ್ಸರಾದ ಡಾ.ಜೆ.ವಿಜಯನರಸಿಂಹ ಪ್ರತಿನಿತ್ಯ 2 ರಿಂದ 3 ಬಾರಿ ರೌಂಡ್ಸ್ ಆರಂಭಿಸಿದ್ದಾರೆ. ಪ್ರತಿ ವಾರ್ಡ್, ಘಟಕಗಳಿಗೆ ಭೇಟಿ ನೀಡುತ್ತಿದ್ದಾರೆ. ವಾರ್ಡ್, ಆವರಣಗಳು ಮಾತ್ರವಲ್ಲ. ಶೌಚಾಲಯದ ಸ್ವಚ್ಛತೆ ಬಗ್ಗೆ ಖುದ್ದು ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

‘ಡಿ.ಎಸ್ (ಜಿಲ್ಲಾ ಶಸ್ತ್ರಚಿಕಿತ್ಸಕ) ಅವರು ಕೇವಲ ರೌಂಡ್ಸ್‌ ಮಾತ್ರವಲ್ಲ, ಆಗಾಗ ದಿಢೀರ್‌ ಬಂದು ಪರಿಶೀಲಿಸುತ್ತಾರೆ. ಹಾಜರಿ ಪುಸ್ತಕ, ರೆಕಾರ್ಡ್‌, ದಾಸ್ತಾನು, ರೋಗಿಗಳಿಗೆ ಸೇವೆ, ಸೌಲಭ್ಯಗಳ ಪರಿಶೀಲನೆ ಮಾಡುತ್ತಾರೆ. ಶೌಚಾಲಯದ ಸ್ವಚ್ಛತೆ ಖುದ್ದು ಪರಿಶೀಲಿಸುತ್ತಾರೆ. ಹೀಗಾಗಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗುವುದಲ್ಲದೇ, ಕರ್ತವ್ಯವನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ: ಆಸ್ಪತ್ರೆ 28 ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅದರ ಮೂಲಕ ಸಿಬ್ಬಂದಿ ಕಾರ್ಯನಿರ್ವಹಣೆ ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಯುತ್ತದೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಗುಟ್ಕಾ, ಬೀಡಾ, ಪಾನ್ ಬಗ್ಗೆ ಸಿಬ್ಬಂದಿಯನ್ನು ತಪಾಸಣೆ ಮಾಡಲು ಆರಂಭಿಸಿದೆವು. ಚಟ ಬಿಡುವಂತೆ ಮನವಿ ಮಾಡಲಾಯಿತು. ಆ ಬಳಿಕ ರೋಗಿಗಳ ಜತೆ ಬರುವವರಲ್ಲಿ ಮನವಿ ಮಾಡುತ್ತಿದ್ದೇವೆ. ಇದರಿಂದ ಶೇ 75ರಷ್ಟು ಹೊಲಸು ಕಡಿಮೆಯಾಗಿದೆ. ಸಂಪೂರ್ಣ ಸ್ವಚ್ಛತೆಗೆ ಪ್ರಯತ್ನ ನಡೆದಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜೆ.ವಿಜಯನರಸಿಂಹ ತಿಳಿಸಿದರು.

ಭದ್ರತೆ: ಪ್ರತಿಯೊಬ್ಬರ ಚಲನವಲನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗುತ್ತದೆ. ಇದರಿಂದ ಕಳವು ಮತ್ತಿತರ ಘಟನೆಗಳು ತಕ್ಷಣವೇ ಬೆಳಕಿಗೆ ಬರುತ್ತಿವೆ.

‘ಜನೌಷಧ ಮಳಿಗೆ, ಕುಡಿಯುವ ನೀರಿನ ಘಟಕ, ಪಾರ್ಕಿಂಗ್ ಸೌಲಭ್ಯ, ಸಹಾಯವಾಣಿ, ಕ್ಯಾಂಟೀನ್ ಮತ್ತಿತರ ಸೌಲಭ್ಯಗಳಿವೆ. ರಕ್ತ ವಿದಳನ ಘಟಕ, ಸಿ.ಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್, ಐಸಿಯು ಆರಂಭಗೊಳ್ಳಬೇಕಿದೆ. ಜಿಲ್ಲಾಧಿಕಾರಿ ಅವರ ಮುತುವರ್ಜಿ, ಜನಪ್ರತಿನಿಧಿಗಳ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ’ ಎಂದು ಹೇಳಿದರು.

ಏಜೆಂಟ್‌ಗಳಿಗೆ ಎಚ್ಚರಿಕೆ: ‘ರೌಂಡ್ಸ್‌’ ಸಂದರ್ಭದಲ್ಲಿ ಲೋಪ ಕಂಡು ಬಂದರೆ, ತಿಳಿ ಹೇಳುತ್ತೇವೆ. ತಪ್ಪು ಮುಂದುವರಿದರೆ ‘ಮೆಮೋ’ ನೀಡುತ್ತೇವೆ. ಆ ಬಳಿಕ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಮಧ್ಯವರ್ತಿಗಳು (ಏಜೆಂಟರು) ಸಾಕ್ಷಿ ಸಹಿತ ಸಿಕ್ಕಿಬಿದ್ದರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ವಿಜಯನರಸಿಂಹ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.