ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಹೆಸರು ಕೇಳಿಬಂದಿದ್ದು, ಅವರ ಮನೆ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ. ರಿಕ್ಕಿ ರೈ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆ ಎದುರಿಸಿದ್ದ ಕೆಲವರು ರಿಕ್ಕಿ ರೈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಸಿಬಿ ಪೊಲೀಸರ ತಂಡ, ಬಿಡದಿಯಲ್ಲಿರುವ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸುತ್ತಿದೆ.
‘ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ರಿಕ್ಕಿ ರೈ ಆಶ್ರಯ ಕೊಟ್ಟಿರುವ ಮಾಹಿತಿ ಇತ್ತು. ಹೀಗಾಗಿ, ನ್ಯಾಯಾಲಯದ ಶೋಧನಾ ವಾರಂಟ್ ಪಡೆದು ಮನೆ ಮೇಲೆ ದಾಳಿ ಮಾಡಲಾಗಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.
ಸದಾಶಿವನಗರದ ಮನೆಯಲ್ಲೂ ಶೋಧ
ಬೆಂಗಳೂರು: ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಉಳಿದುಕೊಳ್ಳುತ್ತಿದ್ದ ನಗರದ ಸದಾಶಿವನಗರದಲ್ಲಿರುವ ಮನೆಯಲ್ಲೂ ಸಿಸಿಬಿ ಶೋಧ ನಡೆಸುತ್ತಿದೆ.
ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಜೊತೆ ರಿಕ್ಕಿ ರೈ ಒಡನಾಟವಿಟ್ಟುಕೊಂಡಿದ್ದರು. ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ನೀಡಿದ್ದರೆಂಬ ಅನುಮಾನ ಸಿಸಿಬಿಗೆ ಇದೆ. ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆಯೂ ಇದೆ.
‘ಸದ್ಯ ದಾಳಿ ಮಾಡಲಾಗಿದೆ. ಪ್ರಕರಣದಲ್ಲಿ ರಿಕ್ಕಿ ರೈ ಪಾತ್ರದ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.
ಸಿಸಿಬಿ ಪೊಲೀಸರಿಂದ ಮುತ್ತಪ್ಪ ರೈ ನಿವಾಸದ ಮೇಲೆ ದಾಳಿ
ಡ್ರಗ್ ಪೆಡ್ಲರ್ ನೀಡಿದ ಮಾಹಿತಿ ಆಧರಿಸಿ ಈ ದಾಳಿ ಮಾಡಿದ್ದು, ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.