ADVERTISEMENT

ಏಸು ಪ್ರತಿಮೆ ನಿರ್ಮಾಣಕ್ಕೆ ಭೂದಾನ: ಡಿಕೆಶಿ ಕಾಲೆಳೆದ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 6:10 IST
Last Updated 27 ಡಿಸೆಂಬರ್ 2019, 6:10 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ರಾಮನಗರ: ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದ ಬಳಿ ಏಸು ಕ್ರಿಸ್ತರ 114 ಅಡಿ ಪ್ರತಿಮೆ ನಿರ್ಮಾಣಕ್ಕೆ ಜಮೀನು ಕೊಡಿಸಿ, ಶಿಲಾನ್ಯಾಸ ನೆರವೇರಿಸಿದ ಶಾಸಕ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಪ್ರತಿಮೆಯನ್ನು ಹಾರೋಬೆಲೆ ಬಳಿಯ ಕಪಾಲಿ ಬೆಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಅಗತ್ಯವಾದ 10 ಎಕರೆ ಜಮೀನನ್ನು ಡಿ.ಕೆ. ಶಿವಕುಮಾರ್ ಸ್ವಂತ ಹಣ ಕೊಟ್ಟು ಸರ್ಕಾರದಿಂದ ಖರೀದಿಸಿ ಪ್ರತಿಮೆ ನಿರ್ಮಾಣ ಟ್ರಸ್ಟ್‌ಗೆ ಬುಧವಾರ ಹಸ್ತಾಂತರ ಮಾಡಿದ್ದಾರೆ.

‘ಡಿ.ಕೆ. ಶಿವಕುಮಾರ್ ಒಕ್ಕಲಿಗರಾಗಿ ಕೆಂಪೇಗೌಡರು, ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಲಿಲ್ಲ. ಬದಲಾಗಿ ಏಸುವಿನ ಪ್ರತಿಮೆ ಮೂಲಕ ಇನ್ನೊಬ್ಬರನ್ನು ಒಲೈಸಲು ಮುಂದಾಗಿದ್ದಾರೆ. ಇದು ಮುಂದೆ ಮತಾಂತರಕ್ಕೂ ಪ್ರಚೋದನೆ ಆಗಲಿದೆ’ ಎಂದು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ರಾಮನಗರ ಜಿಲ್ಲೆಯಲ್ಲಿ ಕ್ರೈಸ್ತರು ತೀರ ವಿರಳವಾಗಿದ್ದಾರೆ. ಇಲ್ಲಿ ಅಷ್ಟು ದೊಡ್ಡ ಪ್ರತಿಮೆ ಅಗತ್ಯ ಇರಲಿಲ್ಲ. ಸರ್ದಾರ್‌ ವಲ್ಲಬಭಾಯ್‌ ಪಟೇಲ್‌ ಪ್ರತಿಮೆ ನಿರ್ಮಾಣವನ್ನು ಇದೇ ಶಾಸಕರು ವಿರೋಧಿಸಿದ್ದರು. ಈಗ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಸೋನಿಯಾ ಗಾಂಧಿ ಅವರನ್ನು ಓಲೈಸಲು ಏಸು ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ’ ಎಂದು ಮತ್ತೊಬ್ಬರು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಕಪಾಲಿ ಬೆಟ್ಟ ಹಿಂದುಗಳ ಪವಿತ್ರ ಸ್ಥಳವಾಗಿದ್ದು, ಅದಕ್ಕೆ ಆಂದೋಲನ ರೂಪಿಸಲಾಗುವುದು ಎಂದು ಇನ್ನೊಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಶಾಸಕರ ಬೆಂಬಲಕ್ಕೆ ನಿಂತಿದ್ದು ‘ಅದು ಅವರ ವೈಯಕ್ತಿಕ ನಿರ್ಧಾರ. ಅದಕ್ಕಾಗಿ ಸರ್ಕಾರದ ಅನುದಾನ ಏನು ಖರ್ಚು ಮಾಡಿಲ್ಲ. ಎಲ್ಲ ಧರ್ಮದವರಿಗೂ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದಾರೆ’ ಎಂದು ಪ್ರತಿಯಾಗಿ ಕಮೆಂಟ್‌ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.