ರಾಮನಗರ: ಈ ಸಲ 2023ರ ವರ್ಷಾಂತ್ಯ ಹಾಗೂ ವರ್ಷಾರಂಭದ ಸಂಭ್ರಮಾಚರಣೆಗೆ ಜಿಲ್ಲೆಯಲ್ಲಿ ಈ ಬಾರಿ ಮದ್ಯದ ಕಿಕ್ ಅಷ್ಟಾಗಿ ಏರಿಕೆಯಾಗಿಲ್ಲ. ಹೊಸ ವರ್ಷವನ್ನು ಸ್ವಾಗತಿಸಲು ಮದ್ಯಪ್ರಿಯರು ಕಿಕ್‌ಗೆ ಅಷ್ಟಾಗಿ ಕೇರ್ ಮಾಡಿಲ್ಲ. ಹಾಗಾಗಿಯೇ, ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಬಿಯರ್ ಮಾರಾಟ ಮಾತ್ರ ಸ್ವಲ್ಪ ಏರಿಕೆ ಕಂಡಿದೆ. ಇತರ ಮದ್ಯ ಮಾರಾಟದಲ್ಲಿ ಕುಸಿತವಾಗಿದೆ.
ಪ್ರತಿ ವರ್ಷ ಡಿ. 30 ಮತ್ತು 31ರಂದು ದಾಖಲೆಯ ಮದ್ಯ ಮಾರಾಟವಾಗುತ್ತದೆ. ಅಬಕಾರಿ ಇಲಾಖೆ ಸಹ ದಾಖಲೆಯ ಆದಾಯ ನಿರೀಕ್ಷೆಯಲ್ಲಿರುತ್ತದೆ. ಆದರೆ, ಈ ಸಲ ಇಲಾಖೆಗೆ ನಿರಾಸೆಯಾಗಿದೆ. ವರ್ಷಾಂತ್ಯದ ಸಡಗರಕ್ಕೆ ಮದ್ಯ ಮಾರಾಟವು ಜಿಲ್ಲೆಯ ಮಟ್ಟಿಗೆ ನಿರಾಸೆ ತಂದಿದೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ ಬಿಯರ್ ಮಾರಾಟದಲ್ಲಿ 200 ಬಾಕ್ಸ್ ಮಾತ್ರ ಹೆಚ್ಚಳವಾಗಿದೆ. 2022ರಲ್ಲಿ 8,696 ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಈ ಸಲ ಕೇವಲ 8,836 ಬಾಕ್ಸ್‌ಗಳು ಮಾರಾಟವಾಗಿದೆ. ಅದೇ ರೀತಿ, ಕಳೆದ ವರ್ಷ 13,876 ಬಾಕ್ಸ್ ಇತರ ಮದ್ಯ ಮಾರಾಟವಾಗಿದ್ದರೆ, ಈ ಸಲ ಕೇವಲ 12,423 ಬಾಕ್ಸ್ ಮಾರಾಟವಾಗಿದೆ. ಅಂದರೆ, 1,453 ಬಾಕ್ಸ್ ಕುಸಿತ ಕಂಡಿದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಯರ್ ಮಾರಾಟದಲ್ಲಿ ಕನಕಪುರದಲ್ಲಿ ಅತಿ ಹೆಚ್ಚು 3,748 ಹಾಗೂ ಮಾಗಡಿಯಲ್ಲಿ ಅತಿ ಕಡಿಮೆ 1,355 ಬಾಕ್ಸ್ ಮಾರಾಟವಾಗಿದೆ. ಮದ್ಯ ಮಾರಾಟದಲ್ಲಿ ರಾಮನಗರದಲ್ಲಿ ಅತಿ ಹೆಚ್ಚು 4,245 ಹಾಗೂ ಮಾಗಡಿಯಲ್ಲಿ ಅತಿ ಕಡಿಮೆ 2,347 ಬಾಕ್ಸ್‌ಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಬಿಯರ್ ಮತ್ತು ಮದ್ಯದ ದರ ಹೆಚ್ಚಳವೂ ಮಾರಾಟ ಕುಸಿತಕ್ಕೆ ಕಾರಣವಾಗಿದೆ. ಜೊತೆಗೆ, ಬರದಿಂದಾಗಿ ಜನರ ಕೈಯಲ್ಲಿ ಅಷ್ಟಾಗಿ ದುಡ್ಡು ಹರಿದಾಡುತ್ತಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.