ADVERTISEMENT

ನಾನು ಚನ್ನಪಟ್ಟಣ ಬಿಟ್ಟು ಓಡುವವನಲ್ಲ, ಇಲ್ಲೇ ಇದ್ದು ಜನರ ಋಣ ತೀರಿಸುವೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 12:49 IST
Last Updated 24 ಜೂನ್ 2024, 12:49 IST
   

ಚನ್ನಪಟ್ಟಣ (ರಾಮನಗರ): ‘ಅಧಿಕಾರಕ್ಕಾಗಿ ನಾನು ಚನ್ನಪಟ್ಟಣ ಬಿಟ್ಟು ಓಡುವವನಲ್ಲ. ಬದಲಿಗೆ, ಇಲ್ಲೇ ಇದ್ದು ಕ್ಷೇತ್ರದ ಜನರ ಋಣ ತೀರಿಸುವೆ. ಯಾರು ಏನೇ ಟೀಕೆ ಮಾಡಲಿ. ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ನನಗೆ ಮುಖ್ಯ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಕೋಡಂಬಳ್ಳಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಹಿಂದಿನ ಜನಪ್ರತಿನಿಧಿ ಈ ಕೆಲಸ ಮಾಡಲಿಲ್ಲ. ನಾನು ಈ ಭಾಗದ ಶಾಸಕನಾಗಿದ್ದಾಗಲೂ ಅಧಿಕಾರಿಗಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೆ. ಈಗಲೂ ಮುಂದುವರಿಸುತ್ತಿದ್ದೇನೆ’ ಎಂದರು.

‘ತಾಲ್ಲೂಕಿನ ಅಧಿಕಾರಿಗಳ ಸಭೆ ಮಾಡಿದಾಗ ನನ್ನ ಗಮನಕ್ಕೆ ಒಂದಷ್ಟು ವಿಚಾರಗಳು ಬಂದಿವೆ. ಕಳೆದ ಐದು ವರ್ಷಗಳಲ್ಲಿ ತಾಲ್ಲೂಕಿನ ಬಡವರಿಗೆ ಒಂದೇ ನಿವೇಶನ ಹಂಚಿಲಿಲ್ಲ. ಬಗರ್ ಹುಕಂ ಸಾಗುವಳಿ ಜಮೀನು ನೀಡಿಲ್ಲ. ಬಡವರ ಬದುಕಲ್ಲಿ ಬದಲಾವಣೆ ತರಲಿಲ್ಲ ಎಂದರೆ ನಾವು ಜನಪ್ರತಿನಿಧಿಯಾಗಿ ಯಾಕಿರಬೇಕು? ಇಂತಹ ಕಾರ್ಯಕ್ರಮ ಮಾಡಿ ಜನರ ಕಷ್ಟ ಆಲಿಸಬೇಡಿ ಎಂದು ಅವರಿಗೆ ನಾವೇನಾದರೂ ಹೇಳಿದ್ದೆವಾ?’ ಎಂದು ತಿರುಗೇಟು ನೀಡಿದರು.

ADVERTISEMENT

‘ಬೇರೆ ಪಕ್ಷಕ್ಕೆ ಮತ ಹಾಕಿ ಗುರುತಿಸಿಕೊಂಡಿದ್ದೇನೆ. ಶಿವಕುಮಾರ್ ಬಳಿ ಹೋಗಿ ಹೇಗೆ ಅರ್ಜಿ ನೀಡಲಿ ಎಂಬ ಮುಜುಗರ, ಹಿಂಜರಿಕೆ ಬೇಡ. ನಾವು ಎಲ್ಲರ ಸಮಸ್ಯೆಗಳನ್ನೂ ಆಲಿಸಿ ಸ್ಪಂದಿಸುತ್ತೇವೆ. ಇದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಕನಸಿನ ಯೋಜನೆ. ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಇದಾಗಿದೆ’ ಎಂದು ಹೇಳಿದರು.

ಕೆಲವರು ಮಾತಲ್ಲೇ ಮನೆ ಕಟ್ಟಲು ಪ್ರಯತ್ನಿಸುವತ್ತಾರೆ. ನಾನು ಶ್ರಮದಿಂದ ಭದ್ರ ಅಡಿಪಾಯ ಹಾಕಿ ಮನೆ ಕಟ್ಟುವವನೇ ಹೊರತು, ಭಾವನೆ ಮೇಲೆ ರಾಜಕೀಯ ಮಾಡಲ್ಲ. ಬದುಕಿನ ಮೇಲೆ ರಾಜಕಾರಣ ಮಾಡಿ ನಿಮ್ಮ ಬದುಕು ಹಸನು ಮಾಡುತ್ತೇವೆ
– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

‘ವಿದ್ಯುತ್ ಪರಿವರ್ತಕ ಹಾಕಿಸಲಿ ನೋಡೋಣ’

‘ಕ್ಷೇತ್ರಕ್ಕೆ ಏನು ಮಾಡಿದ್ದೀರಿ ಎಂದು ದೊಡ್ಡ ನಾಯಕ ಕುಮಾರಸ್ವಾಮಿ ಅವರು ಕೇಳಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ತಾಲ್ಲೂಕಿನ 18 ಸಾವಿರ ರೈತರಿಗೆ ಉಚಿತವಾಗಿ ವಿದ್ಯುತ್ ಪರಿವರ್ತಕ ನೀಡಿದ್ದೇನೆ. ಹತ್ತು ಕಡೆ ದೊಡ್ಡ ಸ್ಟೇಷನ್ ಹಾಕಿಸಿದ್ದೇವೆ. ಕುಮಾರಸ್ವಾಮಿ ಅವರು ಕೇಂದ್ರದಿಂದ ಹಣ ತಂದು ಮಂಡ್ಯ ಜನರಿಗೆ ಉಚಿತವಾಗಿ ಹಾಕಿಸಲಿ ನೋಡೋಣ’ ಎಂದು ಶಿವಕುಮಾರ್ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.