ರಾಮನಗರ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು, ಪ್ರತಿಕ್ರಿಯೆ ನೀಡಲು ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ನಿರಾಕರಿಸಿದರು. ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂಗೆ ಮಂಗಳವಾರ ಭೇಟಿ ನೀಡಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
‘ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂಪ್ರೇರಣೆಯಿಂದ ನನ್ನ ಪರ ಶ್ರಮಿಸಿದ್ದಾರೆ. ಮತದಾನ ಮುಗಿದ ಬಳಿಕ ಕ್ಷೇತ್ರದ ವಿವಿಧೆಡೆಗೆ ಭೇಟಿ ನೀಡಿದಾಗ, ಅವರ ನೀಡಿರುವ ಪ್ರತಿಕ್ರಿಯೆಯು ನನ್ನ ಗೆಲುವಿನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ’ ಎಂದರು.
‘ನಗರ ಪ್ರದೇಶವಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲಿ ನನ್ನ ಪರ ಉತ್ತಮ ಅಲೆ ಇತ್ತು. ಅದೆಲ್ಲವೂ ಮತಗಳಾಗಿ ಬದಲಾಗಿವೆ. ಸ್ಥಳೀಯ ಮತದಾರರು ಮತ್ತು ಮುಖಂಡರು ಸಹ ಈ ವಿಷಯವನ್ನು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ 2.5ರಷ್ಟು ಹೆಚ್ಚಾಗಿದೆ. ಮತ ಪ್ರಮಾಣ ಹೆಚ್ಚಾಗಬೇಕಾದರೆ ಚುನಾವಣಾ ಆಯೋಗವು ವಾರಂತ್ಯದ ಬದಲು, ವಾರದ ದಿನಗಳಲ್ಲೇ ಮತದಾನ ದಿನ ನಿಗದಿಪಡಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.