ADVERTISEMENT

ರಾಮನಗರ: 4,084 ನಕಲಿ ಕಾರ್ಮಿಕರ ಕಾರ್ಡ್ ರದ್ದು

ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರ ವಿರುದ್ಧ ಕಾರ್ಮಿಕ ಇಲಾಖೆ ಕಾರ್ಯಾಚರಣೆ

ಓದೇಶ ಸಕಲೇಶಪುರ
Published 9 ಅಕ್ಟೋಬರ್ 2024, 7:17 IST
Last Updated 9 ಅಕ್ಟೋಬರ್ 2024, 7:17 IST
ಎಚ್‌.ಆರ್. ನಾಗೇಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ, ರಾಮನಗರ
ಎಚ್‌.ಆರ್. ನಾಗೇಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ, ರಾಮನಗರ   

ರಾಮನಗರ: ಕಟ್ಟಡ ನಿರ್ಮಾಣ ಕಾರ್ಮಿಕರ ಹೆಸರಿನಲ್ಲಿ ಕಾರ್ಡ್ ಮಾಡಿಸಿಕೊಂಡು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಪಡೆಯುತ್ತಿರುವ ನಕಲಿ ಕಾರ್ಮಿಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಕಾರ್ಮಿಕ ಇಲಾಖೆಯು, ಜಿಲ್ಲೆಯಲ್ಲಿ ಇದುವರೆಗೆ 4,084 ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಿದೆ.

ಮಂಡಳಿಯಿಂದ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ, ಕಾರ್ಮಿಕರಲ್ಲದವರು ಸಹ ನಕಲಿ ದಾಖಲೆ ಸಲ್ಲಿಸಿ ಕಾರ್ಡ್ ಪಡೆದಿದ್ದಾರೆ. ಇದರಿಂದಾಗಿ ನೈಜ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ ಎಂದು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳು ದನಿ ಎತ್ತಿದ್ದವು. ಅಂತಹವರನ್ನು ಗುರುತಿಸಿ ಕಾರ್ಡ್ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದವು.

ಇಲಾಖೆಯಿಂದ ಅಭಿಯಾನ: ‘ನಕಲಿ ಕಾರ್ಡ್ ಹಾವಳಿ ಕುರಿತು ಸಂಘಟನೆಗಳು ಮಾಡಿದ್ದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆಯು, ಕಟ್ಟಡ ಕಾರ್ಮಿಕರಲ್ಲದವರ ಕಾರ್ಡ್ ರದ್ದುಗೊಳಿಸಲು ಕಳೆದ ವರ್ಷದಿಂದ ಬೋಗಸ್ ಕಾರ್ಡ್ ರದ್ದತಿ ಅಭಿಯಾನ ಶುರು ಮಾಡಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಎಚ್‌.ಎನ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಟ್ಟಡ ನಿರ್ಮಾಣ ಕೆಲಸ ಮಾಡುವ ಸುಮಾರು 20 ಬಗೆಯ ಕಾರ್ಮಿಕರ ಹಿತಕ್ಕಾಗಿಯೇ ಇರುವ ಮಂಡಳಿಯು ಅವರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಶಸ್ತ್ರಚಿಕಿತ್ಸೆಗೆ ಸಹಾಯಧನ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಧನ, ಲ್ಯಾಪ್‌ಟಾಪ್ ವಿತರಣೆ, ಮದುವೆ ಕಾರ್ಯಕ್ರಮಕ್ಕೆ ನೆರವು, ಕೆಲಸ ಮಾಡುವಾಗ ಅವಘಡ ಸಂಭವಿಸಿ ಗಾಯಗೊಂಡರೆ ಅಥವಾ ಮರಣ ಹೊಂದಿದರೆ ಪರಿಹಾರ ಸೇರಿದಂತೆ ಅವರ ಬದುಕಿಗೆ ಸಾಮಾಜಿಕ ಭದ್ರತೆ ಒದಗಿಸುವ ಸೌಲಭ್ಯಗಳನ್ನು ಮಂಡಳಿ ನೀಡುತ್ತಿದೆ’ ಎಂದು ಹೇಳಿದರು.

ಇಲಾಖೆಯಿಂದಲೇ ಸಾಫ್ಟ್‌ವೇರ್‌: ಹಿಂದೆ ಸೇವಾ ಸಿಂಧು ಪೋರ್ಟ‌ಲ್‌ನಲ್ಲಿ ಕಟ್ಟಡ ಕಾರ್ಮಿಕರು ನೋಂದಣಿಗೆ ಅರ್ಜಿ ಸಲ್ಲಿಸಬೇಕಿತ್ತು. ಈಗ ಕಾರ್ಮಿಕ ಇಲಾಖೆಗಾಗಿಯೇ ಒಂದು ವರ್ಷದ ಹಿಂದೆ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದು, ಅದರ ಮೂಲಕವೇ ನೋಂದಣಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಯಾರಾದರೂ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ ನಮ್ಮಲ್ಲಿರುವ ದತ್ತಾಂಶದಿಂದ ಪತ್ತೆಹಚ್ಚಿ ಅರ್ಜಿಯನ್ನು ತಡೆ ಹಿಡಿಯಲಾಗುತ್ತದೆ.

‘ಕಾರ್ಮಿಕರು ತಮ್ಮ ಬಳಿ ಇರುವ ಕಾರ್ಡ್ ಅನ್ನು ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ವರ್ಷದಲ್ಲಿ ಕನಿಷ್ಠ 90 ದಿನ ಕಟ್ಟಡ ನಿರ್ಮಾಣ ಕೆಲಸ ಮಾಡಿರುವುದರ ಹಾಗೂ ಕಟ್ಟಡದ ಮಾಲೀಕರಿಂದ ಸಂಬಳ ಪಡೆದಿರುವುದರ ಕುರಿತು ದಾಖಲೆ ಸಲ್ಲಿಸಬೇಕು. ಆಗ, ಅವರ ಕಾರ್ಡ್ ಅನ್ನು ನವೀಕರಣ ಮಾಡಲಾಗುತ್ತದೆ. ಇಲ್ಲದಿದ್ದರೆ ರದ್ದು ಮಾಡಲಾಗುತ್ತದೆ’ ಎಂದು ನಾಗೇಂದ್ರ ಹೇಳಿದರು.

ನಕಲಿ ದಾಖಲೆ ಕೊಟ್ಟು ಕಟ್ಟಡ ನಿರ್ಮಾಣ ಕಾರ್ಮಿಕರೆಂದು ನೋಂದಣಿಯಾಗಿ ಕಾರ್ಮಿಕ ಕಾರ್ಡ್ ಪಡೆದಿರುವವರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಕಾರ್ಡ್ ರದ್ದುಪಡಿಸಲಾಗುತ್ತಿದೆ
-ಎಚ್‌.ಆರ್. ನಾಗೇಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮನಗರ
ಕನಕಪುರ ತಾಲ್ಲೂಕಿನಲ್ಲೇ ಹೆಚ್ಚು‌
‘ಜಿಲ್ಲೆಯಲ್ಲಿ 53189 ನೋಂದಾಯಿತ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕ ಕಾರ್ಡ್‌ಗಳಿವೆ. ಸದ್ಯ ರದ್ದಾಗಿರುವ ಕಾರ್ಡ್‌ಗಳ ಪೈಕಿ ಕನಕಪುರ (ಹಾರೋಹಳ್ಳಿ ತಾಲ್ಲೂಕು ಒಳಗೊಂಡಂತೆ) ತಾಲ್ಲೂಕಿನಲ್ಲಿ ಅತಿ ಹೆಚ್ಚು 1510 ರದ್ದಾಗಿವೆ. ನಂತರ ರಾಮನಗರದಲ್ಲಿ 1137 ಮಾಗಡಿಯಲ್ಲಿ 967 ಹಾಗೂ ಚನ್ನಪಟ್ಟಣದಲ್ಲಿ 470 ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚಿ ರದ್ದು ಮಾಡಲಾಗಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್‌.ಆರ್. ನಾಗೇಂದ್ರ ಮಾಹಿತಿ ನೀಡಿದರು.

‘ಸ್ಥಳ ಭೇಟಿ ದಾಖಲೆ ಮರು ಪರಿಶೀಲನೆ’

‘ನಕಲಿ ದಾಖಲೆ ಸಲ್ಲಿಸಿ ಕಾರ್ಡ್ ಪಡೆದಿರುವವರ ವಿಳಾಸಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳೇ ಭೇಟಿ ನೀಡಿ ಅವರು ನೈಜ ಕಾರ್ಮಿಕರೇ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಅವರಿಗೆ ಕರೆ ಮಾಡಿ ವಿಚಾರಣೆ ಮಾಡುವ ಜೊತೆಗೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಮಾಹಿತಿ ಸಂಗ್ರಹಿಸುತ್ತೇವೆ. ಕಾರ್ಡ್ ನೋಂದಣಿ ಸಂದರ್ಭದಲ್ಲಿ ಕೊಟ್ಟಿರುವ ದಾಖಲೆಗಳನ್ನು ಪುನರ್ ಪರಿಶೀಲಿಸುತ್ತೇವೆ. ನಕಲಿ ಕಾರ್ಮಿಕ ಎಂಬುದು ಖಚಿತವಾದರೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅವರ ನೋಂದಣಿ ರದ್ದುಪಡಿಸುತ್ತೇವೆ. ಬಳಿಕ ಅವರಿಗೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಇಲಾಖೆಯ ರಾಮನಗರ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಪ್ರದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.