ADVERTISEMENT

ಚನ್ನಪಟ್ಟಣ: ಪಾಳು ಕಟ್ಟಡದಲ್ಲಿ ಆತಂಕದಲ್ಲೇ ತರಗತಿ

ಏಕ ವಿದ್ಯಾರ್ಥಿ–ಶಿಕ್ಷಕ ಇರುವ ಮೆಂಗಹಳ್ಳಿ ಶಾಲೆ: ಶಿಥಿಲ ಕಟ್ಟಡದಿಂದಾಗಿ ಕಾನ್ವೆಂಟ್‌ಗೆ ಹೋಗುವ ಮಕ್ಕಳು

ಓದೇಶ ಸಕಲೇಶಪುರ
Published 20 ಜೂನ್ 2024, 6:54 IST
Last Updated 20 ಜೂನ್ 2024, 6:54 IST
ಶಿಥಿಲಾವಸ್ಥೆ ತಲುಪಿರುವ ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಶಿಥಿಲಾವಸ್ಥೆ ತಲುಪಿರುವ ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ಚನ್ನಪಟ್ಟಣ: ಪಾಳು ಬಿದ್ದಂತಿರುವ ಕಟ್ಟಡದ ಅಡಿಯಿಂದ ಮುಡಿಯವರೆಗೆ ಅಲ್ಲಲ್ಲಿ ಬಿರುಕು ಬಿಟ್ಟಿರುವ ಗೋಡೆ. ಒಳಹೊಕ್ಕು ತಲೆ ಮೇಲಕ್ಕೆತ್ತಿ ನೋಡಿದರೆ, ಹೆಂಚುಗಳ ಮಧ್ಯೆ ಕಾಣುವ ಆಕಾಶ. ಕೊಠಡಿಯ ಕಿಟಕಿ, ಬಾಗಿಲು ಹಾಗೂ ಚಾವಣಿಯ ಅಲ್ಲಲ್ಲಿ ಕಟ್ಟಿರುವ ಬಲೆಗಳು. ಮಳೆ ನೀರು ಸೋರಿಕೆಯಿಂದ ಶಿಥಿಲಗೊಂಡು ಪಾಚಿಗಟ್ಟಿರುವ ಗೋಡೆಗಳು...

ಜಿಲ್ಲೆಯ ಗಡಿಭಾಗದಲ್ಲಿರುವ ಮೆಂಗಹಳ್ಳಿ ಗ್ರಾಮದ ಅರ್ಧ ಶತಮಾನದಷ್ಟು ಹಳೆಯದಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದು. ತಾಲ್ಲೂಕು ಕೇಂದ್ರದಿಂದ ಸುಮಾರು 18 ಕಿ.ಮೀ. ಇರುವ ಮೆಂಗಹಳ್ಳಿಯಲ್ಲಿ ಸುಮಾರು 70 ಮನೆಗಳಿವೆ. ಗ್ರಾಮದಿಂದ ಕೇವಲ 3 ಕಿ.ಮೀ. ದೂರದಲ್ಲಿ ಮಂಡ್ಯ ಗಡಿ ಶುರುವಾಗುತ್ತದೆ.

ಗಡಿ ಗ್ರಾಮದ ಈ ಶಾಲಾ ಕಟ್ಟಡ ಮಳೆ– ಗಾಳಿಗೆ ಆಗಲೋ, ಈಗಲೋ ಬೀಳುವಂತಿದೆ. ಸ್ಥಳೀಯ ಕೂಲಿ ಕಾರ್ಮಿಕರೊಬ್ಬರ ಮಗಳೊಬ್ಬಳೇ ಈ ಶಾಲೆಯ ಏಕೈಕ ವಿದ್ಯಾರ್ಥಿ. ಕಲಿಕಾ ಸೌಲಭ್ಯಗಳ ಕೊರತೆಯ ನಡುವೆಯೂ, ಕಟ್ಟಡದ ಅವಸ್ಥೆಗೆ ಮರುಗುತ್ತಲೇ ಜೀವ ಕೈಯಲ್ಲಿಡಿದುಕೊಂಡು ಇಲ್ಲಿನ ಶಿಕ್ಷಕ ವಿದ್ಯಾರ್ಥಿನಿಗೆ ಪಾಠ ಮಾಡುತ್ತಾರೆ.

ADVERTISEMENT

ಪೋಷಕರ ಹಿಂದೇಟು: ‘ಹತ್ತು ವರ್ಷಗಳಿಗೂ ಹಿಂದೆ ಶಾಲೆ ಚನ್ನಾಗಿತ್ತು. ಒಂದರಿಂದ ಐದನೇ ತರಗತಿವರೆಗೂ ಮಕ್ಕಳು ಇಲ್ಲಿ ಕಲಿಯುತ್ತಿದ್ದರು. ಕ್ರಮೇಣ ಶಾಲೆ ಶಿಥಿಲವಾಗತೊಡಗಿತು. ಮಳೆ–ಗಾಳಿಗೆ ಹೆಂಚುಗಳು ಬಿದ್ದು, ನೀರು ಸೋರತೊಡಗಿತು. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟವು. ಇದನ್ನು ಗಮನಿಸಿದ ಸ್ಥಳೀಯರು, ಸುರಕ್ಷತೆಯ ಖಾತರಿ ಇಲ್ಲದಿರುವ ಕಾರಣಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕತೊಡಗಿದರು’ ಎಂದು ಶಾಲೆಯ ಏಕೈಕ ಶಿಕ್ಷಕ ಶಿವಕುಮಾರ್ ‘ಪ್ರಜಾವಾಣಿ’ಗೆ ಶಾಲೆಯ ಸ್ಥಿತಿಯನ್ನು ಬಿಚ್ಚಿಟ್ಟರು.

‘ಕಟ್ಟಡದ ಕಾರಣಕ್ಕೆ ಎರಡಂಕಿಯಷ್ಟಿದ್ದ ವಿದ್ಯಾರ್ಥಿಗಳ ಮಕ್ಕಳ ಸಂಖ್ಯೆ ನಿಧಾನವಾಗಿ ಕುಸಿದು, ಐದು ವರ್ಷಗಳಿಂದ ಒಂದಂಕಿಗೆ ಬಂದು ತಲುಪಿದೆ. ಕಳೆದ ವರ್ಷ 4 ಮಕ್ಕಳಿದ್ದರು. ಆ ಪೈಕಿ, ಮೂವರು ವಿದ್ಯಾರ್ಥಿಗಳು ಬೇರೆ ಶಾಲೆಗೆ ಸೇರಿಕೊಂಡಿದ್ದು, ಸದ್ಯ 2ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮಾತ್ರ ನಿತ್ಯ ಶಾಲೆಗೆ ಬರುತ್ತಾಳೆ’ ಎಂದು ಹೇಳಿದರು.

ತುಕ್ಕು ಹಿಡಿದಿರುವ ಶಾಲಾ ಕಟ್ಟಡದ ಕಿಟಕಿ ಬಿರುಕು ಬಿಟ್ಟಿರುವ ಶಿಥಿಲ ಗೋಡೆ

ಮೇಲಧಿಕಾರಿಗಳ ಗಮನಕ್ಕೆ:  ‘ಮಕ್ಕಳನ್ನು ಗ್ರಾಮದ ಶಾಲೆಗೆ ಸೇರಿಸುವಂತೆ ಸ್ಥಳೀಯರಿಗೆ ಹೇಳಿದರೆ, ಮೊದಲು ಒಳ್ಳೆಯ ಕಟ್ಟಡ ಕಟ್ಟಿ. ಈ ಶಾಲೆಗೆ ಕಳಿಸಿದರೆ ನಮ್ಮ ಮಕ್ಕಳ ಜೀವಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸುತ್ತಾರೆ. ಶಾಲೆಯ ಸ್ಥಿತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಸಹ ಅನುದಾನ ಬಂದ ಬಳಿಕ ಹೊಸ ಕಟ್ಟಡಕ್ಕೆ ಅನುಮೋದನೆ ಸಿಗುತ್ತದೆ. ಅಲ್ಲಿಯವರೆ ಅಡ್ಜೆಸ್ಟ್ ಮಾಡಿಕೊಂಡು ಹೋಗಿ ಎನ್ನುತ್ತಾರೆ. ವಿಧಿ ಇಲ್ಲದೆ, ಇದೇ ಕಟ್ಟಡದಲ್ಲಿ ಪಾಠ ಮಾಡುತ್ತಿದ್ದೇನೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಶಾಲೆ ಉಳಿಯಬೇಕೇ ಬೇಡವೇ ಎಂಬುದರ ಕುರಿತು ಸ್ಥಳೀಯರಲ್ಲೇ ಪರ–ವಿರೋಧವಿದೆ. ಕೆಲವರು ಶಾಲೆ ಉಳಿಸುವ ಕುರಿತು ದನಿ ಎತ್ತಿದರೆ, ಇನ್ನುಳಿದವರು ಮಕ್ಕಳೂ ಇಲ್ಲದ ಕಟ್ಟಡವೂ ಸರಿ ಇಲ್ಲದ ಶಾಲೆ ಬೇಕೇ ಎನ್ನುತ್ತಾರೆ. ಕೆಲವರು ಶಾಲೆ ಜಾಗ ನಮಗೆ ಸೇರಬೇಕು. ಸರ್ಕಾರದವರು ಹೊಸ ಕಟ್ಟಡ ಕಟ್ಟುವುದಾದರೆ ಬೇರೆ ಕಡೆ ಕಟ್ಟಲಿ ಎನ್ನುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ಊರಿನ ಸ್ಥಿತಿಗೆ ಮರುಕ ತೋರಿದರು.

ಶಾಲೆಯ ದುಃಸ್ಥಿತಿ ಕುರಿತು ಪ್ರತಿಕ್ರಿಯೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಅವರ ಮೊಬೈಲ್ ಫೋನ್ ಸ್ವಿಚ್‌ ಆಫ್ ಆಗಿತ್ತು.

ಜಿಲ್ಲೆಯ ಗಡಿಗ್ರಾಮಗಳು ಎಲ್ಲಾ ರೀತಿಯ ಅಭಿವೃದ್ಧಿಯಿಂದ ವಂಚಿತವಾಗಿವೆ. ಅಧಿಕಾರಿಗಳು ಈ ಕಡೆ ಸುಳಿಯುವುದೇ ಇಲ್ಲ. ನಮ್ಮೂರ ಶಾಲೆಯ ದುಃಸ್ಥಿತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾರಣ
ಮಹೇಶ್, ಗ್ರಾಮಸ್ಥ ಮೆಂಗಹಳ್ಳಿ
ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಬಿರುಕು ಬಿಟ್ಟಿರುವುದು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಶಾಲೆ ಸ್ಥಿತಿ ಕಂಡು ಊರಿನವರೆಲ್ಲರು ತಮ್ಮ ಮಕ್ಕಳನ್ನು ಪಕ್ಕದೂರಿನ ಕಾನ್ವೆಂಟ್‌ಗೆ ಕಳಿಸುತ್ತಿದ್ದಾರೆ. ಸರ್ಕಾರಿ ಶಾಲೆ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಕಟ್ಟಡ ದುರಸ್ತಿ ಮಾಡಿದ್ದರೆ ಹೊಸ ಕಟ್ಟಡ ಕಟ್ಟಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ
ರಮೇಶ್, ಗ್ರಾಮಸ್ಥ ಮೆಂಗಹಳ್ಳಿ
ನಮ್ಮೂರ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಗೆ ಹಿಂದೆ ಹಲವು ಮನವಿ ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಕೆಂಪೇಗೌಡ, ಗ್ರಾಮಸ್ಥ ಮೆಂಗಹಳ್ಳಿ

ಮನೆಯಲ್ಲೇ ಬಿಸಿಯೂಟ ತಯಾರಿ

ಶಾಲೆ ಪಕ್ಕದಲ್ಲೇ ಇರುವ ಬಿಸಿಯೂಟ ತಯಾರಿಕಾ ಕೊಠಡಿಯೂ ಶಿಥಿಲವಾಗಿವೆ. ನೀರು ಸೋರಿ ಒಳಭಾಗದಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ಶಾಲೆಯ ಬಿಸಿಯೂಟ ಕಾರ್ಯಕರ್ತೆ ಅಲ್ಲಿ ಅಡುಗೆ ಮಾಡಲು ಭಯಪಡುತ್ತಾರೆ. ಬದಲಿಗೆ ನಿತ್ಯ ತಮ್ಮ ಮನೆಯಿಂದಲೇ ಮೇಷ್ಟ್ರು ಮತ್ತು ವಿದ್ಯಾರ್ಥಿನಿಗೆ ಅಡುಗೆ ಮಾಡಿಕೊಂಡು ಬಂದು ಬಡಿಸುತ್ತಾರೆ.

‘ಕೊಠಡಿ ಯಾವಾಗ ಕುಸಿದು ಬೀಳುತ್ತದೊ ಎಂಬ ಆತಂಕವಿದೆ. ಹಾಗಾಗಿ ಅಲ್ಲಿ ಅಡುಗೆ ಮಾಡುವುದಿಲ್ಲ ಅಡುಗೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಕೊಠಡಿಯಲ್ಲಿ ಇಡುತ್ತೇನೆ. ನಿತ್ಯ ಮನೆಯಿಂದಲೇ ಅಡುಗೆ ಮಾಡಿಕೊಂಡು ಬರುತ್ತೇನೆ’ ಎಂದು ಬಿಸಿಯೂಟ ಕಾರ್ಯಕರ್ತೆ ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು. ಖಾಸಗಿ ಶಾಲೆಯತ್ತ ಪೋಷಕರ ಚಿತ್ತ ‘ಶಾಲಾ ಕಟ್ಟಡ ಶಿಥಿಲವಾಗಿರುವ ಕಾರಣಕ್ಕೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳಿಸುತ್ತಿದ್ದಾರೆ.

ಶೇ 70ರಷ್ಟು ವಿದ್ಯಾರ್ಥಿಗಳು ಗ್ರಾಮದಿಂದ 5 ಕಿ.ಮೀ. ದೂರದಲ್ಲಿರುವ ಮದ್ದೂರು ತಾಲ್ಲೂಕಿನ ಕೆ. ಹೊನ್ನಲಗೆರೆ ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಉಳಿದವರು ಪಕ್ಕದ ಸುಳ್ಳೇರಿ ಮತ್ತು ಕೃಷ್ಣಾಪುರದ ಸರ್ಕಾರಿ ಶಾಲೆಗಳಿಗೆ ಹೋಗುತ್ತಾರೆ. ಹಿಂದೊಮ್ಮೆ ಅಕ್ಕಪಕ್ಕದ ಗ್ರಾಮಗಳ ಊರಿನ ಮಕ್ಕಳು ನಮ್ಮೂರಿನ ಶಾಲೆಗೆ ಬರುತ್ತಿದ್ದರು. ಇಲ್ಲಿ ಓದಿದವರು ಹೈಕೋರ್ಟ್ ವಕೀಲರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಅಂತಹವರನ್ನು ಕೊಟ್ಟ ಶಾಲೆ ಈಗ ಅಳಿವಿನಂಚಿನಲ್ಲಿದೆ’ ಎಂದು ಗ್ರಾಮಸ್ಥ ಮಹೇಶ್ ಬೇಸರ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.