ರಾಮನಗರ: ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತವೆ ಎಂದು ಮಹಿಳೆಯೊಬ್ಬಳು ಪ್ರಿಯಕರನ ಜೊತೆಗೂಡಿ ವಾರದ ಅಂತರದಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೇ ಅಂತ್ಯಕ್ರಿಯೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಮಸಣದಲ್ಲಿ ಕಾವಲುಗಾರ ನೀಡಿದ ಸುಳಿವಿನ ಮೇರೆಗೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪತ್ತೆ ಹಚ್ಚಿದ ನಗರದ ಐಜೂರು ಠಾಣೆ ಪ್ರಭಾರ ಪಿಎಸ್ಐ ದುರಗಪ್ಪ ನೇತೃತ್ವದ ತಂಡವು ಮಕ್ಕಳ ಕೊಲೆ ರಹಸ್ಯ ಬೇಧಿಸಿ ಹಂತಕರನ್ನು ಬಂಧಿಸಿದ್ದಾರೆ.
ಎರಡು ವರ್ಷದ ಕಬೀಲ ಮತ್ತು 11 ತಿಂಗಳ ಕೂಸು ಕಬೀಲನ್ ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ಮಕ್ಕಳು. ಮಕ್ಕಳ ತಾಯಿ ಸ್ವೀಟಿ (24) ಹಾಗೂ ಆಕೆಯ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ (27) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸ್ವೀಟಿ ಬೆಂಗಳೂರಿನ ಬಿಬಿಎಂಪಿಯಲ್ಲಿ ಪೌರ ಕಾರ್ಮಿಕನಾಗಿರುವ ಟ್ಯಾನರಿ ರಸ್ತೆಯ ಎ.ಕೆ. ಕಾಲೊನಿಯ ಶಿವ ಎಂಬುವರನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದರು.
ಮನೆ ಕೆಲಸ ಮಾಡುತ್ತಿದ್ದ ಸ್ವೀಟಿ ಆರು ತಿಂಗಳಿಂದ ಕಾಲ್ ಸೆಂಟರ್ ಉದ್ಯೋಗಿ ಗ್ರೆಗೋರಿ ಫ್ರಾನ್ಸಿಸ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
ಸೆಪ್ಟೆಂಬರ್ 15ರಂದು ಪತಿ ಕೆಲಸಕ್ಕೆ ಹೋದಾಗ ಸ್ವೀಟಿ, ಮಕ್ಕಳನ್ನು ಕರೆದುಕೊಂಡು ಪ್ರಿಯಕರನೊಂದಿಗೆ ರಾಮನಗರಕ್ಕೆ ಬಂದಿದ್ದಳು. ಇಲ್ಲಿನ ಜಾಲಮಂಗಲ ರಸ್ತೆಯ ಮಂಜುನಾಥ ಬಡಾವಣೆಯಲ್ಲಿ ದಂಪತಿ ಎಂದು ಸುಳ್ಳು ಹೇಳಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದರು.
ಪತ್ನಿ ಮತ್ತು ಮಕ್ಕಳನ್ನು ಹುಡುಕಾಡಿದ್ದ ಶಿವ, ತನ್ನ ಪತ್ನಿ, ಮಕ್ಕಳು ಕಾಣೆಯಾಗಿದ್ದಾರೆ ಎಂದು ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆ.17ರಂದು ದೂರು ಕೊಟ್ಟಿದ್ದರು.
ಇತ್ತ ರಾಮನಗರದಲ್ಲಿ ನೆಲೆಸಿದ್ದ ಜೋಡಿ, ತಮ್ಮ ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಿವೆ ಎಂದು ಎರಡು ವರ್ಷದ ಕಬೀಲನನ್ನು ಅಕ್ಟೋಬರ್ 1ರಂದು ರಾತ್ರಿ ಹೊಡೆದು ಸಾಯಿಸಿದ್ದರು. ರಾಮನಗರದ ಎಪಿಎಂಸಿ ಬಳಿ ಮಸಣಕ್ಕೆ ಬೆಳಗ್ಗೆ ಶವ ತಂದಿದ್ದ ಜೋಡಿ, ಅನಾರೋಗ್ಯದಿಂದ ಮಗು ತೀರಿಕೊಂಡಿದೆ ಎಂದು ಕಾವಲುಗಾರನಿಗೆ ಸುಳ್ಳು ಹೇಳಿ ಅಂತ್ಯಕ್ರಿಯೆ ನಡೆಸಿದ್ದರು.
ಫೋಟೊ ತೆಗೆದಿದ್ದ ಕಾವಲುಗಾರ: ಅದಾದ ವಾರದ ಬಳಿಕ ಅ.7ರಂದು 11 ತಿಂಗಳ ಕೂಸು ಕಬೀಲನ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಶವವನ್ನು ಮತ್ತೇ ಅದೇ ಮಸಣಕ್ಕೆ ತಂದು ಮೊದಲ ಮಗುವನ್ನು ಹೂತಿದ್ದ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಿದ್ದರು.
ಈ ಬಾರಿ ‘ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಶಸ್ತ್ರಚಿಕಿತ್ಸೆ ಮಾಡಿಸಿದರೂ ಉಳಿಯಲಿಲ್ಲ’ ಎಂದು ಕಾವಲುಗಾರನಿಗೆ ಸುಳ್ಳು ಹೇಳಿದ್ದರು ಎಂದು ಪೊಲೀಸರು ತಿಳಿಸಿದರು.
ವಾರದ ಅಂತರದಲ್ಲಿಯೇ ಎರಡು ಮಕ್ಕಳು ಸಾವನ್ನಪ್ಪಿದ ಬಗ್ಗೆ ಅನುಮಾನಗೊಂಡಿದ್ದ ಮಸಣದ ಕಾವಲುಗಾರ ಮಗುವಿನ ಶವದ ಜೊತೆಗೆ ಆರೋಪಿಗಳ ಫೋಟೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಅದನ್ನು ಪೊಲೀಸರಿಗೆ ಕಳಿಸಿ ಕೊಟ್ಟಿದ್ದ. ಈ ಸುಳಿವು ಆಧರಿಸಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ ಎಂದು ಮಕ್ಕಳನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಸೋಮವಾರ ಮಕ್ಕಳಿಬ್ಬರ ಶವವನ್ನು ಹೊರ ತೆಗೆದು ಪರೀಕ್ಷೆ ನಡೆಸಲಾಗುವುದು. ಸದ್ಯ ಆರೋಪಿಗಳಿಬ್ಬರು ಪೊಲೀಸ್ ವಶದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.