ADVERTISEMENT

'ಬಂಗಾರದ ಮನುಷ್ಯ' ಸಿನಿಮಾ ಪ್ರೇರಣೆ: ಹೋಟೆಲ್‌ ಬಿಟ್ಟು ಭೂತಾಯಿ ಕೈ ಹಿಡಿದ ನಾಗರಾಜು

ಬರಡನಹಳ್ಳಿ ಕೃಷ್ಣಮೂರ್ತಿ
Published 25 ಜುಲೈ 2024, 4:52 IST
Last Updated 25 ಜುಲೈ 2024, 4:52 IST
   

ಕನಕಪುರ: ವ್ಯವಸಾಯದಿಂದ ವಿಮುಖರಾಗುತ್ತಿರುವ ಈ ದಿನಗಳಲ್ಲಿ ಹೋಟೆಲ್‌ ಉದ್ಯಮಿಯೊಬ್ಬರು ಕೃಷಿ ಮಾಡುವ ಹಂಬಲದಿಂದ ಬರಡು ಭೂಮಿಯನ್ನು ನಳನಳಿಸುವಂತೆ ಮಾಡಿದ ಸಾಹಸಗಾಥೆ ಇದು.

ವ್ಯವಸಾಯ ಅನಿಶ್ಚಿತ ಪರಿಸ್ಥಿತಿಗೆ ಬಂದು ನಿಂತಿದೆ. ಅನೇಕರು ರಿಯಲ್‌ ಎಸ್ಟೇಟ್‌ ಏಜೆಂಟರಿಗೆ ಭೂಮಿ ಮಾರಿಕೊಂಡು ಲಾಭ ಮಾಡಿಕೊಳ್ಳುವ ಮನಸ್ಥಿತಿಗೂ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚೀರಣಕುಪ್ಪೆ ಗ್ರಾಮದ ಬಸವಗೌಡರ ಮಗ ಹೋಟೆಲ್ ನಾಗರಾಜು ಎಂಬುವರು ಕೃಷಿಯನ್ನೇ ನಂಬಿ ಯಶಸ್ವಿಯಾಗಿದ್ದಾರೆ.

ಬರಡು ಭೂಮಿಯನ್ನು ಬಂಗಾರ ಬೆಳೆಯುವ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಬದುಕು ಕಟ್ಟಿಕೊಂಡ ಡಾ‌.ರಾಜಕುಮಾರ್ ಅವರ ‘ಬಂಗಾರದ ಮನುಷ್ಯ’ ಸಿನಿಮಾದಿಂದ ಸ್ಫೂರ್ತಿ ಪಡೆದ ನಾಗರಾಜು, ಅದೇ ರೀತಿ ಬರಡು ಭೂಮಿ ಅಭಿವೃದ್ಧಿಪಡಿಸಿ, ಯಶಸ್ವಿ ಕೃಷಿಕ ಎನಿಸಿಕೊಂಡಿದ್ದಾರೆ.

ADVERTISEMENT

ಒಂದು ಕಾಲದಲ್ಲಿ ಹಳ್ಳ, ಕೊಳ್ಳ, ಕಲ್ಲಿನಿಂದ ಕುರುಚಲು ಕಾಡಿನಂತಿದ್ದ ಬರಡು ಭೂಮಿ ಇಂದು ಹಸಿರಿನಿಂದ ಕಂಗೊಳಿಸುವ ತೋಟವಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ಹೋಟೆಲ್ ಉದ್ಯಮ ನಡೆಸುತ್ತಿದ್ದ ನಾಗರಾಜು ಅವರು ತಂದೆಯಿಂದ ಬಂದ ಕೆರಳಾಳುಸಂದ್ರ ಗ್ರಾಮದ ಬಳಿಯ 16 ಎಕರೆ ಒಣ ಭೂಮಿ, ಕುರುಚಲು ಗುಡ್ಡ ಪ್ರದೇಶವನ್ ಐದು ವರ್ಷಗಳಿಂದ ಅಭಿವೃದ್ಧಿಪಡಿಸಿದ್ದಾರೆ. ಹಳ್ಳ, ಗುಡ್ಡ, ಕಲ್ಲುಗಳಿಂದ ಕೂಡಿದ ಕೃಷಿ ಮಾಡಲು ಯೋಗ್ಯವಲ್ಲದ ಭೂಮಿಯನ್ನು ಸಮತಟ್ಟು ಮಾಡಿದ್ದಾರೆ. ಇದೀಗ ಈ ಭೂಮಿ ಸಮೃದ್ಧ ಕೃಷಿ ಭೂಮಿಯಾಗಿ ನಳನಳಿಸುತ್ತಿದೆ.

ಜಮೀನಿನಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಕೆರೆ ನಿರ್ಮಿಸಿದ್ದಾರೆ. ನೀರು ಹರಿದು ಮುಂದೆ ವ್ಯರ್ಥವಾಗಿ ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದ ಮಳೆಗಾಲದಲ್ಲಿ ಬಿದ್ದ ನೀರು ಭೂಮಿಯಲ್ಲಿ ಇಂಗುತ್ತಿದೆ. ಕೆರೆಗಳಲ್ಲಿ ತುಂಬಿಕೊಂಡು ಅಂತರ್ಜಲ ವೃದ್ಧಿಯಾಗುತ್ತಿದೆ. ಕೊಳವೆ ಬಾವಿ ನೆಚ್ಚಿಕೊಳ್ಳುವುದು ಬೇಡವೆಂದು 5 ಕಿ.ಮೀ ದೂರದ ಅರ್ಕಾವತಿ ನದಿಯಿಂದ ಭೂಮಿಯ ಆಳದಲ್ಲಿ ಪೈಪು ಹೂತು ಜಮೀನಿಗೆ ನೀರು ಹರಿಸಿದ್ದಾರೆ.

ಜಮಿನಿಗೆ ಬೇಕಾಗುವಷ್ಟು ನೀರು ದೊರೆಯುತ್ತಿರುವುದರಿಂದ 16 ಎಕರೆ ಪ್ರದೇಶದಲ್ಲೂ ತೆಂಗು, ಮಾವು, ಅಡಕೆ, ತೇಗ, ಮಹಾಗನಿ, ಸಪೋಟ, ದಾಳಿಂಬೆ, ಹಲಸು, ಸೀಬೆ, ಸೀತಾಫಲ, ರಾಮಫಲ, ಹನುಮಫಲ, ಲಕ್ಷ್ಮಣಫಲ, ಜಮ್ಮು ನೇರಳೆ, ನೆಲ್ಲಿಕಾಯಿ ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡ ಬೆಳೆಸಿದ್ದಾರೆ. ಜಮೀನಿನ ಎಲ್ಲಿಯೂ ರಸಗೊಬ್ಬರ, ಕೀಟನಾಶಕದ ಸೋಂಕು ತಾಗಿಸಿಲ್ಲ. ಬರೀ ನಾಟಿಗೊಬ್ಬರದ ಘಮ ಆವರಿಸಿದೆ.  

ಮೊದಲ ಮೂರು ವರ್ಷ ಅಡಕೆ, ತೆಂಗಿನ ಜೊತೆಗೆ ಬಾಳೆ ಬೇಸಾಯ ಮಾಡಿ ಬಂದ ಆದಾಯವನ್ನು ಜಮೀನಿನ ಅಭಿವೃದ್ಧಿಗೆ ಬಳಸಿದ್ದಾರೆ. ಜಮೀನಿನ ಅಭಿವೃದ್ಧಿ ಪೂರ್ಣ ಪ್ರಮಾಣದಲ್ಲಿ ಮುಗಿದಿರುವುದರಿಂದ ಎರಡು ವರ್ಷಗಳಿಂದ ಅಡಕೆ, ತೆಂಗು ಮಾರಾಟ ಮಾಡುತ್ತಿದ್ದಾರೆ ಅಡಕೆ, ತೆಂಗಿನಿಂದ ಪ್ರತಿವರ್ಷ ₹10 ಲಕ್ಷ ವರಮಾನ ಬರುತ್ತಿದೆ.

ಜಮೀನಿನಲ್ಲಿ ಇದ್ದ ಬೃಹತ್ ಬಂಡೆ ಮೇಲೆ ಸುಂದರವಾದ ಮನೆ ನಿರ್ಮಿಸಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಕೃಷಿಯಲ್ಲಿ  ತೊಡಗಿಸಿಕೊಂಡಿದ್ದಾರೆ. ಜೊತೆಗೆ ತೋಟದಲ್ಲಿ ನಾಟಿ ಕುರಿ, ನಾಟಿ ಕೋಳಿ, ನಾಟಿ ಹಸು ಹಾಗೂ ಎತ್ತು ಸಾಕಿದ್ದಾರೆ. 

16 ಎಕರೆಯಲ್ಲಿ 3,500 ಅಡಕೆ, 800 ತೆಂಗು, ನೂರು ಬಟರ್ ಫ್ರೂಟ್, ನೂರು ಜಿಮ್ ನೇರಳೆ, 120 ವಿವಿಧ ಬಗೆಯ ಮಾವು, 200 ವಿವಿಧ ಜಾತಿ ಹಣ್ಣಿನ ಗಿಡ, 850 ಮಹಾಗನಿ ಹಾಗೂ 118 ಸಾಗುವಾನಿ ಮರಗಳಿವೆ. 

ಐದು ವರ್ಷಗಳ ಹಿಂದೆ ಕುರುಚಲು ಗಿಡ, ಮರ, ಬಂಡೆಗಳಿಂದ ಬರಡು ಭೂಮಿಯಾಗಿದ್ದ ಜಾಗ ನಳನಳಿಸುವ ತೋಟವಾಗಿ ಅರಳಿ ನಿಂತ ಮೇಲೆ ಇದನ್ನು ನೋಡಲು ಜನರು ಬರುತ್ತಿದ್ದಾರೆ. ನಾಗರಾಜು ಅವರಿಂದ ಸಲಹೆ ಪಡೆಯುತ್ತಿದ್ದಾರೆ.

ಭೂಮಿ ತಾಯಿ ನಂಬಿದವರ ಕೈ ಬಿಡಲ್ಲ

ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ಭೂಮಿಯನ್ನೇ ನಂಬಿ ಜೀವನ ಕಟ್ಟಿಕೊಂಡು ಬಂದಿದ್ದೇವೆ. ಅವರೆಲ್ಲರೂ ಖುಷಿಯಾಗಿದ್ದರು. ಆದರೆ ನಮ್ಮ ತಲೆಮಾರಿನ ಜನಕ್ಕೆ ಮಾತ್ರ ಕೃಷಿ ಬೇಡವಾಗಿದೆ. ನಮ್ಮ ಪೂರ್ವಜರು ಬದುಕು ಕಟ್ಟಿಕೊಂಡ ಕೃಷಿಯಲ್ಲಿಯೇ ನಾನೂ ನೆಮ್ಮದಿ ಕಾಣಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತ ಬಂದೆ. ಭೂಮಿ ಯಾವತ್ತೂ ನಂಬಿದವರ ಕೈ ಬಿಡುವುದಿಲ್ಲ ಎನ್ನುವುದು ನನ್ನ ಜೀವನದಲ್ಲಿ ನಿಜವಾಗಿದೆ. ಮೂರು ವರ್ಷ ಶ್ರಮಪಟ್ಟು ವ್ಯವಸಾಯ ಮಾಡಿದೆ. ಈಗ ನನ್ನ ಭೂಮಿ ನನನ್ನು ಸಲಹುತ್ತಿದೆ. ಭೂಮಿಗೆ ಕೀಟನಾಶಕವಾಗಲಿ, ರಸಗೊಬ್ಬರವನ್ನಾಗಲಿ ಬಳಸುತ್ತಿಲ್ಲ. ಭೂಮಿಗೆ ವಿಷ ಉಣಿಸುವ ಬದಲು ಅದಕ್ಕೂ ಅಮೃತವನ್ನುಣಿಸಿ, ನಾವೂ ಅಮೃತ ಪಡೆಯಬಹುದು ಎನ್ನುವ ಉದ್ದೇಶದಿಂದ ನಾಟಿ ಗೊಬ್ಬರ ಬಳಸುತ್ತಿದ್ದೇನೆ. ಆಗ ಮಾತ್ರ ಭೂಮಿಯೂ ಖುಷಿಯಾಗಿರುತ್ತದೆ, ನಾವೂ ನೆಮ್ಮದಿಯಿಂದ ಇರಬಹುದು.

-ಹೋಟೆಲ್ ನಾಗರಾಜು, ಕನಕಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.