ಚನ್ನಪಟ್ಟಣ: ‘ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ ಗಳಿಕೆ ಹೆಚ್ಚಾಗಲು ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಿಂಹಪಾಲಿದೆ. ಕ್ಷೇತ್ರದ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸ್ಪರ್ಧಿಸಿದರೆ ಇದೇ ರೀತಿಯ ಬೆಂಬಲ ಇರಲಿದೆ’ ಎಂದು ದಲಿತಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಕೂಡ್ಲೂರು ರವಿಕುಮಾರ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ‘ತಾಲ್ಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ದಲಿತ ವರ್ಗಕ್ಕೆ ಸಾಗುವಳಿ ಚೀಟಿ ನೀಡಿಲ್ಲ, ಸ್ಮಶಾನದ ಅಭಿವೃದ್ಧಿ ಆಗಿಲ್ಲ. ದಲಿತ ಸಮುದಾಯ ಸಾಕಷ್ಟು ಅಭಿವೃದ್ಧಿ ವಂಚಿತವಾಗಿದೆ. ಡಿ.ಕೆ.ಸುರೇಶ್ ಅವರು ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕು’ ಎಂದರು.
‘ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 15 ಸಾವಿರ ಮತ ಪಡೆದಿದ್ದ ಪಕ್ಷವು ಲೋಕಸಭಾ ಚುನಾವಣೆಯಲ್ಲಿ 85 ಸಾವಿರ ಮತ ಪಡೆದಿದೆ. ಇದರಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮತಗಳು ಗಣನೀಯವಾಗಿದೆ. ಈ ಸಮುದಾಯಗಳು ಕಾಂಗ್ರೆಸ್ ಬೆಂಬಲಿಸಿದ ಕಾರಣ ಇಷ್ಟೊಂದು ಮತಗಳಿಕೆ ಸಾಧ್ಯವಾಗಿದೆ. ಪಕ್ಷದ ವರಿಷ್ಠರು ಈ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಸಮುದಾಯವನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ದಲಿತಪರ ಸಂಘಟನೆಗಳ ಒಕ್ಕೂಟದ ಬಿವಿಎಸ್ ಕುಮಾರ್, ನೀಲಸಂದ್ರ ಸಿದ್ದರಾಮು, ಅಪ್ಪಗೆರೆ ಶ್ರೀನಿವಾಸ್ ಮೂರ್ತಿ, ಚಿಕ್ಕೇನಹಳ್ಳಿ ಶಿವರಾಂ, ಮೈಲನಾಯಕನಹಳ್ಳಿ ಕೃಷ್ಣಯ್ಯ, ಮೆಣಸಿಗನಹಳ್ಳಿ ಸ್ವಾಮಿ, ಅರುಣ್ ರಾಂಪುರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.