ADVERTISEMENT

ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ; ಕೈಗೊಂಬೆಯಾಗಿರುವ ಅಧಿಕಾರಿಗಳು– ನಿಖಿಲ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 6:55 IST
Last Updated 20 ಮಾರ್ಚ್ 2024, 6:55 IST
   

ರಾಮನಗರ: ‘ನೀತಿ ಸಂಹಿತೆ ಜಾರಿಯಲ್ಲಿ ದ್ದರೂ ಕಾಂಗ್ರೆಸ್‌ನಿಂದ ರಾಜಾರೋಷ ವಾಗಿ ಮತದಾರರಿಗೆ ಉಡುಗೊರೆ ಹಾಗೂ ಇನ್ನಿತರ ವಸ್ತುಗಳನ್ನು ಹಂಚಲಾಗುತ್ತಿದೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆ ಗಳಾಗಿದ್ದು, ರಾಜ್ಯದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ. ಚುನಾವಣಾ ಆಯೋಗದ ಕಾರ್ಯವೈಖರಿಯು ಹಲವು ಪ್ರಶ್ನೆ ಮೂಡಿಸಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ರಾಮನಗರದ ವಿ.ಆರ್.ಎಲ್. ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ₹14 ಲಕ್ಷ ಮೌಲ್ಯದ 3,700 ಸೀರೆ ಹಾಗೂ ಡ್ರೆಸ್ ಮೆಟೀರಿಯಲ್‌ಗಳನ್ನು ಜೆಡಿಎಸ್–ಬಿಜೆಪಿ ಕಾರ್ಯಕರ್ತರು ಹಿಡಿದು ಕೊಟ್ಟಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ’ ಎಂದು ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸೂರತ್‌ನಿಂದ ಬಂದಿರುವ ಸೀರೆಗಳನ್ನು ರಾಮನಗರ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಮಾಲೀಕತ್ವದ ಎನ್.ಎಂ. ಗ್ರಾನೈಟ್ಸ್ ಸಂಸ್ಥೆ ತರಿಸಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ದಿನಗಳಿಂದಲೂ ಕಾಂಗ್ರೆಸ್‌ನವರು ಕುಕ್ಕರ್ ಹಂಚಿಕೆಯಲ್ಲಿ ತೊಡಗಿದ್ದಾರೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಿ, ಪಾರದರ್ಶಕ ಚುನಾವಣೆಗೆ ಒತ್ತಾಯಿಸುತ್ತೇವೆ’ ಎಂದರು.

ADVERTISEMENT

ಅಧಿಕಾರ ದುರುಪಯೋಗ: ‘ಗ್ರಾಮಾಂತರ ಕ್ಷೇತ್ರದಲ್ಲಿ ಅಧಿಕಾರ ದುರುಪಯೋಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮನೆಗೆ ಕಾಂಗ್ರೆಸ್‌ನವರು ರಾತ್ರಿ ಹೋಗಿ ಹಣದ ಆಮಿಷವೊಡ್ಡಿ ಖರೀದಿಸುತ್ತಿದ್ದಾರೆ. ಹೋಗಲು ನಿರಾಕರಿಸಿದವರಿಗೆ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕುಮಾರಸ್ವಾಮಿ ಅವರು ಕ್ಷೇತ್ರವನ್ನು ನಾಲ್ಕು ಸಲ ಪ್ರತಿನಿಧಿಸಿ ಮುಖ್ಯಮಂತ್ರಿಯಾಗಿದ್ದರೂ, ಚುನಾವಣೆ ಸಂದರ್ಭದಲ್ಲಿ ಈ ರೀತಿ ಎಂದಿಗೂ ಅಧಿಕಾರ ದುರುಪಯೋಗ ಮಾಡಿಕೊಂಡಿರಲಿಲ್ಲ. ದೇವೇಗೌಡರ ಕುಟುಂಬದ ಕುಡಿಯಾದ ನಾನೆಂದೂ ಅಂತಹ ರಾಜಕೀಯ ಮಾಡಿಲ್ಲ. ಹಾಗೇನಾದರೂ ಮಾಡಿದ್ದರೆ ಕ್ಷೇತ್ರಕ್ಕೆ ಕಾಲಿಡುತ್ತಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ರಾತ್ರೋರಾತ್ರಿ ಗಿಫ್ಟ್‌ ಕಾರ್ಡ್ ಹಂಚಿದ್ದರಿಂದ ನಾನು ಸೋತೆ. ಮುಗ್ಧ ಜನರನ್ನು ಯಾಮಾರಿಸಿ ಮತ ಪಡೆದು, ಯುವಕನಾದ ನನ್ನನ್ನು ಬಲಿಪಶು ಮಾಡಿದರು. ಇದೀಗ ಮತ್ತೆ ಮತದಾರರಿಗೆ ಗಿಫ್ಟ್ ಹಂಚಲಾಗುತ್ತಿದೆ. ನನ್ನಂತೆ ಡಾ.ಸಿ.ಎನ್. ಮಂಜುನಾಥ್ ಅವರಿಗೆ ಆಗಬಾರದು. ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ಇಂತಹದ್ದಕ್ಕೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ಕೆಲಸ ಮಾಡಬೇಕು’ ಎಂದರು.

‘ಸೀಟು ಹಂಚಿಕೆ ವಿಳಂಬದಿಂದ ಜೆಡಿಎಸ್ ಕಾರ್ಯಕರ್ತರು ಭ್ರಮನಿರಸನಗೊಂಡಿಲ್ಲ. ಮಂಡ್ಯ, ಹಾಸನ ಜೊತೆಗೆ ಕೋಲಾರವೂ ಜೆಡಿಎಸ್‌ಗೆ ಸಿಗಲಿದೆ. ಹಿಂದೆ ಸ್ವತಂತ್ರವಾಗಿ ಗೆದ್ದಿರುವ ಸಂಸದೆ ಸುಮಲತಾ ಅಂಬರೀಷ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಹೇಳಿದರು.

‘ಮಂಜುನಾಥ್ ಕುಗ್ಗಿಸುವ ಯತ್ನ’

‘ಡಾ. ಮಂಜುನಾಥ್ ಅವರ ವಿರುದ್ಧ ಕಾಂಗ್ರೆಸ್ ಶಾಸಕರು ಲಘುವಾಗಿ ಮಾತನಾಡುವ ಮೂಲಕ, ಅವರನ್ನು ಮಾನಸಿಕವಾಗಿ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಮಾಗಡಿ ಶಾಸಕರು ‘ತೆವಲು’ ಎನ್ನುವ ಪದ ಬಳಸಿದ್ದಾರೆ. ಅವರಿಗೆ ಅದರರ್ಥ ಗೊತ್ತಿಲ್ಲವೆನಿಸುತ್ತದೆ. ರಾಮನಗರ ಶಾಸಕರು, ‘ಮಂಜುನಾಥ್ ಅವರು ಯಾಕೆ ರಾಜಕೀಯಕ್ಕೆ ಬರಬೇಕು? ಅವರಿಗೆ ರಾಜಕೀಯದ ಗಂಧ–ಗಾಳಿ ಗೊತ್ತಿಲ್ಲ’ ಎಂದಿದ್ದಾರೆ. ಅವರಿಬ್ಬರ ರಾಜಕೀಯ ಯಾವ ತರಹದ್ದು ಎಂಬುದು ಗೊತ್ತಿದೆ. ಅಲ್ಲದೆ, ಇದೆಲ್ಲಾ ಹೆಚ್ಚು ದಿನ ನಡೆಯುವುದಿಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.