ಚನ್ನಪಟ್ಟಣ: ಹಗಲು ದರೋಡೆ ಮಾಡುವವರನ್ನು ನಂಬಿ ನಿಮ್ಮ ಮತ ನೀಡಿ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಸಹೋದರರ ಹೆಸರು ಹೇಳದೆ ತಾಲ್ಲೂಕಿನ ಜನತೆಯಲ್ಲಿ ಮನವಿ ಮಾಡಿದರು.
ನಗರದ ಕೊಲ್ಲಾಪುರದಮ್ಮ ದೇವಸ್ಥಾನ ಆವರಣ ಹಾಗೂ ಬ್ರಹ್ಮಣೀಪುರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್ ನಗರ ಹಾಗೂ ಹೊಂಗನೂರು ಜಿ.ಪಂ. ವ್ಯಾಪ್ತಿಯ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ನಾಲ್ಕು ತಿಂಗಳುಗಳಿಂದ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿಗೆ ಭೇಟಿ ನೀಡಿ ಬೊಗಳೆ ಭಾಷಣ ಮಾಡುತ್ತಿದ್ದಾರೆ. ನಿವೇಶನ, ಮನೆಗಳನ್ನು ನೀಡುತ್ತೇವೆ ಎಂದು ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಯಾವುದೇ ಮಾತಿಗೆ ಮರಳಾಗಬೇಡಿ. ಅವರನ್ನು ಮನೆಗೆ ಕಳಿಸಿದರೆ ಸಂಪೂರ್ಣವಾಗಿ ಮನೆಗೆ ಹೋಗುತ್ತಾರೆ ಎಂದರು.
ತಾಲ್ಲೂಕಿನಲ್ಲಿ ನಿವೇಶನ, ಮನೆ ನೀಡುತ್ತೇವೆ ಎಂದು ಹೇಳಿ ಎಷ್ಟು ತಿಂಗಳಾಯಿತು. ನಾಲ್ಕು ತಿಂಗಳಿಂದ ಕ್ಷೇತ್ರಕ್ಕೆ 20 ಬಾರಿ ಬಂದಿದ್ದೇನೆ ಎಂದೇಳುವ ಅವರು ಎಷ್ಟು ಜನರಿಗೆ ನಿವೇಶನ, ಮನೆ ನೀಡಿದ್ದಾರೆ. ಒಂದು ಮನೆಯನ್ನಾದರೂ ನೀಡಿದ್ದಾರಾ, ಹಲವಾರು ವರ್ಷಗಳಿಂದ ಗೋಮಾಳಗಳಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ತಾಲ್ಲೂಕಿನ ಮಂದಿಯನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಗೋಮಾಳಗಳಲ್ಲಿ ಜೆಸಿಬಿ ಮೂಲಕ ಮಣ್ಣು ತೆಗೆಸಿ ನಿವೇಶನ ನೀಡುತ್ತೇವೆ ಎಂದು ನಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ನಿಂದ ಗೆದ್ದಿದ್ದ ಇಲ್ಲಿನ ನಗರಸಭಾ ಸದಸ್ಯರನ್ನು ₹ 1 ಕೋಟಿ ಅನುದಾನ ನೀಡುವ ಆಸೆ ತೋರಿಸಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡಿದ್ದಾರೆ. ಯುಜಿಡಿ ಕಾಮಗಾರಿಗೆ ನಾನು ಬಿಡುಗಡೆ ಮಾಡಿಸಿದ್ದ ₹ 98 ಕೋಟ ಅನುದಾನವನ್ನು ನಾವು ಬಿಡುಗಡೆ ಮಾಡಿಸಿದ್ದೇವೆ ಎಂದು ಸುಳ್ಳು ಹೇಳಿಕೊಳ್ಳುತ್ತಿದ್ದಾರೆ. ರಾಮನಗರದಲ್ಲಿ ನಿವೇಶನ ನೀಡುತ್ತೇವೆ ಎಂದು ಹೇಳಿ ಒಂದೂವರೆ ವರ್ಷವಾಗಿದೆ. ಈವರೆಗೆ ಒಬ್ಬರಿಗೂ ಒಂದು ನಿವೇಶನ ನೀಡಿಲ್ಲ. ಇಲ್ಲಿಯೂ ಅದು ಪುನರಾವರ್ತನೆಯಾಗುತ್ತದೆ. ಚುನಾವಣೆ ಆದ ಮೇಲೆ ಒಂದೇ ಒಂದು ನಿವೇಶನ ನೀಡಿದರೆ ಆಗ ಮಾತನಾಡುತ್ತೇನೆ ಎಂದು ಸವಾಲು ಹಾಕಿದರು.
ಕಳೆದ ಎರಡು ವಿಧಾನಸಭಾ ಚುನಾವಣೆಗಳನ್ನು ನನಗಾಗಿ ನೀವು ಮಾಡಿದ್ದೀರಿ, ಈ ಬಾರಿ ನಿಮಗಾಗಿ ನಾನು ಚುನಾವಣೆ ಮಾಡುತ್ತೇನೆ. ಉಪ ಚುನಾವಣೆಯ ಉಸ್ತುವಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ. ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕುಮಾರಸ್ವಾಮಿ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಲು ಚನ್ನಪಟ್ಟಣದ ಜನತೆ ಕಾರಣ. ಪಕ್ಷದ ಹಿತದೃಷ್ಟಿಯಿಂದ ಕುಮಾರಸ್ವಾಮಿ ಅವರು ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡು ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಬೇಕಾಯಿತು. ಅನಿರೀಕ್ಷಿತ ಕಾರಣದಿಂದ ಚನ್ನಪಟ್ಟಣ ಉಪಚುನಾವಣೆ ಬಂದಿದೆ. ಚನ್ನಪಟ್ಟಣ ಉಪಚುನಾವಣೆಯನ್ನು ಇಡೀ ದೇಶ ನೋಡುತ್ತಿದೆ. ನಿಮ್ಮೆಲ್ಲರ ಸಹಕಾರ, ಪ್ರೀತಿ, ವಿಶ್ವಾಸ ಕುಮಾರಸ್ವಾಮಿ ಅವರ ಮೇಲೆ ಇರಲಿ. ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಫಲಿತಾಂಶ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮಹಾನಾಯಕರು ದೊಡ್ಡ ಪ್ರಚಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಒಂದು ದಿನವೂ ಪ್ಲೆಕ್ಸ್ ಹಾಕಿಕೊಂಡು ಪ್ರಚಾರ ತೆಗೆದುಕೊಳ್ಳಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದರು. ಆದರೆ ಚುನಾವಣೆಗಾಗಿ ಕಾಂಗ್ರೆಸ್ ಮಹಾನುಭಾವರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ರಾಜ್ಯ ಸರ್ಕಾರದ ಸಚಿವರ ದಂಡು ಚನ್ನಪಟ್ಟಣಕ್ಕೆ ಬರುತ್ತದೆ. ದುಡ್ಡಿನ ಹೊಳೆ ಹರಿಸಲು ಕಾಂಗ್ರೆಸ್ ಮುಂದಾಗಿದೆ. ಈ ಕ್ಷೇತ್ರದ ಜನತೆ ದುಡ್ಡಿಗೆ ಮನ್ನಣೆ ಕೊಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.
ಸಭೆಗೂ ಮೊದಲು ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಚ್.ಸಿ. ಜಯಮುತ್ತು, ನಗರ ಘಟಕದ ಅಧ್ಯಕ್ಷ ಅಜಯ್ ಕುಮಾರ್, ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಹಾಪ್ ಕಾಮ್ಸ್ ದೇವರಾಜು, ಕುಕ್ಕೂರದೊಡ್ಡಿ ಜಯರಾಮ್, ಬಾಬು, ಗರಕಹಳ್ಳಿ ಕೃಷ್ಣಗೌಡ, ನಿಸರ್ಗ ಲೋಕೇಶ್, ನಗರಸಭಾ ಸದಸ್ಯರು, ಸ್ಥಳೀಯ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.