ADVERTISEMENT

ಕನಕಪುರ: ಕಸ ಘಟಕ ಸ್ಥಾಪನೆಗೆ ರೈತರ ವಿರೋಧ

ಕಸ ವಿಲೇವಾರಿ ಜಾಗ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳಿಗೆ ಜನರ ತರಾಟೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:41 IST
Last Updated 22 ನವೆಂಬರ್ 2024, 4:41 IST
ಕನಕಪುರ ಬಾಪೂಜಿ ಕಾಲೊನಿ ಬಳಿ ನಿರ್ಮಾಣ ಮಾಡುತ್ತಿರುವ ಕಸ ವಿಲೇವಾರಿ ಘಟಕ ಸ್ಥಳ ಪರಿಶೀಲನೆ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು
ಕನಕಪುರ ಬಾಪೂಜಿ ಕಾಲೊನಿ ಬಳಿ ನಿರ್ಮಾಣ ಮಾಡುತ್ತಿರುವ ಕಸ ವಿಲೇವಾರಿ ಘಟಕ ಸ್ಥಳ ಪರಿಶೀಲನೆ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು    

ಕನಕಪುರ: ಕಸ ವಿಲೇವಾರಿ ಘಟಕಕ್ಕೆ ಮಂಜೂರಾಗಿದ್ದ 10 ಎಕರೆ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ನೀಡಲು ಬಂದಿದ್ದ ಅಧಿಕಾರಿಗಳನ್ನು ಸಾಮಾಜಿಕ ಹೋರಾಟಗಾರರು, ದಲಿತ ಮುಖಂಡರು ಹಾಗೂ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಸಾತನೂರು ಹೋಬಳಿ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪೂಜಿ ಕಾಲೊನಿ ಬಳಿ ಸೂರನಹಳ್ಳಿ ಸರ್ವೆ ನಂ.17 ಗೋಮಾಳ ಜಾಗದಲ್ಲಿ ಕಸ ವಿಲೇವಾರಿ ಘಟಕಕ್ಕೆ 10 ಎಕರೆ ಜಾಗ ಮಂಜೂರು ಮಾಡಿ ಕೊಡಲಾಗಿದೆ.

ಸಾರ್ವಜನಿಕರ ವಿರೋಧ ನಡುವೆಯೂ ಕಂದಾಯ ಇಲಾಖೆ ಜಾಗವನ್ನು ಕಬ್ಬಾಳು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದು ಆ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿ ಅಲ್ಲಿದ್ದ ಕಲ್ಲುಗಳನ್ನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಗಣಿ ಮತ್ತು ವಿಜ್ಞಾನ ಇಲಾಖೆಗೆ ದೂರು ನೀಡಿದ್ದರು.

ADVERTISEMENT

ದೂರಿನ ಅನ್ವಯ ಜಿಲ್ಲಾ ಪಂಚಾಯಿತಿ ಸಿಇಒ, ಪರಿಶೀಲನೆ ಮಾಡಿ ವರದಿ ನೀಡುವಂತೆ ನೀಡಿದ ಸೂಚನೆ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಸರ್ವೆ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರ ಭದ್ರತೆಯಲ್ಲಿ ದೂರುದಾರ ಸಮಕ್ಷಮದಲ್ಲಿ ಸ್ಥಳ ಮಹಜರು ನಡೆಸಲು ಗುರುವಾರ ಭೇಟಿ ಕೊಟ್ಟಿದ್ದರು.

ದೂರುದಾರ ರವಿಕುಮಾರ್ ಮಾತನಾಡಿ, ಕಸ ವಿಲೇವಾರಿ ಘಟಕ ಮಾಡಲು ಸಾರ್ವಜನಿಕರ ವಿರೋಧವಿಲ್ಲವೆಂದು ಸುಳ್ಳು ವರದಿ ತಯಾರಿಸಿ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಸ್ಥಳದಲ್ಲಿ ನೆರೆದಿದ್ದ ರೈತರು, ಸಾರ್ವಜನಿಕರು, ಸಂಘಟನೆಗಳ ಮುಖಂಡರು ಧ್ವನಿಗೂಡಿಸಿ ಈ ಜಾಗದಲ್ಲಿ ರೈತರು ಸಾಗುವಳಿ ಮಾಡಿ ಕೃಷಿ ಮಾಡುತ್ತಿದ್ದರು. ಅವರನ್ನು ಒಕ್ಕಲೆಬ್ಬಿಸಿ ಅಕ್ರಮವಾಗಿ ಕಸ ವಿಲೇವಾರಿ ಘಟಕ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸ ವಿಲೇವಾರಿ ಘಟಕಕ್ಕೆ ಈ ಹಿಂದೆ ಗೋಮಾಳ ಜಾಗದಲ್ಲಿ ಒಂದು ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಆದರೆ, ಆ ಜಾಗ ಬಳಕೆ ಮಾಡದೆ ಇಲ್ಲಿ ದೊಡ್ಡ ಬಂಡೆ ಇದ್ದು ಗಣಿಗಾರಿಕೆ ಮಾಡುವ ಉದ್ದೇಶದಿಂದ ಕಸ ವಿಲೇವಾರಿ ಘಟಕ ಮಾಡುವ ನೆಪದಲ್ಲಿ ಈ ಜಾಗವನ್ನು ಬಲಾಢ್ಯರು ಕಬಳಿಸುವ ಉದ್ದೇಶದಿಂದ ಇಲ್ಲಿ ಜಾಗ ಪಡೆದಿದ್ದಾರೆ ಎಂದು ದೂರಿದರು.

ತಹಶೀಲ್ದಾರ್ ಆರ್.ಮಂಜುನಾಥ್, ಜಿಲ್ಲಾ ಪಂಚಾಯಿತಿ ಎಇಇ ಚಂದ್ರಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿ.ಡಿ ಲಿಂಗರಾಜು, ಭೂ ವಿಜ್ಞಾನಿ ನಂದಿನಿ, ಇ.ಒ ಬೈರಪ್ಪ, ಉಪ ತಹಶೀಲ್ದಾರ್ ಪ್ರವೀಣ್ ಕುಮಾರ್, ಸರ್ವೆ ಸೂಪರ್ ವೈಸರ್ ಶಂಕರ್, ತಾಲ್ಲೂಕು ಸರ್ವೆಯರ್ ಮಹೇಶ್, ಪಿಡಿಒ ಲೋಕೇಶ್, ಸಿಪಿಐ ಕೃಷ್ಣ, ಪಿಎಸ್‌ಐ ಹರೀಶ್, ಆರ್‌ಎಫ್ಒ ರವಿ, ಡಿಆರ್‌ಎಫ್ ಮುತ್ತುನಾಯಕ ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲನಾ ವರದಿ ಸಿದ್ಧಪಡಿಸಿ ಸಹಿ ಪಡೆದುಕೊಂಡರು.

ಬಹುಜನ ಸಮಾಜ ರಾಜ್ಯ ಕಾರ್ಯದರ್ಶಿ ಗೌರಮ್ಮ, ಪಾರ್ವತಮ್ಮ, ಜಿಲ್ಲಾಧ್ಯಕ್ಷ ವೆಂಕಟಾಚಲ, ಯುವ ಘಟಕದ ಅಧ್ಯಕ್ಷ ಜಯಂತ್, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.