ADVERTISEMENT

ಕನಕಪುರ | ಲಾರಿಗೆ ಸಿಲುಕಿ ತುಂಡಾದ ವಿದ್ಯುತ್ ತಂತಿ: ತಪ್ಪಿದ ಭಾರಿ ಅನಾಹುತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 6:12 IST
Last Updated 20 ನವೆಂಬರ್ 2024, 6:12 IST
ಕನಕಪುರ ಶಿವನಹಳ್ಳಿ ಹೆದ್ದಾರಿಯಲ್ಲಿ ಟ್ಯಾಂಕರ್ ಲಾರಿಗೆ ವಿದ್ಯುತ್ ತಂತಿ ಸಿಲುಕಿ ತುಂಡಾಗಿದ್ದರಿಂದ ಸಮೀಪದ ವಿದ್ಯುತ್ ಕಂಬ ಮುರಿದಿರುವುದು
ಕನಕಪುರ ಶಿವನಹಳ್ಳಿ ಹೆದ್ದಾರಿಯಲ್ಲಿ ಟ್ಯಾಂಕರ್ ಲಾರಿಗೆ ವಿದ್ಯುತ್ ತಂತಿ ಸಿಲುಕಿ ತುಂಡಾಗಿದ್ದರಿಂದ ಸಮೀಪದ ವಿದ್ಯುತ್ ಕಂಬ ಮುರಿದಿರುವುದು   

ಕನಕಪುರ: ಟ್ಯಾಂಕರ್ ಲಾರಿಯ ಮೇಲ್ಭಾಗ ವಿದ್ಯುತ್ ತಂತಿಗೆ ತಗುಲಿ ತುಂಡಾಗಿದ್ದರಿಂದ ಕಂಬವೊಂದು ಮುರಿದು ಬಿದ್ದಿದ್ದು, ಉಳಿದ ಮೂರು ಕಂಬಗಳು ಬಾಗಿರುವ ಘಟನೆ ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಘಟನೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಭಾರಿ ಅನಾಹುತವೊಂದ ತಪ್ಪಿದೆ.

ಗ್ರಾಮಕ್ಕೆ ಹೊಂದಿಕೊಂಡಂತಿರುವ ಹೆದ್ದಾರಿ–209ರಲ್ಲಿ ಹಲಗೂರು ಕಡೆಗೆ ತೆರಳುತ್ತಿದ್ದ ಭಾರಿ ಗಾತ್ರದ ಟ್ಯಾಂಕರ್ ಹೊತ್ತ ಲಾರಿಯು ರಸ್ತೆಯಲ್ಲಿ ಅಡ್ಡವಾಗಿ ಹಾಕಿದ್ದ ವಿದ್ಯುತ್ ಕಂಬಗಳ ತಂತಿಗಳಿಗೆ ತಾಗಿ ತುಂಡಾಗಿದೆ. ಅದನ್ನು ಗಮನಿಸದ ಲಾರಿ ಚಾಲಕ ಮುಂದೆ ಹೋಗಿದ್ದಾನೆ. 

ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ವಾಹನಗಳ ಸಂಚಾರವನ್ನು ಕೆಲ ಹೊತ್ತು ತಡೆದು, ಬೆಸ್ಕಾಂನವರಿಗೆ ಮಾಹಿತಿ ನೀಡಿದರು. ಘಟನೆಯಿಂದಾಗಿ ರಸ್ತೆಯಲ್ಲಿ ಸುಮಾರು 15 ನಿಮಿಷ ವಾಹನಗಳ ಸಂಚಾರ ಬಂದ್ ಆಯಿತು.

ADVERTISEMENT

ಆದರೂ, ವಿದ್ಯುತ್ ತಂತಿ ಗಮನಿಸದ ಬೈಕ್ ಸವಾರನೊಬ್ಬ ಬಂದು ಅಪಘಾತಕ್ಕೀಡಾಗಿ ಗಾಯಗೊಂಡ. ಕೂಡಲೇ ಸ್ಥಳೀಯರು ಆತನನ್ನು ಆರೈಕೆ ಮಾಡಿ, ಆಸ್ಪತ್ರೆಗೆ ಕಳಿಸಿದರು. ನಂತರ ಸ್ಥಳಕ್ಕೆ ಬಂದ ಬೆಸ್ಕಾಂ ಸಿಬ್ಬಂದಿ, ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ತಪ್ಪಿದ ಅನಾಹುತ: ‘ಕೆಎಂಎಫ್‌ಗೆ ಸಂಬಂಧಿಸಿದ ಟ್ಯಾಂಕರ್ ಅನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ವಿದ್ಯುತ್ ತಂತಿ ತುಂಡಾದ ರಭಸಕ್ಕೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಒಂದು ವೇಳೆ ಸ್ಥಗಿತವಾಗದೆ ಇದ್ದಿದ್ದರೆ ಲಾರಿ ಸುಟ್ಟು ಭಸ್ಮವಾಗುತ್ತಿತ್ತು. ಅಲ್ಲದೆ, ಅದೇ ಮಾರ್ಗದಲ್ಲಿ ವಿದ್ಯುತ್ ತಂತಿ ಗಮನಿಸದೆ ಬರುತ್ತಿದ್ದ ಇತರ ವಾಹನಗಳು ಸಹ ಅಪಾಯಕ್ಕೆ ಸಿಲುಕಿ ಸಾವು–ನೋವು ಸಂಭವಿಸುತ್ತಿತ್ತು’ ಎಂದು ಬೆಸ್ಕಾಂ ಸಿಬ್ಬಂದಿಯೊಬ್ಬರು ಹೇಳಿದರು.

‘ಘಟನೆ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಸದ್ಯ ಲಾರಿಯನ್ನು ಪತ್ತೆ ಹಚ್ಚಲಾಗಿದೆ. ಘಟನೆ ಕುರಿತು ಪೊಲೀಸ್ ದೂರು ಕೊಡುವ ಕುರಿತು, ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಟ್ಯಾಂಕರ್ ಲಾರಿಗೆ ವಿದ್ಯುತ್ ತಂತಿ ಸಿಲುಕಿದ್ದರಿಂದ ವಿದ್ಯುತ್ ಕಂಬವೊಂದು ವಾಲಿರುವುದು
ತುಂಡಾದ ವಿದ್ಯುತ್ ತಂತಿಗಳು
ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಗಮನಿಸದೆ ಬಂದು ಬಿದ್ದ ಬೈಕ್ ಸವಾರನನ್ನು ಇತರ ಸವಾರರು ಆರೈಕೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.