ADVERTISEMENT

ವಿದ್ಯುತ್ ಪ್ರವಹಿಸಿ ಮೃತಪಟ್ಟ ಕಾಡಾನೆಯನ್ನು ಜಮೀನಿನಲ್ಲೇ ಹೂತರು!

ಜಮೀನಿನ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 6:50 IST
Last Updated 7 ಡಿಸೆಂಬರ್ 2023, 6:50 IST
ಕನಕಪುರ ತಾಲ್ಲೂಕಿನ ಸಂತೆಕೋಡಿಹಳ್ಳಿಯ ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದ  ಕಾಡಾನೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು
ಕನಕಪುರ ತಾಲ್ಲೂಕಿನ ಸಂತೆಕೋಡಿಹಳ್ಳಿಯ ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದ  ಕಾಡಾನೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು   

ಕನಕಪುರ (ರಾಮನಗರ): ಜಮೀನಿಗೆ ಹಾಕಿದ್ದ ಬೇಲಿಯ ವಿದ್ಯುತ್ ಪ್ರವಹಿಸಿ ಮೃತಪಟ್ಟ 15 ವರ್ಷದ ಕಾಡಾನೆಯನ್ನು ಜಮೀನಿನಲ್ಲೇ ಗುಂಡಿ ತೋಡಿ ಹೂತು ಹಾಕಿರುವ ಘಟನೆ ತಾಲ್ಲೂಕಿನ ಸಂತೆಕೋಡಿಹಳ್ಳಿಯಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ (ಡಿ.3) ನಡೆದಿರುವ ಘಟನೆ ಬುಧವಾರ ವರದಿಯಾಗಿದೆ. ಅರಣ್ಯ ಇಲಾಖೆಯು ಮೂವರ ವಿರುದ್ಧ ಪ್ರಕರಣ ದಾಖಲಿಸಿದೆ.

ಜಮೀನಿನ ಮಾಲೀಕ ಸಂತೆಕೋಡಿಹಳ್ಳಿ ನಂಜೇಗೌಡ, ಬೋಗ್ಯಕ್ಕೆ ಪಡೆದು ವ್ಯವಸಾಯ ಮಾಡುತ್ತಿದ್ದ ಪಿಳ್ಳೇಗೌಡ ಹಾಗೂ ಗುಂಡಿ ತೊಡಲು ನೆರವಾಗಿದ್ದ ಜೆಸಿಬಿ ಚಾಲಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಅಕ್ರಮ ಸಂಪರ್ಕ: ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ತಡೆಗಾಗಿ ಜಮೀನಿನಲ್ಲಿ ನಿರ್ಮಿಸಿದ್ದ ಬೇಲಿಗೆ ಸಮೀಪದ ಟ್ರಾನ್ಸ್‌ಫಾರ್ಮರ್‌ನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ರಾಗಿ ಸೇರಿದಂತೆ ಇತರ ಬೆಳೆಗಳಿದ್ದ ಜಾಗಕ್ಕೆ ನಾಲ್ಕು ದಿನಗಳ ಹಿಂದೆ ಬಂದಿದ್ದ ಗಂಡಾನೆಗೆ ವಿದ್ಯುತ್ ಪ್ರವಹಿಸಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದೆ. ವಿಷಯ ಹೊರಗೆ ಗೊತ್ತಾದರೆ ತಮಗೆ ಸಮಸ್ಯೆಯಾಗುತ್ತದೆ ಎಂದು ಆರೋಪಿಗಳು, ಸ್ಥಳಕ್ಕೆ ಜೆಸಿಬಿ ಕರೆಸಿ ಗುಂಡಿ ತೋಡಿ ಆನೆಯನ್ನು ಹೂತು ಹಾಕಿದ್ದಾರೆ.

ADVERTISEMENT

‘ಆರೋಪಿಗಳ ಕೃತ್ಯ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿಯಿಂದ ಗುಂಡಿ ತೆಗೆಸಿದಾಗ ಕಾಡಾನೆ ಕಳೇಬರ ಪತ್ತೆಯಾಯಿತು. ಕಳೇಬರದ ಪರೀಕ್ಷೆ ನಡೆಸಿದಾಗ ವಿದ್ಯುತ್ ಪ್ರವಹಿಸಿಯೇ ಮೃತಪಟ್ಟಿರುವುದು ದೃಢಪಟ್ಟಿತು. ದಂತಗಳನ್ನು ಬೇರ್ಪಡಿಸಿ ಅದೇ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು’ ಎಂದು ಡಿಸಿಎಫ್ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕನಕಪುರ ಉಪವಿಭಾಗದ ಎಸಿಎಫ್‌ ವಿ.ಗಣೇಶ್, ಆರ್‌ಎಫ್‌ಒ ಎ.ಎಲ್.ದಾಳೇಶ್ ಹಾಗೂ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.