ADVERTISEMENT

ರಿಯಲ್ ಎಸ್ಟೇಟ್ ಕೈಗೊಂಬೆಯಾದ ಅಧಿಕಾರಿಗಳು: ಡಿ.ಕೆ. ಸುರೇಶ್ ಕಿಡಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 15:28 IST
Last Updated 31 ಜನವರಿ 2024, 15:28 IST
ಕುದೂರು ಹೋಬಳಿಯ ಶ್ರೀಗಿರಿಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಇದ್ದಾರೆ
ಕುದೂರು ಹೋಬಳಿಯ ಶ್ರೀಗಿರಿಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಇದ್ದಾರೆ   

ಕುದೂರು: ‘ಸರ್ಕಾರ ಅಧಿಕಾರಿಗಳು ಜನಪರವಾದ ಕೆಲಸಗಳನ್ನು ಮಾಡುತ್ತಿಲ್ಲ. ಬದಲಿಗೆ, ರಿಯಲ್ ಎಸ್ಟೇಟ್ ಕುಳಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಸದ ಡಿ.ಕೆ ಸುರೇಶ್ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.

ಹೋಬಳಿಯ ಮಾದಿಗೊಂಡನಹಳ್ಳಿ, ಶ್ರೀಗಿರಿಪುರ ಹಾಗೂ ಅದರಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ರಿಯಲ್ ಎಸ್ಟೇಟ್ ಕುಳಗಳಿಗೆ ದಾಖಲೆ ಮಾಡಿಕೊಟ್ಟು, ತಮ್ಮ ಜೇಬು ಹಣವನ್ನು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಡವರ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಅವರ ಬಗ್ಗೆ ಅನುಕಂಪವೂ ಇಲ್ಲ’ ಎಂದರು.

‘ಜನಪರ ಸಂಸದನಾಗಿರುವ ನಾನು ಅಧಿಕಾರಿಗಳ ಪರವಾಗಿದ್ದೇನೆ. ಆದರೆ, ಆಧಿಕಾರಿಗಳು ಜನಪರವಾಗಿ ಕೆಲಸ ಮಾಡುವುದನ್ನು ಮೈಗೂಡಿಸಿಗೊಂಡಿಲ್ಲ. ಇದು ಬೇಸರದ ಸಂಗತಿಯಾಗಿದೆ. ಬಡವರ ಕೆಲಸಗಳು ಸಕಾಲಕ್ಕೆ ಆಗುತ್ತಿವೆ ಎಂದರೆ, ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದರ್ಥ’ ಎಂದುಹೇಳಿದರು.

ADVERTISEMENT

‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಎಕರೆ ಭೂಮಿಯನ್ನು ಗುರುತಿಸಿ ಬಡವರಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇನೆ. ಇತ್ತೀಚೆಗೆ ಭೂಮಿ ಬೆಲೆಯು ಗಗನಕ್ಕೇರುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಬಡವರಿಗೆ ನಿವೇಶನ ಸಿಗದ ವಂಚಿತರಾಗಬಾರದು ಎಂದು ಈ ಕ್ರಮ ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

‘ಹೇಮಾವತಿ ನೀರಾವರಿ ಯೋಜನೆ ನಮ್ಮ ಸರ್ಕಾರದ ಕನಸಿನ ಕೂಸು. ಇದನ್ನು ವಿರೋಧ ಪಕ್ಷದವರು ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ಮಾಡಿದರು. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಯೋಜನೆಯನ್ನು ಇನ್ನೆರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಕೇವಲ 36 ಕಿಲೋಮೀಟರ್‌ನಿಂದ ನೀರು ತರಲು ಸುಮಾರು ₹990 ಕೋಟಿ ಮಂಜೂರಾಗಿದೆ’ ಎಂದು ಹೇಳಿದರು.

‘ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ದಾಖಲೆ ಸಿಗಬೇಕೆಂದು ಎಲ್ಲಾ ದಾಖಲೆಗಳನ್ನು ಮಾಡಲಾಗುತ್ತಿದೆ. ಇನ್ನೊಂದು ವರ್ಷದೊಳಗೆ ಎಲ್ಲಾ ರೈತರ ಭೂಮಿಗಳನ್ನು ಪೋಡಿಗೊಳಿಸಿ ಇ-ಸ್ವತ್ತನ್ನು ನೀಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಟ್ಟಿಹಾಕಲು ವಿರೋಧ ಪಕ್ಷಗಳಿಂದ ಸಾಧ್ಯವಿಲ್ಲ. ಈ ಬಾರಿ ನನ್ನ ಕ್ಷೇತ್ರದ ಜನರು ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಅವರನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಬೇಕು. ನೀವು ಹೇಳಿದ ಕೆಲಸವನ್ನು ನಾವು ಮಾಡದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ಹಾಕಬೇಡಿ’ ಎಂದರು.

ದಿಶಾ ಸಮಿತಿ ಸದಸ್ಯ ಜೆ.ಪಿ. ಚಂದ್ರೇಗೌಡ, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕೆಇಬಿ ರಾಜಣ್ಣ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀಗಿರಿಪುರ ಪ್ರಕಾಶ್, ಸಿದ್ದಲಿಂಗಪ್ಪ, ಹೊನ್ನಪ್ಪ, ದೀಪು, ಶ್ರೀಗಿರಿಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮಾ ರಮೇಶ್, ಮಾದಿಗೊಂಡನಹಳ್ಳಿ ಅಧ್ಯಕ್ಷ ನಾಗೇಶ್, ಪಿಡಿಒ ರವಿ, ಬಸವರಾಜು, ಕಾರ್ಯದರ್ಶಿ ದೇವರಾಜು, ನಾಗರಾಜು ಕುಮಾರ್, ಶಿವಣ್ಣ, ರಾಜಣ್ಣ, ಚಂದ್ರಣ್ಣ, ಶರ್ಮ, ರವೀಶ್ ಹಾಗೂ ಇತರರು ಇದ್ದರು.

‘ಸೋಲಾರ್ ಪಾರ್ಕ್ ನಿರ್ಮಾಣ’

‘ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 50 ಮೆಗಾವಾಟ್‌ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಇದರಿಂದ ರೈತರ ಪಂಪ್ ಸೆಟ್‌ಗಳಿಗೆ ಹಗಲು ಅಗತ್ಯವಿರುವಷ್ಟು ವಿದ್ಯುತ್ ಕೊಡಬಹುದು ಎಂದು ತೀರ್ಮಾನಿಸಿದ್ದೇವೆ. ಈಗಾಗಲೇ ಸುಮಾರು ₹32 ಕೋಟಿ ವೆಚ್ಚದಲ್ಲಿ ಎಚ್.ವಿ.ಡಿ.ಎಸ್ ಯೋಜನೆ ಮಂಜೂರಾಗಿದ್ದು ಮೊದಲ ಹಂತದಲ್ಲಿ ₹13 ಕೋಟಿ ಬಿಡುಗಡೆಯಾಗಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.