ADVERTISEMENT

ಹಾರೋಹಳ್ಳಿ: ಎಗ್ ರೈಸ್ ರುಚಿಗೆ ಫಿದಾ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:21 IST
Last Updated 6 ಅಕ್ಟೋಬರ್ 2024, 4:21 IST
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟೌವ್ ಕ್ರಾಫ್ಟ್ ಕಾರ್ಖಾನೆಯ ಬಳಿ ಇರುವ ಎಸ್ ಬಿ ದಿನೇಶ್ ಹೋಟೆಲ್
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟೌವ್ ಕ್ರಾಫ್ಟ್ ಕಾರ್ಖಾನೆಯ ಬಳಿ ಇರುವ ಎಸ್ ಬಿ ದಿನೇಶ್ ಹೋಟೆಲ್   

ಹಾರೋಹಳ್ಳಿ: ರುಚಿಕಟ್ಟಾದ, ಅಚ್ಚುಕಟ್ಟಾದ ಎಗ್‌ ರೈಸ್‌ಗೆ ಫೇಮಸ್‌ ತಿಂಡಿ ತಾಣ ಎಸ್.ಬಿ. ದಿನೇಶ್ ಹೋಟೆಲ್.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟೌವ್ ಕ್ರಾಫ್ಟ್ ಕಾರ್ಖಾನೆಯ ಬಳಿ ಇರುವ ಈ ಚಿಕ್ಕ ಹೋಟೆಲ್‌ ನೂರಾರು ಜನರನ್ನು ಸೆಳೆಯುತ್ತಿದೆ. ಪಟ್ಟಣ ಸೇರಿದಂತೆ ಕೈಗಾರಿಕಾ ಪ್ರದೇಶಲ್ಲಿ ಕೆಲಸಕ್ಕೆ ದೂರದ ಊರುಗಳಿಂದ ಅನೇಕ ಜನ ಬರುತ್ತಾರೆ. ದುಡಿಯಲು ಬರುವ ಜನರಲ್ಲಿ ಕೆಲವರು ಮನೆಯಿಂದ ಊಟ ತಂದರೆ, ಅನೇಕರಿಗೆ ದಿನೇಶ್‌ ಹೋಟೆಲ್‌ನ ಎಗ್‌ ರೈಸ್‌ ಪ್ರಿಯ. ಜೊತೆಗೆ ಕಬಾಬ್, ಚಿಕನ್ ಮತ್ತು ಮಟನ್ ಫ್ರೈ, ಮಟನ್ ಸಾಂಬಾರ್, ಕೈಮಾ, ಲಿವರ್ ಫ್ರೈ, ಬ್ಲಡ್ ಫ್ರೈ ಮತ್ತು ತಲೆ ಮಾಂಸ ಸೇರಿದಂತೆ ಹಲವು ಖಾದ್ಯಗಳು ನಾಲಿಗೆಯಲ್ಲಿ ನೀರು ತರಿಸುತ್ತವೆ.

ಕಾರ್ಖಾನೆಗಳಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರು ಮತ್ತು ಗ್ರಾಹಕರಿಂದ ಹೋಟಲ್ ಸದಾ ತುಂಬಿರುತ್ತದೆ. ಮದ್ಯಾಹ್ನ, ಸಂಜೆ ಸಮಯದಲ್ಲಿ ಹೋಟೆಲ್ ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಎಗ್ ರೈಸ್, ಕಬಾಬ್ ಸವಿಯುವವರ ಸಂಖ್ಯೆಯೇ ಹೆಚ್ಚಾದರೂ ಬೇರೆ ತಿಂಡಿಗಳೂ ಹೋಗುತ್ತವೆ.

ADVERTISEMENT

ಮೊದಲು ಅಡುಗೆ ಕೆಲಸ ಮಾಡುತ್ತಿದ್ದೆ. ಆದರೆ, ಬರುವ ಹನ ಉಪಜೀವನಕ್ಕೆ ಸಾಕಾಗುತ್ತಿರಲಿಲ್ಲ. ಬೇರೆ ಏನಾದರೂ ಮಾಡಬೇಕು ಎನ್ನುವ ಆಲೋಚನೆ ಇತ್ತು. ನನಗೆ ಅಡುಗೆ ಕೆಲಸವೇ ಪ್ರಿಯವಾದ್ದರಿಂದ ಹೋಟೆಲ್‌ ಇಡೋಣ ಎಂದು ನಿರ್ಧರಿಸಿದೆ. ಕಳೆದ 6 ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದೇನೆ. ಬೆಳಗ್ಗೆ 10.30ಕ್ಕೆ ಆರಂಭವಾದರೆ ರಾತ್ರಿ 11ರತನಕ ತೆರೆದಿರುತ್ತದೆ. ಪತ್ನಿ ಸವಿತಾ ಹಾಗೂ ನಾನು ನಿರಂತರ ಕೆಲಸದಲ್ಲಿರುತ್ತೇವೆ. ಹೋಟೆಲ್‌ ಬದುಕಿಗೂ–ಭವಿಷ್ಯಕ್ಕೂ ಭದ್ರತೆ ಒದಗಿಸಿದೆ ಎಂದು ಹೋಟೆಲ್ ಮಾಲೀಕ ದಿನೇಶ್ ಹೇಳಿದರು.

ಗ್ರಾಹಕರ ಅನುಕೂಲಕ್ಕೆ ವಿಶಾಲವಾದ ಜಾಗದ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ ನಿರ್ವಹಣೆಗೂ ಆದ್ಯತೆ ನೀಡಲಾಗಿದೆ. ಗ್ರಾಹಕರು ನೀಡುವ ಹಣಕ್ಕೆ ಮೋಸವಾಗದ್ದಂತೆ ಸೇವೆ ನೀಡುವುದೇ ನಮ್ಮ ಗುರಿ ಎನ್ನುವುದು ಅವರ ಮಾತು.

ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಕೋಳಿ ಮಾಂಸವನ್ನು ನಾವೇ ತಂದು ಸ್ವಚ್ಛಗೊಳಿಸಿ ಸಿದ್ಧಪಡಿಸುತ್ತೇವೆ. ಯಾವುದೇ ಕಂಪನಿ ಮತ್ತು ರಾಸಾಯನಿಕಯುಕ್ತ ಮಸಾಲೆ ಬಳಸದೇ, ನಾವೇ ಸ್ವತಃ ಮಸಾಲೆಯನ್ನು ತಯಾರಿಸಿ ಬಳಸುತ್ತೇವೆ. ಇದರಿಂದ ಅಡುಗೆಯ ಸ್ವಾದ ಹೆಚ್ಚುತ್ತದೆ. ಗ್ರಾಹಕರೂ ಸಂತೃಪ್ತಿಯಿಂದ ತಿಂದು ಹೋಗುತ್ತಾರೆ. ದಿನದಿಂದ ದಿನಕ್ಕೆ ಹೋಟೆಲ್‌ಗೆ ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಸವಿತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.