ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ನಿರೀಕ್ಷೆಯಂತೆ ಸುರೇಶ್‌ಗೆ ‘ಕೈ’ ಟಿಕೆಟ್

ಬೆಂಗಳೂರು ಗ್ರಾಮಾಂತರ: ಮೈತ್ರಿಕೂಟದಲ್ಲಿ ಮುಗಿಯದ ಅಭ್ಯರ್ಥಿ ಗೊಂದಲ

ಓದೇಶ ಸಕಲೇಶಪುರ
Published 8 ಮಾರ್ಚ್ 2024, 21:27 IST
Last Updated 8 ಮಾರ್ಚ್ 2024, 21:27 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   

ರಾಮನಗರ: ಮುಂಬರುವ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನಿರೀಕ್ಷೆಯಂತೆ ಹಾಲಿ ಸಂಸದ ಡಿ.ಕೆ. ಸುರೇಶ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರನಾಗಿರುವ ಸುರೇಶ್, 2019ರ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಸಂಸದ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್ ಸುರೇಶ್ ಅವರಿಗೆ ಖಚಿತವೆನ್ನುವುದರಲ್ಲಿ ಎರಡು ಮಾತಿರಲಿಲ್ಲ. ಸುರೇಶ್ ಹೆಸರಿನ ಮುಂದೆ ಕ್ಷೇತ್ರದಲ್ಲಿ ಮತ್ತೊಂದು ಹೆಸರು ಸಹ ಕೇಳಿ ಬಂದಿರಲಿಲ್ಲ. ಟಿಕೆಟ್ ಘೋಷಣೆಗೂ ಮುಂಚೆಯೇ ಸುರೇಶ್ ಈಗಾಗಲೇ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಟಿಕೆಟ್ ಘೋಷಣೆಯು ಪ್ರಚಾರ ಕಾರ್ಯಕ್ಕೆ ಪಕ್ಷದ ಮುಖಡರು ಹಾಗೂ ಕಾರ್ಯಕರ್ತರಿಗೆ ಮತ್ತಷ್ಟು ಹುರುಪು ತುಂಬಲಿದೆಯಷ್ಟೆ.

ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ (ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಬೆಂಗಳೂರಿನ ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್) 5 ಕಡೆ ಕಾಂಗ್ರೆಸ್ ಶಾಸಕರಿದ್ದರೆ, 2 ಕಡೆ ಬಿಜೆಪಿ ಹಾಗೂ 1 ಕಡೆ ಜೆಡಿಎಸ್‌ನವರಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕೈ ಬಲ ಹೆಚ್ಚಾಗಿದೆ.

ADVERTISEMENT

ಉಪ ಚುನಾವಣೆ ಮೂಲಕ ಪ್ರವೇಶ: ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿಯವರಾದ ಸುರೇಶ್, ರಾಜಕಾರಣದಲ್ಲಿರುವ ಅಣ್ಣ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲವಾಗಿ ತೆರೆಮರೆಯಲ್ಲಿ ಕೆಲಸ ಮಾಡಿಕೊಂಡಿದ್ದವರು. 2008ರಲ್ಲಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ  ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆಗ ನಡೆದ ಉಪ ಚುನಾವಣೆಗೆ ಶಿವಕುಮಾರ್ ಅವರು ತಮ್ಮ ಸಹೋದರ ಸುರೇಶ್ ಅವರನ್ನು ನಿಲ್ಲಿಸಿದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಸುರೇಶ್ ಬರೋಬ್ಬರಿ 1.37 ಲಕ್ಷ ಮತಗಳ ಅಂತರದಲ್ಲಿ ಗೆದ್ದು, ಮೊದಲ ಸಲ ಸಂಸತ್ ಪ್ರವೇಶಿಸಿದರು.

ಮರು ವರ್ಷ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ 2.31 ಮತಗಳ ಅಂತರದಲ್ಲಿ ಮರು ಆಯ್ಕೆಯಾದರು. 2019ರಲ್ಲಿ 8.78 ಲಕ್ಷ ಮತಗಳನ್ನು ಪಡೆದು ಮೂರನೇ ಸಲ ಸಂಸತ್‌ ಸದಸ್ಯರಾದರು. ಆ ಚುನಾವಣೆಯಲ್ಲಿ ಸುರೇಶ್ ಅವರು ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಏಕೈಕ ಸಂಸದರಾಗಿದ್ದರು.

ಯಾರಾಗ್ತಾರೆ ಮೈತ್ರಿ ಅಭ್ಯರ್ಥಿ?

ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಏರ್ಪಟ್ಟಿರುವುದರಿಂದ ಗ್ರಾಮಾಂತರ ಕ್ಷೇತ್ರದ ಚುನಾವಣಾ ಅಖಾಡ ಹಿಂದೆಂದಿಗಿಂತಲೂ ರಂಗೇರಿದೆ. ಸುರೇಶ್ ಎದುರಾಳಿಯಾಗಿ ಮೈತ್ರಿ ಪಕ್ಷದಿಂದ ಯಾರ ಹೆಸರು ಹೊರ ಬೀಳಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ. ಸದ್ಯ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಅಳಿಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮತ್ತು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೆಸರು ಮುಂಚೂಣಿಯಲ್ಲಿವೆ. ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳುವುದೇ ಅಥವಾ ಅಚ್ಚರಿಯ ಹೆಸರೊಂದು ಹೊರಬೀಳುವುದೇ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.