ADVERTISEMENT

ತಲೆ ಎತ್ತಲಿವೆ 24 ಪಾದಚಾರಿ ಮೇಲ್ಸೇತುವೆ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ನಿರ್ಮಾಣಕ್ಕೆ ಮುಂದಾದ ಎನ್‌ಎಚ್‌ಎಐ

ಓದೇಶ ಸಕಲೇಶಪುರ
Published 29 ಅಕ್ಟೋಬರ್ 2024, 19:56 IST
Last Updated 29 ಅಕ್ಟೋಬರ್ 2024, 19:56 IST
ರಾಮನಗರ ತಾಲ್ಲೂಕಿನ ಕಣಮಿಣಕಿ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ನಿರ್ಮಿಸಿರುವ ಬೇಲಿಯನ್ನು ಹಾದು ರಸ್ತೆ ದಾಟುವ ಸ್ಥಳೀಯರು
ರಾಮನಗರ ತಾಲ್ಲೂಕಿನ ಕಣಮಿಣಕಿ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ನಿರ್ಮಿಸಿರುವ ಬೇಲಿಯನ್ನು ಹಾದು ರಸ್ತೆ ದಾಟುವ ಸ್ಥಳೀಯರು   

ರಾಮನಗರ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳು ರಸ್ತೆ ದಾಟುವುದಕ್ಕೆ ಪೂರಕವಾಗಿ, ಮಾರ್ಗದುದ್ದಕ್ಕೂ 24 ಪಾದಚಾರಿ ಮೇಲ್ಸೇತುವೆ (ಎಫ್‌ಒಬಿ) ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಡೆಗೂ ಚಾಲನೆ ನೀಡಿದೆ. 

ರಾಜಧಾನಿ ಮತ್ತು ಸಾಂಸ್ಕೃತಿಕ ನಗರಿ ನಡುವೆ ತ್ವರಿತ ಸಂಪರ್ಕ ಕಲ್ಪಿಸುವ 118 ಕಿ.ಮೀ. ಉದ್ದದ ಈ ಹೆದ್ದಾರಿಯನ್ನು (ಬಿಎಂಎಸಿಎಚ್‌: ಬೆಂಗಳೂರು–ಮೈಸೂರು ಆಕ್ಸೆಸ್ ಕಂಟ್ರೋಲ್ಡ್ ಹೈವೆ) 2023ರ ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

‘ಯೋಜನೆಯು ಪೂರ್ಣ ಗೊಳ್ಳುವುದಕ್ಕೆ ಮುಂಚೆ ವಾಹನಗಳಿಗೆ ಮುಕ್ತವಾಗಿದ್ದ ಹೆದ್ದಾರಿಯಲ್ಲಿ ಪಾದಚಾರಿಗಳು ರಸ್ತೆ ದಾಟುವುದೇ ದೊಡ್ಡ ಸವಾಲಾಗಿತ್ತು. ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲ ಗಮನಿಸಿ ನಿಗದಿತ ಸ್ಥಳಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಟೆಂಡರ್ ಕರೆದು, ಕೆಲವೆಡೆ ಕೆಲಸ ಶುರು ಮಾಡಲಾಗುತ್ತಿದೆ’ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ADVERTISEMENT

ಪ್ರತಿಭಟಿಸಿದ್ದ ಸ್ಥಳೀಯರು: ಹೆದ್ದಾರಿಯಲ್ಲಿ ವಾಹನಗಳ ಓಡಾಟ ಶುರುವಾದ ಬಳಿಕ ಎರಡೂ ಕಡೆ ಬೇಲಿ ಹಾಕಲಾಗಿದೆ. ಟೋಲ್ ಪಾವತಿಸುವ ವಾಹನಗಳನ್ನು ಬಿಟ್ಟರೆ ಬೇರೆ ವಾಹನಗಳಿಗೆ ಪ್ರವೇಶವಿಲ್ಲ. ಪಾದಚಾರಿಗಳು ರಸ್ತೆ ದಾಟಬೇಕಾದರೆ ಕನಿಷ್ಠ ಎರಡ್ಮೂರು ಕಿಲೋಮೀಟರ್ ದೂರ ಹೋಗಬೇಕು. ರಸ್ತೆ ದಾಟಲು ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ಆರಂಭದಲ್ಲಿ ಪ್ರತಿಭಟನೆ ನಡೆಸಿದ್ದರು.

‘ಕೂಗಳತೆ ದೂರದಲ್ಲಿರುವ ಹೆದ್ದಾರಿಯಾಚೆಗಿನ ಸ್ಥಳಕ್ಕೆ ಹೋಗಲು ಬಳಸಿಕೊಂಡು ಬರಬೇಕಿದೆ. ಈ ಭಾಗದಲ್ಲಿರುವ ಸಣ್ಣಪುಟ್ಟ ಕಾರ್ಖಾನೆಗಳಿಗೆ ನಿತ್ಯ ನೂರಾರು ಜನ ಗ್ರಾಮೀಣ ಭಾಗಗಳಿಂದ ಉದ್ಯೋಗಕ್ಕೆ ಬರುತ್ತಾರೆ. ಬಸ್ ಸೇರಿದಂತೆ ಇತರ ವಾಹನಗಳಲ್ಲಿ ಬಂದಿಳಿಯುವ ಅವರು ರಸ್ತೆ ದಾಟಲು ಇಂದಿಗೂ ಪರದಾಡುತ್ತಾರೆ’ ಎಂದು ಹೆದ್ದಾರಿ ಹಾದು ಹೋಗಿರುವ ಕಣಿಮಿಣಕಿ ಗ್ರಾಮದ ಮಂಜನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

118 ಕಿ.ಮೀ. ಉದ್ದ: ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಕುಂಬಳಗೋಡಿನಿಂದ ಆರಂಭವಾಗುವ 118 ಕಿ.ಮೀ. ಉದ್ದದ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ., ಮಂಡ್ಯದಲ್ಲಿ 58 ಕಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ. ಹಾದು ಹೋಗುತ್ತದೆ. ಪಟ್ಟಣ, ನಗರಗಳು ಹಾಗೂ ಪ್ರಮುಖ ಹಳ್ಳಿಗಳಿಗೆ ಸಂಪರ್ಕಕ್ಕೆ ಕೆಲವೆಡೆ ಮೇಲ್ಸೆತುವೆ ಇರುವುದನ್ನು ಬಿಟ್ಟರೆ ಪಾದಚಾರಿಗಳು ರಸ್ತೆ ದಾಟಲು ವ್ಯವಸ್ಥೆ ಇಲ್ಲ.

‘ಸ್ಥಳೀಯರ ಒತ್ತಾಯಕ್ಕೆ ಮಣಿದು ಶೇಷಗಿರಿಹಳ್ಳಿ ಬಳಿ ಆರಂಭದಲ್ಲಿ ಸ್ಥಳೀಯರು ರಸ್ತೆ ದಾಟುವುದಕ್ಕಾಗಿ ಕೆಳಸೇತುವೆ ನಿರ್ಮಾಣಕ್ಕೆ ಪ್ರಾಧಿಕಾರ ಕೈ ಹಾಕಿತ್ತು. ಆದರೆ, ಅರ್ಧಂಬರ್ಧ ಕಾಮಗಾರಿ ಮುಗಿಸಿ ಮತ್ತೆ ಅತ್ತ
ತಿರುಗಿ ನೋಡಲಿಲ್ಲ. ಇದರಿಂದಾಗಿ, ಸೇತುವೆ ಕೆಲಸ ನನೆಗುದಿಗೆ ಬಿದ್ದಿದೆ. ಅದನ್ನು ಪೂರ್ಣಗೊಳಿಸಿದ್ದರೆ ಸ್ಥಳೀಯರಿಗೆ ಅನುಕೂಲವಾಗುತ್ತಿತ್ತು’ ಎಂದು ಗ್ರಾಮದ ಯೋಗೇಶ್ ಹೇಳಿದರು.

ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ನಿರ್ಮಿಸಿರುವ ಬೇಲಿ ಮೂಲಕ ಹೆದ್ದಾರಿ ದಾಟಿದ ಮಹಿಳೆಯರು
ರಾಮನಗರ ತಾಲ್ಲೂಕಿನ ಕಣಮಿಣಕಿ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಹೆದ್ದಾರಿ ಪ್ರಾಧಿಕಾರ ನಿರ್ಮಿಸಲು ಮುಂದಾಗಿದ್ದ ಕೆಳ ಸೇತುವೆ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ
ಹೆದ್ದಾರಿ ಹಾದು ಹೋಗಿರುವ 3 ಜಿಲ್ಲೆಗಳ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲವಾಗುವ ಸ್ಥಳಗಳಲ್ಲಿ 24 ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ
ರಾಹುಲ್ ಗುಪ್ತ ಯೋಜನಾ ನಿರ್ದೇಶಕ ಬಿಎಂಎಸಿಎಚ್‌ ಮೈಸೂರು–ರಾಮನಗರ ವಿಭಾಗ

ಬೇಲಿ ಮುರಿದು ದಾಟುವ ಜನ

ಒಂದೂವರೆ ವರ್ಷದ ಹಿಂದೆ ಹೆದ್ದಾರಿ ಸಂಚಾರಕ್ಕೆ ಮುಕ್ತವಾದಾಗಿನಿಂದ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಲು ಸ್ಥಳೀಯರು ಹಾಗೂ ಉದ್ಯೋಗಿಗಳು ಪರದಾಡುತ್ತಿದ್ದಾರೆ. ರೈತರು ತಮ್ಮ ದನಕರುಗಳನ್ನು ಹೆದ್ದಾರಿಯಾಚೆ ಇರುವ ಜಮೀನಿಗೆ ಕರೆದೊಯ್ಯುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಹೆದ್ದಾರಿಯ ಎರಡೂ ಬದಿ ಅಳವಡಿಸಿರುವ ತಂತಿ ಬೇಲಿಯನ್ನು ಕತ್ತರಿಸಿ ರಸ್ತೆ ದಾಟಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.‘ಬೆಳಿಗ್ಗೆ ಮತ್ತು ಸಂಜೆ ಹೆದ್ದಾರಿ ದಾಟುವವರು ಹೆಚ್ಚು. ಅತಿ ವೇಗವಾಗಿ ಸಂಚರಿಸುವ ವಾಹನಗಳನ್ನು ಲೆಕ್ಕಿಸದೆ ಹೆದ್ದಾರಿ ದಾಟುವ ಉದ್ಯೋಗಿಗಳು ರೈತರು ಸೇರಿದಂತೆ ಸ್ಥಳೀಯರು ಅಪಘಾತಕ್ಕೀಡಾಗಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದರೆ ಉಳಿದವರು ಗಾಯಾಳುಗಳಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರದವರು ಆದಷ್ಟು ಬೇಗ ಪಾದಚಾರಿ ಮೇಲ್ಸೇತುವೆ ಪೂರ್ಣಗೊಳಿಸಬೇಕು’ ಎಂದು ತಾಲ್ಲೂಕಿನ ಮಂಚನಾಯಕನಹಳ್ಳಿಯ ಶಿವಕುಮಾರ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.