ರಾಮನಗರ: 'ಈಗಲ್‌ಟನ್ ರೆಸಾರ್ಟ್‌ನವರು ಸರ್ಕಾರಕ್ಕೆ ಸೇರಿದ 208 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದು, ದಂಡ ಮೊತ್ತ ₹980 ಕೋಟಿಯನ್ನೂ ಪಾವತಿಸಿಲ್ಲ. ಈ ಬಗ್ಗೆ ಪರಿಶೀಲಿಸಿ ಸರ್ಕಾರದ ಜಾಗ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು' ಎಂದು ರಾಜ್ಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.
ಜಮೀನು ಒತ್ತುವರಿ ಆರೋಪ ಎದುರಿಸುತ್ತಿರುವ ಬಿಡದಿಯ ಈ ರೆಸಾರ್ಟ್‌ಗೆ ಮಂಗಳವಾರ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿದ ಸಂದರ್ಭ ಅವರು ಪತ್ರಕರ್ತರ ಜತೆ ಮಾತನಾಡಿದರು. 'ರೆಸಾರ್ಟ್ ವ್ಯಾಪ್ತಿ ಒಟ್ಟು 508 ಎಕರೆ ಇದ್ದು, ಖಾಸಗಿ ಜಮೀನಿನ ಜೊತೆಗೆ ಸರ್ಕಾರಿ ಜಾಗವೂ ಒತ್ತುವರಿ ಆಗಿರುವುದು ಸ್ಪಷ್ಟವಾಗಿದೆ. ಇದರಲ್ಲಿ ರೆಸಾರ್ಟ್‌ನವರು ಸರ್ಕಾರಕ್ಕೆ 28 ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ. ಒತ್ತುವರಿಯಾದ 77 ಎಕರೆಗೆ ದಂಡ ಮೊತ್ತ ನಿಗದಿಗೆ ಸುಪ್ರಿಂ ಕೋರ್ಟ್ ಆದೇಶಿಸಿತ್ತು. ಪ್ರತಿಯಾಗಿ ₹980 ಕೋಟಿ ಪಾವತಿಸುವಂತೆ ಸರ್ಕಾರ ನಿಗದಿಪಡಿಸಿತ್ತು. ಆದರೆ, ದಂಡದ ಪ್ರಮಾಣ ಹೆಚ್ಚಾಗಿದೆ ಎಂದು ರೆಸಾರ್ಟ್‌ನವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 13 ತಿಂಗಳುಗಳಿಂದ ಅದರ ವಿಚಾರಣೆ ನಿಗದಿಯಾಗಿಲ್ಲ’ ಎಂದರು.
ಮತ್ತೊಂದೆಡೆ, ರೆಸಾರ್ಟ್‌ನವರು ದಂಡವನ್ನೂ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.