ಕನಕಪುರ: ‘ಗೋವುಗಳ ಮೇವಿಗಾಗಿ ನಿಗದಿ ಮಾಡಿ ಬಿಟ್ಟಿದ್ದ ಗೋಮಾಳ ಜಾಗವನ್ನು ಅಕ್ರಮವಾಗಿ ಕಬಳಿಸಿ ಅದರಲ್ಲಿ ಯೇಸು ಪ್ರತಿಮೆಯನ್ನು ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ’ ಎಂದು ರೈತ ಸಂಘ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಎಚ್ಚರಿಸಿದರು.
ಇಲ್ಲಿನ ರಾಜರಾವ್ ರಸ್ತೆಯಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ವಿವಾಧಿತ ಸ್ಥಳವಾಗಿರುವ ಕಾಪಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ವಿರೋಧಿಸಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ಸಾವಿರಾರು ರೈತರು ನಾಲ್ಕೈದು ದಶಕಗಳಿಂದ ಜಮೀನು ಮಾಡಿಕೊಂಡು ಭೂಮಿ ಮಂಜೂರು ಮಾಡಿಕೊಡುವಂತೆ ಸಾಗುವಳಿ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಅಂತಹ ನಿಜವಾದ ರೈತರಿಗೆ ತಾಲ್ಲೂಕು ಆಡಳಿತ ಸಾಗುವಳಿ ಚೀಟಿಯನ್ನು ಕೊಟ್ಟು ದುರಸ್ತಿ ಮಾಡಿಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.
ಆದರೆ ಗೋವುಗಳಿಗೆ ಕಾಯ್ದಿರಿಸಿದ ಭೂಮಿಯನ್ನು ಶಾಸಕರ ರಾಜಕೀಯ ಪ್ರಭಾವಕ್ಕೆ ಬೆದರಿ ಕಾನೂನುಬಾಹಿರವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ. ಅದೇ ಕಾನೂನು ಬಳಸಿಕೊಂಡು ರೈತರಿಗೇಕೆ ಭೂಮಿ ಮಂಜೂರು ಮಾಡಿಕೊಟ್ಟಿಲ್ಲ ಎಂದು ಟೀಕಿಸಿದರು.
ಯೇಸು ಪ್ರತಿಮೆ ನಿರ್ಮಾಣ ಮಾಡಲು ಹೊರಟಿರುವ ಸ್ಥಳವು ಈ ಹಿಂದೆ ಸುತ್ತಮುತ್ತಲ ರೈತರು ಸಂಕ್ರಾಂತಿ ಸಮಯದಲ್ಲಿ ಅಲ್ಲಿ ಪೂಜೆ ನೆರವೇರಿಸುತ್ತಿದ್ದರು. ಧಾರ್ಮಿಕ ನಂಬಿಕೆಯ ಮೇಲೆ ಆಚರಣೆ ಮಾಡುತ್ತಿದ್ದ ಸ್ಥಳೀಯ ಸಂಸ್ಕೃತಿ ನಾಶವಾಗದಂತೆ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು. ಗೋಮಾಳ ಜಾಗವನ್ನು ಯಾರಿಗೂ ಕೊಡದೆ ಗೋವುಗಳಿಗೆ ಉಳಿಸಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಜಿಲ್ಲಾ ಮುಖಂಡ ಮರಿಯಪ್ಪ, ಹೋಬಳಿ ಘಟಕಗಳ ಅಧ್ಯಕ್ಷರಾದ ರಂಗಪ್ಪ, ಕುಮಾರ್, ಹರೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.