ರಾಮನಗರ: ‘ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆಯಲಾಗಿದ್ದು, ಅದನ್ನು ಸರಿಪಡಿಸದೆ ಹಾಗೆಯೇ ಬಿಟ್ಟಿರುವುದರಿಂದ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ. ರಸ್ತೆ ಅಗೆದು ತಿಂಗಳುಗಳೇ ಕಳೆದರೂ ರಸ್ತೆಯನ್ನು ಏಕೆ ಸರಿಪಡಿಸಿಲ್ಲ’ ಎಂದು ನಗರಸಭಾ ಸದಸ್ಯರು ಜಲಮಂಡಳಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ನಗರಸಭೆಯ ಪ್ರಶಸ್ತಿ ಭವನದಲ್ಲಿ ಬುಧವಾರ ನಡೆದ ನಗರಸಭಾ ಸದಸ್ಯರು ಹಾಗೂ ಜಲಮಂಡಳಿ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಜಲಮಂಡಳಿ ವಿರುದ್ಧ ಕಿಡಿಕಾರಿದರು.
ಕುಡಿಯುವ ನೀರಿನ ವ್ಯವಸ್ಥೆಗಾಗಿ ರಸ್ತೆ ಅಗೆದಿದ್ದಾರೆ. ಪೈಪ್ ಅಳವಡಿಕೆ ಬೆನ್ನಲ್ಲೆ ರಸ್ತೆ ಸರಿಪಡಿಸಬೇಕಿತ್ತು. ಆದರೆ ತಿಂಗಳುಗಳೇ ಕಳೆದರು ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಎಲ್ಲ ರಸ್ತೆಗಳು ಗುಂಡಿಮಯವಾಗಿದೆ. ದೂಳು ನಾಗರಿಕರ ಆರೋಗ್ಯ ಕೆಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಕೆ.ಶೇಷಾದ್ರಿ, ಬಿ.ಸಿ.ಪಾರ್ವತಮ್ಮ, ಮಂಜುನಾಥ್, ರಮೇಶ್ ಮಾತನಾಡಿ, ದೂಳಿನಿಂದಾಗಿ ಕೆಮ್ಮ, ನೆಗಡಿ ಪ್ರಕರಣ ನಿತ್ಯ ಏರಿಕೆಯಾಗುತ್ತಿದೆ ಎಂದು ಹೇಳಿದರು.
ನಗರಸಭೆ ಎಇಇ ನರಸಿಂಹರಾಜು ಪ್ರತಿಕ್ರಿಯಿಸಿ, ದೂಳು ಏಳದಂತೆ ಟ್ಯಾಂಕರ್ ಮೂಲಕ ರಸ್ತೆಗಳಿಗೆ ನೀರು ಸಿಂಪಡಿಸಲಾಗುತ್ತಿದೆ ಎಂದರು.
ನೀರು ಸರಬರಾಜು ಮಂಡಳಿ ಎಇಇ ಕುಸುಮಾ ಮಾತನಾಡಿ, ಕುಡಿಯುವ ನೀರು ಯೋಜನೆಯು 30 ತಿಂಗಳ ಅವಧಿಯದ್ದಾಗಿದೆ. 2023ರ ಜುಲೈನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೆಲವು ಕಾರಣಗಳಿಗೆ ವಿಸ್ತರಣೆಯಾಗಿದೆ. ಪೈಪ್‌ಲೈನ್ ಅಳವಡಿಕೆ ಮಾಡಿರುವ ಸ್ಥಳದಲ್ಲಿ ಮಾತ್ರ ರಸ್ತೆ ನಿರ್ಮಿಸಲು ಜಲಮಂಡಳಿಗೆ ಅವಕಾಶವಿದೆ. ರಸ್ತೆ ಅಭಿವೃದ್ಧಿಗೆ ಮೀಸಲಿರುವ ಹಣವನ್ನು ನಗರಸಭೆಗೆ ಹಣ ವರ್ಗಾವಣೆ ಮಾಡಿ ರಸ್ತೆ ಅಭಿವೃದ್ಧಿ ಮಾಡಲು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸೂಚನೆ ಪಾಲಿಸಬೇಕಾದರೆ ರಸ್ತೆ ಅಭಿವೃದ್ಧಿಗೆ ನಗರಸಭೆಯಿಂದ ಟೆಂಡರ್ ಕರೆಯಬೇಕು. ಇದು ಇನ್ನಷ್ಟು ವಿಳಂಬವಾಗುತ್ತದೆ. ಹೀಗಾಗಿ ಗುತ್ತಿಗೆದಾರರ ಮೂಲಕವೇ ಗುಂಡಿ ಮುಚ್ಚಿಸಿ ಎಂದು ಸಲಹೆ ನೀಡಿದರು.
ಚರ್ಚೆಯ ನಂತರ ಜಲಮಂಡಳಿ ಎಇಇ ಕುಸುಮಾ ಗುರುವಾರದಿಂದಲೇ (ಡಿ.21) ರಸ್ತೆ ಸರಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಲು ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳು ನಿಗಾವಹಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಪೌರಾಯುಕ್ತ ನಾಗೇಶ್, ಉಪಾಧ್ಯಕ್ಷ ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಮ್ಜದ್, ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.